ಕರಗ ಸಂಚಾರ: ಐತಿಹಾಸಿಕ ಮಡಿಕೇರಿ ದಸರಾ ಆರಂಭ

| Published : Oct 04 2024, 01:08 AM IST

ಸಾರಾಂಶ

ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ನಗರ ಪ್ರದಕ್ಷಿಣೆ ಆರಂಭಿಸುವ ಮೂಲಕ ‘ಮಡಿಕೇರಿ ದಸರಾ’ಗೆ ಗುರುವಾರ ಚಾಲನೆ ದೊರೆಯಿತು.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ನಗರ ಪ್ರದಕ್ಷಿಣೆ ಆರಂಭಿಸುವ ಮೂಲಕ ‘ಮಡಿಕೇರಿ ದಸರಾ’ಗೆ ಗುರುವಾರ ಚಾಲನೆ ದೊರೆಯಿತು.

ನಗರದ ಪಂಪಿನ ಕೆರೆಯ ಬಳಿ ಮಡಿಕೇರಿ ನಗರ ದಸರಾ ಸಮಿತಿ, ಕರಗ ಸಮಿತಿ, ದಸರಾ ಉಪ ಸಮಿತಿಗಳು, ದಶಮಂಟಪ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕ ಪ್ರಮುಖರು, ಜನಪ್ರತಿನಿಧಿಗಳು, ಅಧಿಕಾರಿಗಳು ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ 6 ಸುಮಾರಿಗೆ ಪೂಜೆ ಸಲ್ಲಿಸಿದರು. ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಡಿತು.

ಕರಗಗಳ ಸಂಚಾರ ಆರಂಭವಾಗುತ್ತಿದ್ದಂತೆ ಭಕ್ತರು ಶಕ್ತಿ ದೇವತೆಗಳ ಕರಗಳಿಗೆ ಆರತಿ ಬೆಳಗಿದರು. ಮಹಿಳೆಯರು ಕಳಸ ಹಿಡಿದು ಸಾಗಿದರು. ಕರಗ ಸಂಚರಿಸುವ ರಸ್ತೆಯಲ್ಲಿ ರಂಗೋಲಿ ಸ್ಪರ್ಧೆ ಕೂಡ ಆಯೋಜಿಸಲಾಗಿತ್ತು. ರಸ್ತೆಯುದ್ದಕ್ಕೂ ಮಹಿಳೆಯರು ಚುಕ್ಕಿ, ಪುಷ್ಪ ರಂಗೋಲಿಗಳನ್ನು ರಚಿಸಿ ಗಮನ ಸೆಳೆದರು.

ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯನ್ನು ಒಳಗೊಂಡ ನಗರದ ರಾಜಾಸೀಟು ಬಳಿಯ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ವ್ರತಧಾರಿ ಪಿ.ಪಿ.ಚಾಮಿ, ಗೌಳಿಬೀದಿಯ ಶ್ರೀ ಕಂಚಿಕಾಮಾಕ್ಷಿ ಕರಗವನ್ನು ಉಮೇಶ್ ಪಿ.ಸಿ. ನಗರಸಭೆ ಬಳಿಯ ಶ್ರೀ ದಂಡಿನ ಮಾರಿಯಮ್ಮ ಕರಗವನ್ನು ಜಿ.ಎ.ಉಮೇಶ್ ಮತ್ತು ಪೆನ್ಶನ್ ಲೇನ್ ನ ಶ್ರೀ ಕೋಟೆ ಮಾರಿಯಮ್ಮ ಕರಗವನ್ನು ಅನೀಶ್ ಹೊರುವ ಮೂಲಕ ಕರಗ ಮೆರವಣಿಗೆ ಆರಂಭಿಸಿದರು.

ನವರಾತ್ರಿ ಉತ್ಸವದ ಆರಂಭದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ನಾಲ್ಕುಶಕ್ತಿ ದೇವತೆಗಳ ದೇವಸ್ಥಾನಗಳಿಂದ ಕರಗ ಹೊರುವ ವ್ರತಧಾರಿಗಳೊಂದಿಗೆ ದೇವಾಲಯ ಸಮಿತಿಯವರು ಮಂಗಳವಾದ್ಯ ಸಹಿತ ಕರಗ ನಿರ್ಮಾಣಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಹೊತ್ತು ಮೆರವಣಿಗೆಯ ಮೂಲಕ ಬನ್ನಿ ಮಂಟಪಕ್ಕೆ ತೆರಳಿದರು. ಅಗತ್ಯ ಪೂಜಾ ವಿಧಿ-ವಿಧಾನಗಳೊಂದಿಗೆ ಅತ್ಯಾಕರ್ಷಕವಾಗಿ ಕರಗಗಳನ್ನು ಕಟ್ಟಿ ಹೂವುಗಳಿಂದ ಅಲಂಕರಿಸಿ ಸಂಜೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

ಪಂಪಿನ ಕೆರೆ ಆವರಣದಿಂದ ಹೊರ ಬಂದ ನಾಲ್ಕು ಕರಗಗಳ ಮೆರವಣಿಗೆಗೆ ದಸರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಈಡುಗಾಯಿ ಒಡೆಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ವಾದ್ಯಗೋಷ್ಠಿ ಮೆರುಗು:

ಪಂಪಿನಕೆರೆ ಬಳಿಯಿಂದ ಹೊರಟ ನಾಲ್ಕು ಕರಗಗಳು ಮಹದೇವಪೇಟೆಯ ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿದ ಬಳಿಕ ಸಂಪ್ರದಾಯದಂತೆ ಪೇಟೆ ಶ್ರೀ ರಾಮಮಂದಿರ ತಲುಪಿ, ಅಲ್ಲಿಯೂ ಕರಗಗಳಿಗೆ ಪೂಜೆ ಸಲ್ಲಿಸಿದ ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು. ಕರಗಗಳ ಮುಂದೆ ವಾದ್ಯಗೋಷ್ಠಿ ತಂಡಗಳು ಮೆರುಗು ನೀಡಿತು.

ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ, ಸಂಚಾಲಕರಾದ ತೆನ್ನೀರ ಮೈನಾ, ದಶಮಂಟಪ ಸಮಿತಿ ಅಧ್ಯಕ್ಷರಾದ ಜಗದೀಶ್, ಸ್ವಾಗತ ಸಮಿತಿ‌ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ವೇದಿಕೆ ಸಮಿತಿ ಅಧ್ಯಕ್ಷ ಕನ್ನಂಡ ಸವಿತಾ, ಗೌರವ ಸಲಹೆಗಾರ ಜಿ.ಚಿದ್ವಿಲಾಸ್, ಖಜಾಂಚಿ ಅರುಣ್ ಶೆಟ್ಟಿ, ಪ್ರಮುಖರಾದ ಟಿ.ಪಿ.ರಮೇಶ್, ಪೌರಾಯುಕ್ತ ಎಚ್.ಆರ್.ರಮೇಶ್, ನಗರಸಭಾ ಸದಸ್ಯರು, ಇತರರು ಇದ್ದರು.

...............

ರಾಜರ ಕಾಲದ ಇತಿಹಾಸಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಸುಮಾರು 200ಕ್ಕೂ ಅಧಿಕ ವರ್ಷ ಇತಿಹಾಸವಿದೆ. ಕೊಡಗಿನಲ್ಲಿ ರಾಜರ ಆಳ್ವಿಕೆಯ ಕಾಲದಲ್ಲಿ ಮಡಿಕೇರಿ ಜನರನ್ನು ಸಾಂಕ್ರಾಮಿಕ ರೋಗವೊಂದು ಕಾಡಿತ್ತು. ಇದರಿಂದ ಅಪಾರ ಸಾವು ನೋವು ಉಂಟಾಗಿತ್ತು. ಈ ಸಂದರ್ಭ ರಾಜರು ನಗರದ ನಾಲ್ಕು ಶಕ್ತಿ ದೇವೆತಗಳನ್ನು ಮಡಿಕೇರಿಯಲ್ಲಿ ಪ್ರತಿಷ್ಠಾಪಿಸಿ ಕರಗ ಹೊರಡಿಸಿ ಪೂಜಿಸುತ್ತಿದ್ದರು. ಈ ದೇವತೆಗಳ ಕರಗಗಳು ನಗರ ಪ್ರದಕ್ಷಿಣ ನಡೆಸಿದ ನಂತರ ಸಾಂಕ್ರಾಮಿಕ ರೋಗ ಮಾಯವಾಯಿತು ಎಂಬ ಐತಿಹ್ಯವಿದೆ. ಅಂದಿನಿಂದ ಪ್ರತಿ ವರ್ಷ ಮಡಿಕೇರಿಯಲ್ಲಿ ದಸರಾ ಆಚರಿಸಲಾಗುತ್ತದೆ.

...........................

ಕರಗ ಸಂಚಾರ ಆರಂಭದ ಮೂಲಕ ಮಡಿಕೇರಿ ದಸರಾಗೆ ಚಾಲನೆ ನೀಡಲಾಗುತ್ತದೆ. ರಾಜರ ಕಾಲದಿಂದ ಈ ಉತ್ಸವ ನಡೆಯುತ್ತಿದೆ. ಸಾಂಪ್ರದಾಯಿಕವಾಗಿ ಇಂದಿಗೂ ಕೂಡ ನಾವು ಕರಗ ಹೊರುವ ಮೂಲಕ ದಸರಾ ಆಚರಿಸಿಕೊಂಡು ಬರುತ್ತಿದ್ದೇವೆ. ನಾಡಿಗೆ ಯಾವುದೇ ತೊಂದರೆ ಬಾರದಂತೆ ನಾವು ಆರಾಧನೆ ಮಾಡುತ್ತಿದ್ದೇವೆ.

-ಅನೀಶ್, ಕರಗ ವ್ರತಧಾರಿ ಕಂಚಿ ಕಾಮಾಕ್ಷಿ ದೇವಾಲಯ.

........................

ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಸರ್ಕಾರ ರು. 1.5 ಕೋಟಿ ಅನುದಾನ ನೀಡಿದೆ. ಈಗಾಗಲೇ ಕರಗ ಉತ್ಸವ ಮೂಲಕ ದಸರಾ ಶುಭಾರಂಭಗೊಂಡಿದ್ದು, ಕಳೆದ ಬಾರಿಗಿಂತ ಈ ಬಾರಿ ಮಡಿಕೇರಿ ದಸರಾ ಅದ್ಭುತವಾಗಿರಲಿದೆ. ದಸರಾ ಕಾರ್ಯಕ್ರಮಗಳಿಗೆ ವಿವಿಧ ಸಚಿವರು ಕೂಡ ಆಗಮಿಸಲಿದ್ದಾರೆ.

-ಡಾ. ಮಂತರ್ ಗೌಡ, ಮಡಿಕೇರಿ ಶಾಸಕ.