ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾದ ಅನ್ಯಾಯ : ಕೆಪಿಎಸ್ಸಿ ವಿರುದ್ಧ ಕರವೇ ಅಹೋರಾತ್ರಿ ಧರಣಿ

| N/A | Published : Mar 11 2025, 12:46 AM IST / Updated: Mar 11 2025, 10:30 AM IST

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾದ ಅನ್ಯಾಯ : ಕೆಪಿಎಸ್ಸಿ ವಿರುದ್ಧ ಕರವೇ ಅಹೋರಾತ್ರಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ಕೆಪಿಎಸ್‌ಸಿ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ದೋಷದಿಂದಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾದ ಅನ್ಯಾಯ ಖಂಡಿಸಿ, ಮರು ಪರೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಹೋರಾತ್ರಿ ಧರಣಿ ನಡೆಸಿದೆ.

 ಬೆಂಗಳೂರು : 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ಕೆಪಿಎಸ್‌ಸಿ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ದೋಷದಿಂದಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾದ ಅನ್ಯಾಯ ಖಂಡಿಸಿ, ಮರು ಪರೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಹೋರಾತ್ರಿ ಧರಣಿ ನಡೆಸಿದೆ. ‘ಸರ್ಕಾರ ಸ್ಪಂದಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ’ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಎಚ್ಚರಿಸಿದ್ದಾರೆ.

ಸೋಮವಾರ ಬೆಳಗ್ಗೆಯಿಂದ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಹಿರಿಯ ಸಾಹಿತಿಗಳು, ಚಲನಚಿತ್ರ ನಟರು, ಕೆಪಿಎಸ್‌ಸಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದಾರೆ. ರಾತ್ರಿ ಧರಣಿ ಮುಂದುವರಿಸಿದ ಹೋರಾಟನಿರತರು ಮರು ಪರೀಕ್ಷೆಯ ಅಧಿಸೂಚನೆಗೆ ಒತ್ತಾಯಿಸಿದ್ದಾರೆ.

ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಮಾತನಾಡಿ, ‘ಕೆಪಿಎಸ್‌ಸಿ ಮಹಾಭ್ರಷ್ಟರ ಕೂಟವಾಗಿವೆ. ಕಳೆದ 2-3 ತಿಂಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಪರೀಕ್ಷೆ ಬರೆದ ಕನ್ನಡ ಮಾಧ್ಯಮದ 76 ಸಾವಿರ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿನ ದೋಷಗಳಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ. ಆದರೆ, ಸರ್ಕಾರ ಕಣ್ಮುಚ್ಚಿ ಕುಳಿತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸುಮಾರು 80 ಪ್ರಶ್ನೆಗಳು ಅರ್ಥವಾಗದೆ ಉತ್ತರ ಬರೆಯಲಾಗದೆ ಅಭ್ಯರ್ಥಿಗಳು ಕೈ ಚೆಲ್ಲಿದ್ದಾರೆ. ಮುಖ್ಯಮಂತ್ರಿಗಳನ್ನು ಈ ಕಾರಣಕ್ಕೆ ಮೂರು ಬಾರಿ ಭೇಟಿಯಾಗಿದ್ದೇವೆ. ಕನ್ನಡದ ವಿದ್ಯಾರ್ಥಿಗಳಿಗಾದ ಈ ಸಮಸ್ಯೆ ಸರಿಪಡಿಸುವಂತೆ ಕೋರಿದ್ದೇವೆ. ಆದರೆ, ಅಲ್ಲಿಯೇ ಇದ್ದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅತೀಕ್‌ ತಪ್ಪು ಮಾಹಿತಿ ನೀಡಿ ಸಿದ್ದರಾಮಯ್ಯ ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದರು.

ಸರಿಯಾಗಿ ಮಾಹಿತಿ ನೀಡುವ ಬಗ್ಗೆ ಅಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದೇವೆ. ಇಷ್ಟೆಲ್ಲ ಹೋರಾಟದ ಮಧ್ಯೆಯೂ ಸರ್ಕಾರ ಯಾಕಾಗಿ ಮೌನ ವಹಿಸಿದೆ? ಕೆಪಿಎಸ್‌ಸಿ ಭ್ರಷ್ಟಾಚಾರದ ಪಾತ್ರದಲ್ಲಿ ಸರ್ಕಾರ ಸಿಲುಕಿದೆಯೇ ಎಂಬ ಪ್ರಶ್ನೆ ನಾಡಿನ ಜನತೆಗೆ ಕಾಡುತ್ತಿದೆ. ಮುಖ್ಯಮಂತ್ರಿಗಳು ಕನಿಷ್ಠ ಕೆಪಿಎಸ್‌ಸಿ ಸಭೆ ಕರೆದು ಮಾಹಿತಿಯನ್ನು ಪಡೆಯುವ ಕೆಲಸ ಮಾಡಿಲ್ಲ. ಕನ್ನಡಿಗರ ಆಕ್ರೋಶ ಭುಗಿಲೇಳುವ ಮೊದಲು ಎಚ್ಚೆತ್ತುಕೊಂಡು ಇದನ್ನು ಸರಿಪಡಿಸಿ’ ಎಂದು ಒತ್ತಾಯಿಸಿದರು.

‘ನಾವು ಸಂವಿಧಾನದ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಸ್ಪಂದಿಸುತ್ತಿಲ್ಲ. ಬಹುಶಃ ಸರ್ಕಾರ ತೀವ್ರ ಸ್ವರೂಪದ ಹೋರಾಟ ಬಯಸುತ್ತಿದೆ ಎನ್ನಿಸುತ್ತಿದೆ. ಇನ್ನಾದರೂ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಈ ಬಗ್ಗೆ ಮಾತನಾಡಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪ ಬೇರೆಯಾಗಲಿದೆ. ಆ ಬಳಿಕ ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ದೂರಬೇಡಿ’ ಎಂದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಸಿ. ಸೋಮಶೇಖರ್‌, ‘ಸರ್ಕಾರದ ಧೋರಣೆಯಿಂದಾಗಿ ಯುವ ಮನಸ್ಸುಗಳಿಗೆ ಆಘಾತವಾಗಿದೆ. ಗೂಗಲ್‌ ಅನುವಾದದಿಂದ ಎಡವಟ್ಟು ಮಾಡಲಾಗಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಕಸಿದುಕೊಳ್ಳಲಾಗಿದೆ. ಸರ್ಕಾರ ತನ್ನ ಘನತೆ, ಗಾಂಭೀರ್ಯ ಉಳಸಿಕೊಳ್ಳಲು ಮರು ಪರೀಕ್ಷೆ ನೆಡಸಿ, ಮರು ಅಧಿಸೂಚನೆ ಹೊರಡಿಸಿ ಕೆಪಿಎಸ್‌ಸಿ 1959ಕ್ಕೆ ತಿದ್ದುಪಡಿ ಮಾಡಲೇಬೇಕು. ಗಡಿನಾಡಿನ ಜಿಲ್ಲೆಗಳಿಗೆ ಕನ್ನಡ ಬಲ್ಲ ಅಧಿಕಾರಿಗಳನ್ನು ಮಾತ್ರ ನಿಯೋಜನೆ ಮಾಡುವ ಕೆಲಸ ಆಗಬೇಕು’ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿದರು. ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ, ನಲ್ಲೂರು ಪ್ರಸಾದ್‌, ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು, ನಟ ಪ್ರೇಮ್‌ ಸೇರಿ ಹಲವರಿದ್ದರು.