ಸಾರಾಂಶ
ಬೆಳಗಾವಿಯ ತಾಲ್ಲೂಕಿನ ವಂಟಮೂರಿ ಗ್ರಾಮದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದಾಗ ಗ್ರಾಮಸ್ಥರು ಮೂಕಪ್ರೇಕ್ಷಕರಾಗಿ ನಿಂತಿದ್ದನ್ನು ತೀವ್ರವಾಗಿ ಖಂಡಿಸಿರುವ ಹೈಕೋರ್ಟ್, ಗ್ರಾಮಸ್ಥರಿಂದ ಪರಿಹಾರ ರೂಪದಲ್ಲಿ ‘ಪುಂಡ ಕಂದಾಯ’ ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ.
ಘಟನೆ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಅಪರಾಧಿಗಳ ಕೃತ್ಯಕ್ಕಿಂತ ಸ್ಥಳದಲ್ಲಿದ್ದ ಗ್ರಾಮಸ್ಥರ ನಿಷ್ಕ್ರಿಯತೆ ಹೆಚ್ಚು ಅಪಾಯಕಾರಿ. ಅವರ ಮೇಲೆ ಸಾಮಾಜಿಕ ಹೊಣೆಗಾರಿಕೆ ಹೊರಿಸಬೇಕಿದೆ ಎಂದು ಹೇಳಿ ಪುಂಡ ಕಂದಾಯ ಸಂಗ್ರಹಿಸಬೇಕು ಎಂಬ ಸಲಹೆ ನೀಡಿತು.ಸಂತ್ರಸ್ತೆಗೆ 6-8 ತಿಂಗಳ ಕಾಲ ಚಿಕಿತ್ಸೆ ಕಲ್ಪಿಸಬೇಕಿದೆ ಎಂದು ವೈದರು ತಿಳಿಸಿರುವುದನ್ನು ಪರಿಗಣಿಸಿದ ಹೈಕೋರ್ಟ್, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಸಂತ್ರಸ್ತೆಯ ಚಿಕಿತ್ಸೆ ವೆಚ್ಚಕ್ಕಾಗಿ ಕೂಡಲೇ 50 ಸಾವಿರ ರು. ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿತು.
ಮತ್ತೊಂದೆಡೆ ಸಂತ್ರಸ್ತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರು. ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ನಿಗಮದಿಂದ 2 ಎಕರೆ 3 ಗುಂಟೆ ಜಾಗ ಮಂಜೂರು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ನೀಡಿದ ಮಾಹಿತಿಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಜಾಗದ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಎಲ್ಲ ಕಂದಾಯ ಪ್ರಕ್ರಿಯೆಯನ್ನು ಡಿ.31ರೊಳಗೆ ಪೂರ್ಣಗೊಳಿಸಬೇಕು. ಜ.1ಕ್ಕೆ ಸಂತ್ರಸ್ತೆ ಹೆಸರಿಗೆ ಕಂದಾಯ ದಾಖಲೆಗಳು ವರ್ಗಾವಣೆಯಾಗಬೇಕು ಎಂದು ಸೂಚಿಸಿ ವಿಚಾರಣೆಯನ್ನು 2024ರ ಜ.17ಕ್ಕೆ ಮುಂದೂಡಿತು.ಇದಕ್ಕೂ ಮುನ್ನ ವಿಚಾರಣೆ ವೇಳೆ ಘಟನೆ ಕುರಿತು ಹೆಚ್ಚುವರಿ ವಸ್ತುಸ್ಥಿತಿ ವರದಿ ಸಲ್ಲಿಸಿದ ರಾಜ್ಯ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಘಟನೆಯಲ್ಲಿ ಲೋಪವಾಗಿದ್ದು, ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಸಿನ್ನೂರ್ ಅವರನ್ನು ಅಮಾನತುಪಡಿಸಲಾಗಿದೆ. ಗ್ರಾಮದಲ್ಲಿ 8 ಸಾವಿರ ಜನಸಂಖ್ಯೆಯಿದೆ. 50-60 ಮಂದಿ ಘಟನೆಗೆ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಅವರ ಸಮ್ಮುಖದಲ್ಲಿ 13 ಮಂದಿ ದಾಳಿಕೋರರು ಮಹಿಳೆಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಈ ಗುಂಪಿನಲ್ಲಿ ಜಹಾಂಗೀರ್ ಎಂಬ ವ್ಯಕ್ತಿ ಸಂತ್ರಸ್ತೆಯ ನೆರವಿಗೆ ಧಾವಿಸಿದರು. ಆತನ ಮೇಲೂ ಆರೋಪಿಗಳು ದಾಳಿ ನಡೆಸಿದ್ದಾರೆ ಎಂದು ವಿವರಿಸಿದರು.