ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸೋರುವ ಶಾಲೆಗಳ ಬಗ್ಗೆ ನಿರಂತರವಾಗಿ ವರದಿ ಪ್ರಕಟಿಸುತ್ತಿರುವ ಕನ್ನಡಪ್ರಭ ವರದಿ ಪರಿಣಾಮ ಜಿಪಂ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಸಭೆಯಲ್ಲಿ ಶಾಲೆಗಳ ಬಗ್ಗೆ ಬಹುದೊಡ್ಡ ಚರ್ಚೆಯೇ ನಡೆಯಿತು.ಕನ್ನಡಪ್ರಭ ವರದಿ ಪ್ರಕಟವಾಗುತ್ತಿರುವ ಹಿನ್ನೆಲೆ ಶಾಲಾ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿವೆ. ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಸಹ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಮಳೆಗಾಲ ಆರಂಭವಾಗುವುದರಿಂದ ವಿದ್ಯಾರ್ಥಿಗಳ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿರುವ ವಿವಿಧ ಶಾಲಾ-ಕಾಲೇಜು ಕೊಠಡಿಗಳು, ಅಂಗನವಾಡಿ ಕಟ್ಟಡಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಕಟ್ಟಡಗಳು ಸುಸ್ಥಿತಿಯಲ್ಲಿರುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ದುರಸ್ತಿಗೊಳಪಡುವ ಕಟ್ಟಡವನ್ನು ಸೂಕ್ತ ದುರಸ್ತಿಗೆ ಕ್ರಮ ವಹಿಸಬೇಕು. ದುರಸ್ತಿಗೆ ಯೋಗ್ಯವಲ್ಲದ ಕಟ್ಟಡಗಳನ್ನು ಡೆಮಾಲಿಶ್ ಮಾಡಲು ಕ್ರಮ ವಹಿಸಬೇಕು. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಸಚಿವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ದುರಸ್ತಿ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ:ವಿದ್ಯಾರ್ಥಿಗಳ, ಮಕ್ಕಳ ವಿಷಯವಾಗಿರುವುದರಿಂದ ಎಚ್ಚರಿಕೆಯಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಅಧೀನದ ಪಿಡಿಒ, ಜಿಪಂ ಅಭಿಯಂತರರೊಂದಿಗೆ ಇಂತಹ ಶಾಲಾ ಕೊಠಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಸೂಕ್ತ ಪರಿಶೀಲನೆ ನಡೆಸಬೇಕು. ಯಾವುದೇ ಅನಾಹುತಗಳಾಗದಂತೆ ಜಿಲ್ಲಾಧಿಕಾರಿಗಳು ಸಹ ತೀವ್ರ ನಿಗಾ ಇಡುವಂತೆ ಸಚಿವ ಎಂ.ಬಿ.ಪಾಟೀಲ್ ಆಡಳಿತವರ್ಗಕ್ಕೆ ಸೂಚಿಸಿದರು.
ದುರಸ್ತಿ ಶಾಲೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು:ಜಿಲ್ಲೆಯಲ್ಲಿ 121 ಶಾಲೆಗಳು ದುರಸ್ತಿ ಆಗಬೇಕಿದ್ದು, ಅವುಗಳ ಒಟ್ಟು ವೆಚ್ಚ ₹1331 ಕೋಟಿ ಆಗಲಿದೆ. ಅದರ ಎಸ್ಟಿಮೇಟ್ ಕಳುಹಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.
---ಕೋಟ್:
ಶಾಲೆಗಳು, ಅಂಗನವಾಡಿಗಳು, ಕಾಲೇಜುಗಳು ಎಲ್ಲವನ್ನೂ ಆಯಾ ಪಂಚಾಯತಿ ಮಟ್ಟದ ಅಧಿಕಾರಿಗಳಿಂದ ಹಿಡಿದು ಸಂಬಂಧಿತ ಎಲ್ಲ ಅಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ದುರಸ್ತಿ ಶಾಲೆಗಳು ಇದ್ದಲ್ಲಿ ಅಥವಾ ಚಾವಣಿ, ಗೋಡೆಗಳು ಕುಸಿಯುವ ಹಂತದಲ್ಲಿದ್ದರೆ ತತಕ್ಷಣ ಮಕ್ಕಳನ್ನು ಅಂತಹ ಶಾಲೆಗಳಿಂದ ಹತ್ತಿರದ ಶಾಲೆಗಳಿಗೆ, ಸೊಸೈಟಿಗಳಿಗೆ, ಭವನಗಳಿಗೆ ಸೇರಿದಂತೆ ಬೇರೆಡೆ ಖಾಲಿ ಇರುವ ಸರ್ಕಾರಿ ಕಟ್ಟಡಗಳಿಗೆ ಶಿಫ್ಟ್ ಮಾಡಬೇಕು. ಯಾವುದೂ ಇಲ್ಲದಿದ್ದರೆ ಖಾಸಗಿ ಕಟ್ಟಡಗಳಲ್ಲಾದರೂ ಸ್ಥಳಾಂತರಿಸಿ, ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.-ಎಂ.ಬಿ.ಪಾಟೀಲ್, ಉಸ್ತುವಾರಿ ಸಚಿವ.