ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಎಟಿಎಂ ಯಂತ್ರಗಳಲ್ಲೂ ಕನ್ನಡ ಬಳಕೆಗೆ ಅವಕಾಶ ಇದೆ. ಹೀಗಾಗಿ, ಎಲ್ಲೆಲ್ಲಿ ಕನ್ನಡವನ್ನು ಬಳಸಲು ಸಾಧ್ಯವೋ ಅಲ್ಲೆಲ್ಲಾ ಕನ್ನಡ ಬಳಸಬೇಕು. ಕನ್ನಡದಲ್ಲಿ ಸಹಿ ಹಾಕಬೇಕು ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ. ರವಿ ಸಲಹೆ ನೀಡಿದರು.ನಗರದ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್ ನಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿ, ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಕನ್ನಡವನ್ನು ಕಟ್ಟುತಿಲ್ಲ. ಆಟೋ ಚಾಲಕರು ಕನ್ನಡವನ್ನು ಕಟ್ಟುತ್ತಿದ್ದಾರೆ. ಕನ್ನಡದ ಬಗ್ಗೆ ಎಲ್ಲರಲ್ಲೂ ನಿರುತ್ಸಾಹ ಇದೆ. ಇಂತಹ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಯುವಕರ ಮೇಲಿದೆ ಎಂದರು.ಕನ್ನಡ ಎಂದರೆ ಬರಿ ಸಂವಹನಕ್ಕಾಗಿ ಬಳಸುವ ಮಾಧ್ಯಮ ಅಷ್ಟೇ ಅಲ್ಲ. ಕನ್ನಡ ಎಂದರೆ ಬದುಕು. ಕನ್ನಡಕ್ಕೆ ಒಂದು ಅಸ್ಮಿತೆ ಇದೆ. ಮೈಸೂರು ಅರಮನೆ, ಹಂಪಿ ಕಲ್ಲಿನ ರಥ, ಬೇಲೂರು- ಹಳೆಬೀಡು ಸೇರಿದಂತೆ ನಾಡಿನ ಎಲ್ಲಾ ಸ್ಮಾರಕಗಳು, ಪ್ರಾಕೃತಿಕ ಸಂಪತ್ತು, ಮೈಸೂರಿನ ವೀಳ್ಯದೆಲೆ, ನಂಜನಗೂಡು ರಸಬಾಳೆ, ಮಂಡ್ಯದ ಕಬ್ಬು ಹೀಗೆ ಎಲ್ಲಾ ಪ್ರಾಕೃತಿಕ ವೈವಿಧ್ಯತೆ, ಆಹಾರ, ಭಾಷೆ ವೇಷ ಭೂಷಣಗಳ ವೈವಿಧ್ಯತೆಗಳು ಸೇರಿ ಕನ್ನಡ ಮತ್ತು ಕನ್ನಡ ನಾಡು ರೂಪುಗೊಂಡಿದೆ ಎಂದು ಅವರು ತಿಳಿಸಿದರು.ನಮ್ಮ ದೇಶದ ಜನರಿಗೆ ಸಂವಿಧಾನ ಅರ್ಥವಾಗಬೇಕಾದರೆ ಸಂವಿಧಾನ ಪೂರ್ವದ ದೇಶದ ಜನರ ಪರಿಸ್ಥಿತಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅರಿವಿರಬೇಕು. ಹಾಗೆಯೇ, ಕನ್ನಡ ಭಾಷೆಯ ಮಹತ್ವ ಅರ್ಥವಾಗಬೇಕಾದರೆ ಕರ್ನಾಟಕವನ್ನು ಏಕೀಕರಣಗೊಳಿಸಲು ನಮ್ಮ ನಾಡಿನ ಹಿರಿಯರು ಪಟ್ಟ ಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಇದೇ ವೇಳೆ ಆಕಾಶವಾಣಿ ಹವ್ಯಾಸಿ ಉದ್ಘೋಷಕಿ ಸಹನಾ ಅವರು ಕನ್ನಡ ಗೀತೆಗಳನ್ನು ಪ್ರಸ್ತುಪಡಿಸಿದರು. ವಿವಿ ಪುರಂ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಎಂ.ಆರ್. ಲವ, ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಸಿ. ದೇವರಾಜೇಗೌಡ, ಆಡಳಿತಾಧಿಕಾರಿ ಪ್ರೊ.ವಿ. ಷಣ್ಮುಗಂ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಪ್ರೊ. ರಾಚಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಡಿ. ವಿಜಯಲಕ್ಷ್ಮಿ ಮೊದಲಾದವರು ಇದ್ದರು.----ಕೋಟ್...ನಮ್ಮ ಯುವ ಸಮುದಾಯದಲ್ಲಿ ಕನ್ನಡ ರಾಜ್ಯೋತ್ಸವವೋ ಅಥವಾ ಕರ್ನಾಟಕ ರಾಜ್ಯೋತ್ಸವವೂ ಎಂಬ ಗೊಂದಲ ಸಹಜವಾಗಿಯೇ ಮೂಡುತ್ತದೆ. ಕನ್ನಡ ರಾಜ್ಯೋತ್ಸವವೂ ಹೌದು, ಕರ್ನಾಟಕ ರಾಜ್ಯೋತ್ಸವವೂ ಹೌದು. ನಾಡಿನ ಜನರಲ್ಲಿ ಕನ್ನಡ ಮತ್ತು ಕರ್ನಾಟಕದ ಎರಡೂ ಭಾವನಾತ್ಮಕವಾಗಿ ಬೆಸೆದುಕೊಂಡಿದೆ.- ಡಾ.ಡಿ. ರವಿ, ಆಯುಕ್ತ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