ಕರವಲೆ ದೇಗುಲ: ಹಿರಣ್ಯ ಕಶ್ಯಪು ವಧೆ ಮಂಟಪ: ರು.22 ಲಕ್ಷ ವೆಚ್ಚದಲ್ಲಿ ಮಂಟಪ ನಿರ್ಮಾಣ

| Published : Oct 20 2023, 01:00 AM IST

ಕರವಲೆ ದೇಗುಲ: ಹಿರಣ್ಯ ಕಶ್ಯಪು ವಧೆ ಮಂಟಪ: ರು.22 ಲಕ್ಷ ವೆಚ್ಚದಲ್ಲಿ ಮಂಟಪ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ದೇವಾಲಯ ದಸರಾ ಸಮಿತಿ ಅಧ್ಯಕ್ಷರಾಗಿ ಗಜೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪದ ಕಥೆಯನ್ನು ಸಮಿತಿಯೇ ನಿರ್ದೇಶಿಸಿದೆ. ಬೆಂಗಳೂರು ಮೂರ್ತಿ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದೆ. ದಿಂಡಿಗಲ್ ಲೈಟಿಂಗ್ ಆರ್ಚ್ ಲೈಟಿಂಗ್ ಬೋರ್ಡ್ ಸಜ್ಜು ಮಾಡಲಿದೆ. ಮಡಿಕೇರಿಯ ಅನಿಲ್ ಸ್ಕಂದ ಸ್ಟುಡಿಯೋ ಧ್ವನಿರ್ಧಕ ವ್ಯವಸ್ಥೆ ಮಾಡಲಿದೆ.
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ 28ನೇ ವರ್ಷದ ದಸರಾ ಸಂಭ್ರಮದಲ್ಲಿರುವ ನಗರದ ಶ್ರೀ ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ದಸರಾ ಸಮಿತಿಯಿಂದ ಈ ಬಾರಿ ಉಗ್ರ ನರಸಿಂಹನಿಂದ ಹಿರಣ್ಯಕಶ್ಯಪು ವಧೆ ಕಥಾ ಸಾರಾಂಶ ಅಳವಡಿಸಲಾಗಿದ್ದು, ಮಂಟಪಕ್ಕೆ ಸುಮಾರು ರು.22 ಲಕ್ಷ ವೆಚ್ಚ ಮಾಡಲಾಗುತ್ತಿದೆ. ದೇವಾಲಯ ದಸರಾ ಸಮಿತಿ ಅಧ್ಯಕ್ಷರಾಗಿ ಗಜೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಟಪದ ಕಥೆಯನ್ನು ಸಮಿತಿಯೇ ನಿರ್ದೇಶಿಸಿದೆ. ಬೆಂಗಳೂರು ಮೂರ್ತಿ ಸ್ಟುಡಿಯೋ ಸೆಟ್ಟಿಂಗ್ ಮಾಡಲಿದೆ. ದಿಂಡಿಗಲ್ ಲೈಟಿಂಗ್ ಆರ್ಚ್ ಲೈಟಿಂಗ್ ಬೋರ್ಡ್ ಸಜ್ಜು ಮಾಡಲಿದೆ. ಮಡಿಕೇರಿಯ ಅನಿಲ್ ಸ್ಕಂದ ಸ್ಟುಡಿಯೋ ಧ್ವನಿರ್ಧಕ ವ್ಯವಸ್ಥೆ ಮಾಡಲಿದೆ. ಮಂಟಪದಲ್ಲಿ ಒಟ್ಟು 21 ಕಲಾಕೃತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಮಿತಿಯಲ್ಲಿ 350 ಮಂದಿ ಸದಸ್ಯರಿದ್ದಾರೆ. ಮಣಿ ಮತ್ತು ಗುರು ತಂಡ ಪ್ಲಾಟ್ ಫಾರ್ಮ್ ನಿರ್ವಹಿಸಲಿದೆ. ಈ ಬಾರಿ ಮಂಟಪ ಪ್ರಶಸ್ತಿಗೆ ಪೈಪೋಟಿ ನೀಡಲಿದೆ ಎಂದು ಸಮಿತಿ ಪ್ರಮುಖರು ತಿಳಿಸಿದ್ದಾರೆ. ದೇವಾಲಯದ ಇತಿಹಾಸ: ಮಹಿಷ ಮರ್ಧಿನಿ ದೇವಿಯು ಕೊಡಗಿನಲ್ಲಿಯೇ ಪ್ರಸಿದ್ಧವಾಗಿರುವಂತಹ ದೇವತೆ. ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಿಗೂ ಮತ್ತು ಮಹಿಷ ಮರ್ಧಿನಿ ದೇವಿಗೂ ನಿಕಟ ಸಂಬಂಧವಿದೆ ಎಂಬುದು ಪ್ರತೀತಿ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿರುವ ಭಗವತಿ ನಗರದಲ್ಲಿ ದೇಗುಲವಿದೆ. ಶ್ರೀ ಮಹಿಷ ಮರ್ಧಿನಿ ಮತ್ತು ಭಗವತಿ ತಾಯಿ ಇಬ್ಬರೂ ಜೊತೆಯಲ್ಲಿ ಸ್ಥಾಪಿತರಾಗಿದ್ದಾರೆ. ಇಲ್ಲಿನ ಗ್ರಾಮಸ್ಥರ ಹೇಳಿಕೆಯ ಪ್ರಕಾರ ಈ ದೇಗುಲದಲ್ಲಿ ಈ ಹಿಂದೆ ಮಹಿಷಮರ್ಧಿನಿ ದೇಗುಲ ಮಾತ್ರವಿದ್ದು, ಎರಡು ಶತಮಾನಗಳ ಹಿಂದೆ ಕರವಲೆ ಬಾಡಗದ ಎರಡು ಕುಟುಂಬಸ್ಥರು ಗಾಳಿಬೀಡು ಎಂಬಲ್ಲಿದ್ದ ಭಗವತಿ ದೇವತೆಯನ್ನು ರಾತ್ರಿಯ ವೇಳೆ ತಂದು ಮಹಿಷ ಮರ್ಧಿನಿ ದೇಗುಲದಲ್ಲಿ ಅಂದರೆ ಮಹಿಷ ಮರ್ಧಿನಿ ದೇವಿಯ ವಿಗ್ರವಿರುವ ಎಡ ಭಾಗದಲ್ಲಿ ಭಗವತಿ ದೇವಿಯನ್ನು ಪ್ರತಿಷ್ಠಾಪಿಸಿದರು. ವರ್ಷಂಪ್ರತಿ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆಯುತ್ತದೆ. ಈ ಸಂದರ್ಭ ದೇವಿಯ ವಿಗ್ರಹವನ್ನು ಬ್ರಾಹ್ಮಣ ಅರ್ಚಕರ ತಲೆಯ ಮೇಲೆ ಹೊತ್ತು ನಾಡಿನವರ ದುಡಿಕೊಟ್ಟು ಪಾಟ್ ಹಾಗೂ ಚೆಂಡೆವಾದ್ಯದೊಂದಿಗೆ ಪ್ರದಕ್ಷಿಣೆ ಬರಲಾಗುತ್ತದೆ. ಮಾರನೇಯ ದಿನ ನಾಡಿನ ಭಕ್ತಾದಿಗಳಿಂದ ಎತ್ತುಪೋರಾಟದೊಂದಿಗೆ ದೊಡ್ಡ ಹಬ್ಬ ಪ್ರಾರಂಭವಾಗುತ್ತದೆ. ಈ ಸ್ಥಳದ ವಿಶೇಷ ಎಂದರೆ ಭಗವತಿ ದೇವಿಯು ಗಾಳಿಬೀಡಿನಿಂದ ಬಂದ ಕಾರಣ ಭಗವತಿ ಆದಿ ಸ್ಥಳದಿಂದ ಹರಿದು ಬರುವಂತಹ ನೀರಿನಿಂದಲೇ ತಾಯಿಯ ಜಳಕವಾಗಬೇಕೆಂಬುದು ಪ್ರತೀತಿ. ದೇವಾಲಯದಲ್ಲಿ ಅಯ್ಯಪ್ಪ, ಸುಬ್ರಮಣ್ಯ, ಅಜ್ಜಪ್ಪ, ವಿಷ್ಣು ಮೂರ್ತಿ, ಪಡುಮಟ್ಟೆ ಚಾಮುಂಡಿ, ಭದ್ರಕಾಳಿ, ವೈತಲಪ್ಪ ಗುಡಿಗಳಿವೆ. ಸುಮಾರು 28 ವರ್ಷಗಳಿಂದ ಮಡಿಕೇರಿ ದಸರಾ ಮಹೋತ್ಸವದಲ್ಲಿ ದಶಮಂಟಪಗಳಲ್ಲಿ 10ನೇ ಮಂಟಪವಾಗಿ ದಸರಾ ಮೆರವಣಿಗೆಯಲ್ಲಿ ಈ ವರ್ಷವೂ ಪಾಲ್ಗೊಳ್ಳುತ್ತಿದೆ.