ಸಾರಾಂಶ
ಮಂಗಳೂರು : ಕೇಂದ್ರ ಸರ್ಕಾರ ಭಾರತದ ಪಶ್ಚಿಮ ಕರಾವಳಿಗೆ ಏಕರೂಪ ಮೀನುಗಾರಿಕಾ ನೀತಿ ಸಂಹಿತೆ ಮತ್ತು ದಂಡ ಸಂಹಿತೆಯನ್ನು ಜಾರಿಗೊಳಿಸಿದರೆ ಅದಕ್ಕೆ ಕರ್ನಾಟಕ ಬದ್ಧವಾಗಿರುವುದಾಗಿ ರಾಜ್ಯ ಮೀನುಗಾರಿಕೆ, ಒಳನಾಡು ಜಲ ಸಾರಿಗೆ ಮತ್ತು ಬಂದರು ಸಚಿವ ಮಾಂಕಾಳ ಎಸ್.ವೈದ್ಯ ಹೇಳಿದ್ದಾರೆ.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ, ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೂದರಾಬಾದ್, ಹಳೆ ವಿದ್ಯಾರ್ಥಿಗಳ ಸಂಘ, ಯಶಸ್ವೀ ಕಡಲ ಉತ್ಪನ್ನಗಳ ಕಂಪನಿ ಹಾಗೂ ಪಿಲ್ಲೈ ಅಕ್ವಾಕಲ್ಚರ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಎಕ್ಕೂರಿನ ಮೀನುಗಾರಿಕೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ ‘ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ: 2024 ಮತ್ತು ಬಿಗ್ ಫಿಶ್: 2.0’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಗುಜರಾತ್ ಹೊರತುಪಡಿಸಿದರೆ, ಕರ್ನಾಟಕ ಕರಾವಳಿ 320 ಕಿ.ಮೀ. ವಿಸ್ತಾರ ಹೊಂದಿದೆ. ಬೇರೆ ರಾಜ್ಯಗಳಲ್ಲಿ ಕರಾವಳಿ ತೀರ 50-100 ಕಿ.ಮೀ. ಕಿರಿದು ವ್ಯಾಪ್ತಿ ಹೊಂದಿದೆ. ಮೀನುಗಾರಿಕೆಗೆ 60 ದಿನದ ಬದಲು ಮೂರು ತಿಂಗಳು ರಜೆ ಏಕರೂಪದಲ್ಲಿ ಜಾರಿಯಾಗಬೇಕು. ಪ್ರಾಕೃತಿಕ ತೊಂದರೆ ಆದಾಗ ಒಂದೇ ರೀತಿಯ ಕಾನೂನು ಎಲ್ಲೆಡೆಗೆ ಅನ್ವಯವಾಗಬೇಕು ಎಂದರು.
ಮಹಿಳೆಯರಿಗೆ ಬಡ್ಡಿ ರಹಿತ ಸಾಲ:
ಮೀನುಗಾರ ಮಹಿಳೆಯರಿಗೆ 3 ಲಕ್ಷ ರು. ವರೆಗಿನ ಬಡ್ಡಿ ರಹಿತ ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಗ್ಯಾರಂಟಿಗಾಗಿ ಆಸ್ತಿ ಬೇಕೆನ್ನುವ ತಗಾದೆಯ ಕುರಿತು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಉಡುಪಿಯಲ್ಲಿ ಮಹಾಲಕ್ಷ್ಮಿ ಸೊಸೈಟಿ ಸಾಲ ಕೊಡಲು ಮುಂದೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಲ್ಲಿ ಹಿಂದಿನ ನಾಲ್ಕು ವರ್ಷಗಳ ಬಾಕಿ ಪರಿಹಾರವನ್ನು ಒದಗಿಸಲಾಗಿದೆ. ಬೋಟ್ ದುರಂತದ ಸಂದರ್ಭದಲ್ಲಿಯೂ ಪರಿಹಾರ ನೀಡಲಾಗುತ್ತಿದ್ದು, ಅವಘಡಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಮೀನುಗಾರರಿಗೆ 24 ಗಂಟೆಯಲ್ಲಿ 8 ಲಕ್ಷ ರು. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅವಘಡದಿಂದ ಅಂಗಾಂಗ ಕಳೆದುಕೊಂಡು ಮತ್ತೆ ಮೀನುಗಾರಿಕೆ ನಡೆಸಲಾಗದ ಮೀನುಗಾರರಿಗೆ ವೈದ್ಯಕೀಯ ವೆಚ್ಚ ಸಹಿತ ನಾಲ್ಕು ಲಕ್ಷ ರು. ಪರಿಹಾರ ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದರು.
