ಸ್ವಯಂ ರಕ್ಷಣೆಗೆ ಕರಾಟೆ ಕಲೆ ಸಹಕಾರಿ: ರೇಣುಕಾಚಾರ್ಯ

| Published : Jun 04 2024, 01:30 AM IST / Updated: Jun 04 2024, 11:17 AM IST

ಸ್ವಯಂ ರಕ್ಷಣೆಗೆ ಕರಾಟೆ ಕಲೆ ಸಹಕಾರಿ: ರೇಣುಕಾಚಾರ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕರಾಟೆ ವಿದ್ಯಾರ್ಥಿಗಳಲ್ಲಿ ರಕ್ಷಣೆಯ ಮೂಲಜ್ಞಾನ ನೀಡುವುದಲ್ಲದೇ, ಪಠ್ಯದ ಜೊತೆಗೆ ಮಕ್ಕಳಲ್ಲಿ ಬೌದ್ಧಿಕ, ಶಾರೀರಿಕ ಸಾಮರ್ಥ್ಯವನ್ನೂ ಹೆಚ್ಚುಸುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

 ಹೊನ್ನಾಳಿ :  ಕರಾಟೆ ವಿದ್ಯಾರ್ಥಿಗಳಲ್ಲಿ ರಕ್ಷಣೆಯ ಮೂಲಜ್ಞಾನ ನೀಡುವುದಲ್ಲದೇ, ಪಠ್ಯದ ಜೊತೆಗೆ ಮಕ್ಕಳಲ್ಲಿ ಬೌದ್ಧಿಕ, ಶಾರೀರಿಕ ಸಾಮರ್ಥ್ಯವನ್ನೂ ಹೆಚ್ಚುಸುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ದ್ವಿತೀಯ ಸ್ಥಾನ ಗಳಿಸಿ, ಬೆಳ್ಳಿ ಪದಕ ಪಡೆದ ಹೊನ್ನಾಳಿ ಪಟ್ಟಣದ ಲಕ್ಷ್ಮಿಕಾಂತ್ ಹಾಗೂ ಸಿದ್ಧಾರ್ಥ್ ಅವರು ಭಾನುವಾರ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಸ್ವಾಗತಿಸಿ ಅವರು ಮಾತನಾಡಿದರು.

ಕರಾಟೆ ಶಿಸ್ತನ್ನು ಕಲಿಸುವುದು. ಅನ್ಯರಿಂದ ಆಕ್ರಮಣ ನಡೆದಾಗ ಕರಾಟೆ ಕಲೆಯಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುವುದು. ಜತೆಗೆ ಇತರರನ್ನು ರಕ್ಷಣೆ ಮಾಡಬಹುದು. ವಿಶೇಷವಾಗಿ ಕರಾಟೆಯನ್ನು ಹೆಣ್ಣುಮಕ್ಕಳಿಗೆ ಕಲಿಸಬೇಕಾಗಿದೆ. ವೇದ, ಉಪನಿಷತ್ತು ಹಾಗೂ ಮಹಾಕಾವ್ಯಗಳಲ್ಲಿ ಉಲ್ಲೇಖಿಸಿರುವಂತೆ ಕರಾಟೆ ಭಾರತೀಯರ ಜನಪ್ರಿಯವಾದ ಕಲೆ. ಇದು ಆತ್ಮರಕ್ಷಣೆ ಕಲೆಯೂ ಹೌದು. ಯುದ್ಧ ಕೌಶಲ್ಯದ ಕಲೆಯೂ ಹೌದು. ಅದಕ್ಕಾಗಿ ಪ್ರತಿಯೊಬ್ಬರು ಕರಾಟೆಯನ್ನು ಕಲಿಯಬೇಕು ಹಾಗೂ ಪ್ರೋತ್ಸಾಹಿಸಬೇಕು ಎಂದರು.

ಕರಾಟೆ ತರಬೇತುದಾರ ಅಂಬೇಡ್ಕರ್ ಮಾತನಾಡಿ, ದೇಶದಲ್ಲಿ ಈ ಕಲೆಯನ್ನು ತಲತಲಾಂತರದಿಂದಲೂ ಹಿರಿಯರು ಪೋಷಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿಗೆ ಹೆಣ್ಣುಮಕ್ಕಳು ಸಹ ಈ ಕರಾಟೆ ಕಲೆ ಕಲಿತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರತಿ ಮಗುವು ಕರಾಟೆ ಕಲಿತರೆ ಕನಿಷ್ಠ ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳುವಷ್ಟು ಸಮರ್ಥರಾಗುತ್ತಾರೆ ಎಂದರು.

ಕರ್ನಾಟಕದಿಂದ 70 ಕರಾಟೆ ಕ್ರೀಡಾಪಟುಗಳು ಆಗಮಿಸಿದ್ದರು. ಇವರಲ್ಲಿ ಲಕ್ಷ್ಮೀಕಾಂತ್ ಹಾಗೂ ಸಿದ್ಧಾರ್ಥ್ ದ್ವಿತೀಯ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 6ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದರೆ ಭಾರತ ಸರ್ಕಾರ ₹10 ಸಾವಿರ ನಗದು ಪ್ರೋತ್ಸಾಹ ನೀಡುತ್ತದೆ ಎಂದರು.

ಸಾಧನೆ ಮೆರೆದ ಕರಾಟೆಪಟುಗಳ ಪೋಷಕರರಾದ ಸರಳಿಮನೆ ಮಂಜಪ್ಪ, ದೊರೆಸ್ವಾಮಿ, ಮುಖಂಡರಾದ ಕುಬೇಂದ್ರಪ್ಪ, ರಾಜು ಸರಳಿಮನೆ, ಮಂಜುನಾಥ್, ಹಳದಪ್ಪ, ಬಿ.ಬಿ.ಚಂದ್ರಪ್ಪ ಹಾಗೂ ಇತರರು ಇದ್ದರು.