ಇದರಿಂದ ತೀವ್ರ ಬೇಸರಗೊಂಡ ನ್ಯಾಯಪೀಠವು ಘಟನೆಗೆ ಸಾಕ್ಷಿಯಾಗಿರುವ 50-60 ಜನರ ಪೈಕಿ ಓರ್ವ ಸಂತ್ರಸ್ತೆಯ ನೆರವಿಗೆ ಧಾವಿಸಿದ್ದು, ಉಳಿದವರು ಮೂಕಪ್ರೇಕ್ಷರಾಗಿ ನಿಂತಿರುವುದು ದೌರ್ಜನ್ಯಕ್ಕೆ ಕುಮ್ಮಕ್ಕು ನೀಡಿದಂತೆ. ಅಪರಾಧಿಗಳ ಕೃತ್ಯಕ್ಕಿಂತ ಜನರ ನಿಷ್ಕ್ರಿಯತೆ ಹೆಚ್ಚು ಅಪಾಯಕಾರಿ. ಜನರ ಮೌನ ದಾಳಿಕೋರರನ್ನು ಹೀರೋಗಳನ್ನಾಗಿ ಮಾಡುತ್ತದೆ. ಇದು ಸಾಮೂಹಿಕ ಮೂರ್ಖತನ, ಗ್ರಾಮಸ್ಥರ ಬೇಜವಾಬ್ದಾರಿತನ. ಈ ಸಂದರ್ಭವನ್ನು ಹೇಗೆ ನೋಡಬೇಕೆಂಬುದನ್ನು ಆಲೋಚಿಸಲು ಇದು ಸಕಾಲ ಎಂದು ಕಟುವಾಗಿ ನುಡಿಯಿತು.ಬ್ರಿಟಿಷರು ಆಡಳಿತ ಮಾಡುವಾಗ ವಿಲಿಯಂ ಬೆಂಟಿಂಕ್ ಎಂಬ ಗವರ್ನರ್ ಜನರಲ್ ಇದ್ದನು. ಆತನ ಕಾಲದಲ್ಲಿ ಕಳ್ಳತನ ಅಥವಾ ದಾಂಧಲೆ ನಡೆದರೆ ಸಂಚುಕೋರರ ಊರು ಪತ್ತೆ ಮಾಡಿ, ಇಂತಹ ಘಟನೆ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಡೀ ಊರಿಗೆ ಶಿಕ್ಷೆ ನೀಡಲಾಗುತ್ತಿತ್ತು. ಈ ಪ್ರಕರಣದಲ್ಲಿಯೂ ಇಂತಹ ಕ್ರಮ ಅವಶ್ಯಕ. ಅದೇ ರೀತಿಯಲ್ಲಿ ತೆರಿಗೆ ವಿಧಿಸಿದಲ್ಲಿ ಗ್ರಾಮಗಳಲ್ಲಿ ಜನರಿಗೆ ಸ್ವಲ್ಪ ಜವಾಬ್ದಾರಿ ಹೆಚ್ಚಾಗಲಿದೆ. ಇದರಿಂದ ಜನರು ಪಾಠ ಕಲಿಯುವಂತಾಗಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿತು.
‘ಬೇಟಿ ಬಚಾವೋ, ಬೇಟಿ ಪಢಾವೋ ಅಲ್ಲ. ಹೆಣ್ಣು ಮಗುವನ್ನು ರಕ್ಷಿಸಲು ಬೇಟಾ ಪಡಾವೋ’ ಎಂಬಂತಾಗಿದೆ. ಗಂಡು ಮಗುವಿಗೆ ಸೂಕ್ತ ಮಾರ್ಗದರ್ಶನ ನೀಡದ ಹೊರತು ನಾವು ಏನನ್ನೂ ಸಾಧಿಸಲಾಗದು. ಮಹಿಳೆಯನ್ನು ಗೌರವಿಸಬೇಕು. ಮಹಿಳೆಯನ್ನು ಗೌರವಿಸಿ ಮತ್ತು ರಕ್ಷಿಸುವಂತೆ ಗಂಡು ಮಗುವಿಗೆ ತಿಳಿಹೇಳಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.ಅಂತಿಮವಾಗಿ, ಪ್ರಕರಣದ ತನಿಖೆಯನ್ನು ಸದ್ಯ ಸಿಐಡಿಗೆ ವರ್ಗಾಯಿಸಲಾಗಿದೆ. ಈವರೆಗೆ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ ಎಂಬುದಾಗಿ ಸರ್ಕಾರ ತಿಳಿಸಿದೆ. ಅದರಂತೆ ಸಿಐಡಿ ಹೆಚ್ಚಿನ ತನಿಖೆ ಕೈಗೊಳ್ಳಲು ಸಮಯ ನೀಡುವುದು ಅಗತ್ಯ. ಮುಂದಿನ ವಿಚಾರಣೆ ವೇಳೆ ಹೆಚ್ಚುವರಿ ವರದಿಯನ್ನು ತನಿಖಾ ಸಂಸ್ಥೆ ನ್ಯಾಯಾಲಯದ ಮುಂದಿಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಬ್ರಿಟಿಷರ ರೀತಿ ಶಿಕ್ಷೆಬ್ರಿಟಿಷ್ ಆಳ್ವಿಕೆಯಲ್ಲಿ ವಿಲಿಯಂ ಬೆಂಟಿಂಕ್ ಎಂಬ ಗವರ್ನರ್ ಜನರಲ್ ಇದ್ದ. ಆತನ ಕಾಲದಲ್ಲಿ ಕಳ್ಳತನ ಅಥವಾ ದಾಂಧಲೆ ನಡೆದರೆ, ಘಟನೆ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟ ಇಡೀ ಊರಿಗೆ ಶಿಕ್ಷೆ ನೀಡಲಾಗುತ್ತಿತ್ತು. ಬೆಳಗಾವಿ ಪ್ರಕರಣದಲ್ಲಿಯೂ ಇಂತಹ ಕ್ರಮ ಅವಶ್ಯಕ.ಹೈಕೋರ್ಟ್