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೇಯರ್ ಸುಧೀರ್ ಶೆಟ್ಟಿ, ಸ್ಥಳೀಯ ಕಾರ್ಪೊರೇಟರ್ ಭರತ್ ಕುಮಾರ್, ಬೀದರ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ, ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್, ಕೊಚ್ಚಿನ್ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿವಿ ಕುಲಸಚಿವ ಡಾ.ದಿನೇಶ್ ಕೈಲ್ಲಿ, ಯಶಸ್ವಿ ಕಡಲ ಉತ್ಪನ್ನಗಳ ಕಂಪನಿ ಆಡಳಿತ ಪಾಲುದಾರ ಉದಯ ಸಾಲಿಯಾನ್, ಮಿನುಗಾರಿಕೆ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಮೇಶ್ ಮುಖ್ಯ ಅತಿಥಿಗಳಾಗಿದ್ದರು.ಈ ಸಂದರ್ಭ ಮತ್ಸ್ಯಾಶ್ರಯ ಯೋಜನೆಯಡಿ ಆಯ್ದ ಫಲಾನುಭವಿ ಮೀನುಗಾರರಿಗೆ ಚೆಕ್ ವಿತರಣೆ, ಹಸಿ ಮೀನು ಮಾರಾಟಗಾರ ಮಹಿಳೆಯರಿಗೆ ಐಸ್‌ಬಾಕ್ಸ್, ಒಣಮೀನು ಮಾರಾಟಗಾರರಿಗೆ ದೊಡ್ಡ ಕ್ರೇಟ್‌ಗಳನ್ನು ವಿತರಿಸಲಾಯಿತು.
ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್.ಆಂಜನೇಯಪ್ಪ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಂಗಳೂರಲ್ಲಿ ಮೀನುಗಾರಿಕಾ ವಿವಿಗೆ ಯತ್ನ
ಮಂಗಳೂರಿನಲ್ಲಿರುವ ದೇಶದ ಪ್ರಥಮ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿಸುವ ನಿಟ್ಟಿನಲ್ಲಿ ಪೂರಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಮಂಗಳೂರಿನ ಮೀನುಗಾರಿಕಾ ಕಾಲೇಜು ವಿಶ್ವವಿದ್ಯಾನಿಲಯದ ಎಲ್ಲ ಅರ್ಹತೆಯನ್ನು ಹೊಂದಿದೆ. 65 ಎಕರೆ ಜಾಗವನ್ನೂ ಹೊಂದಿದೆ ಎಂದು ಸಚಿವ ಮಾಂಕಾಳ ವೈದ್ಯ ಹೇಳಿದರು. ಬಾಕ್ಸ್…ಆಳ ಸಮುದ್ರ ಮೀನುಗಾರಿಕೆ ರಜೆಯನ್ನು 60 ದಿನಗಳಿಂದ 90 ಕ್ಕೆ ವಿಸ್ತರಣೆ, ಬೋಟಿನಲ್ಲಿ ಬಳಸಬೇಕಾದ ಇಂಜಿನ್ ಸಾಮರ್ಥ್ಯ, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲಿಂಗ್ ನಿಷೇಧ ಸಹಿತ ಪ್ರಮುಖ ವಿಷಯಗಳಿಗೆ ಸಂಬಂಧಿಸಿ ದೇಶಕ್ಕೆ ಏಕರೂಪ ಕಾನೂನಿನ ಅಗತ್ಯವಿದೆ. ಈ ವಿಷಯದಲ್ಲಿ ರಾಜ್ಯಕ್ಕೆ ಪ್ರತ್ಯೇಕ ಕಾನೂನು ಆದಾಗ ಸಮಸ್ಯೆಗಳನ್ನು ಸರಿಪಡಿಸಲು ಅಸಾಧ್ಯ ಎಂಬುದು ನನ್ನ ಬಲವಾದ ನಿಲುವಾಗಿದ್ದು, ರಾಜ್ಯಕ್ಕೆ ಸೀಮಿತವಾದ ನಿಯಮಗಳಿಗೆ ನನ್ನ ವಿರೋಧವಿದೆ. ಗುಜರಾತ್ ಹೊರತುಪಡಿಸಿ ಕರ್ನಾಟಕ 320 ಕಿ.ಮೀ. ಉದ್ದದ ಕಡಲನ್ನು ಹೊಂದಿರುವುದರಿಂದ ದೇಶದಲ್ಲಿ ಏಕರೂಪದ ಕಾನೂನು ಆದಾಗ ಮಾತ್ರವೇ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ರಾಜ್ಯ ಮೀನುಗಾರಿಕೆ, ಒಳನಾಡು ಸಾರಿಗೆ ಮತ್ತು ಬಂದು ಸಚಿವ ಮಂಕಾಳ ಎಸ್.ವೈದ್ಯ ಪ್ರತಿಪಾದಿಸಿದ್ದಾರೆ.