ಕಟೀಲು ದೇವಳ ವಾರ್ಷಿಕ ಮಹೋತ್ಸವ ಸಂಪನ್ನ

| Published : Apr 22 2024, 02:18 AM IST

ಸಾರಾಂಶ

ಶಿಬರೂರು ಕೊಡಮಣಿತ್ತಾಯ ಹಾಗೂ ದೇವರ ಭೇಟಿ ದರ್ಶನ ನಡೆದ ಬಳಿಕ ವಸಂತ ಪೂಜೆ , ಚಿನ್ನದ ರಥೋತ್ಸವ, ಧ್ವಜಾವರೋಹಣ, ರಥಬೀದಿಯಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಶನಿವಾರ ಸಂಜೆ ಎಕ್ಕಾರು ಸವಾರಿ, ಕಟ್ಟೆ ಪೂಜೆಯಾಗಿ ಹಿಂದೆ ಬರುವಾಗ ಶಿಬರೂರು ಕೊಡಮಣಿತ್ತಾಯ ದೈವದ ಭೇಟಿ, ರಥ ಬಲಿ ರಾತ್ರಿ ರಥೋತ್ಸವ, ಮುಂಜಾನೆ ಅಜಾರು ನಂದಿನಿ ನದಿಯಲ್ಲಿ ಜಳಕ ಉತ್ಸವ, ಬಳಿಕ ರಕ್ತೇಶ್ವರೀ ಗುಡ್ಡದಲ್ಲಿ ಅತ್ತೂರು ಕೊಡೆತ್ತೂರು ಗ್ರಾಮಸ್ಥರ ಸೂಟೆದಾರ ಪ್ರಾರಂಭ ಆಗಿ ಬಳಿಕ ರಥಬೀದಿಯಲ್ಲಿ ಸೂಟೆದಾರ ನಡೆಯಿತು.

ಬಳಿಕ ಓಕುಳಿ ಸ್ನಾನ, ಪ್ರಸಾದ ವಿತರಣೆ, ಜಳಕದ ಬಲಿಯ ಸಂದರ್ಭ ಶಿಬರೂರು ಕೊಡಮಣಿತ್ತಾಯ ಹಾಗೂ ದೇವರ ಭೇಟಿ ದರ್ಶನ ನಡೆದ ಬಳಿಕ ವಸಂತ ಪೂಜೆ , ಚಿನ್ನದ ರಥೋತ್ಸವ, ಧ್ವಜಾವರೋಹಣ, ರಥಬೀದಿಯಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಿತು.

ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ಮುಖ್ಯ ಆಕರ್ಷಣೆಯೇ ತೂಟೆದಾರ ಸೇವೆ, ಎರಡು ಮಾಗಣಿಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಗಳ ಜನರ ನಡುವೆ ನಡೆಯುವ ಬೆಂಕಿಯ ಆಟ ಸಾವಿರಾರು ಜನರನ್ನು ತನ್ನತ್ತ ಸೆಳೆಯುತ್ತಿದೆ.

ಕಳೆದ ನೂರಾರು ವರ್ಷಗಳಿಂದ ಈ ತೂಟೆದಾರ ಬೆಂಕಿಯ ಆಟ ನಡೆದು ಬರುತ್ತಿದ್ದು ಬೆಂಕಿ ಅನಾಹುತ, ಭಕ್ತಾದಿಗಳ ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ. ತೂಟೇದಾರವೆಂದರೆ ಅದು ಬೆಂಕಿಯ ಆಟ, ಕಟೀಲು ದೇವಳಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯ ಭಕ್ತರು ಈ ತೂಟೆದಾರ ಸೇವೆಯಲ್ಲಿ ಭಾಗವಹಿಸುತ್ತಿದ್ದು, ತೆಂಗಿನ ಗರಿಯ ಕಟ್ಟನ್ನು ಕಟ್ಟಿ ಅದನ್ನು ಉರಿಸಿ ಒಬ್ಬರ ಮೇಲೋಬ್ಬರು ಎಸೆಯುವ ಮೂಲಕ ತೂಟೆದಾರ ಸೇವೆ ನಡೆಯುತ್ತದೆ. ದೇವರ ರಥೋರೋಹಣ ಆದ ನಂತರ ಕಟೀಲು ಬಳಿಯ ಜಳಕದ ಕಟ್ಟೆಯಲ್ಲಿ ಬಳಿಯ ನಂದಿನಿ ನದಿಯಲ್ಲಿ ಜಳಕ ಪೂರೈಸಲಾಗುತ್ತದೆ. ನಂತರ ತೂಟೆದಾರದಲ್ಲಿ ಭಾಗವಹಿಸುವ ಭಕ್ತರು ಜಳಕ ಪೂರೈಸಿ ನಂತರ ಅಜಾರು ರಕ್ತೇಶ್ವರೀ ಸನ್ನಿಧಿ ಬಳಿ ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯ ಎರಡು ಪ್ರತ್ಯೇಕ ಗುಂಪುಗಳಾಗಿ ನಿಂತು ಉರಿಯುವ ತೂಟೆಗಳನ್ನು ಒಬ್ಬರ ಮೇಲೊಬ್ಬರು ಎಸೆಯುತ್ತಾರೆ, ಹೀಗೆ ಮೂರು ಸುತ್ತು ಎಸೆದ ನಂತರ ಕಟೀಲು ರಥಬೀದಿಗೆ ಬಂದು ಅಲ್ಲಿಯೂ ತೂಟೆದಾರ ನಡೆಯುತ್ತದೆ, ಅಲ್ಲಿಯೂ ಮೂರು ಸುತ್ತು ತೂಟೆಗಳನ್ನು ಎಸೆದ ನಂತರ ದೇವಳದ ಮುಂಭಾಗದಲ್ಲಿ ತೂಟೆದಾರದಲ್ಲಿ ಭಾಗವಹಿಸಿದವರಿಗೆ ಓಕುಳಿ ನಡೆಯುತ್ತದೆ.

ಹೀಗೆ ತೂಟೆದಾರ ಮುಕ್ತಾಯವಾಗುತ್ತದೆ, ಅತ್ತೂರು ಮತ್ತು ಕೊಡೆತ್ತೂರು ಎಂಬ ಎರಡು ಮಾಗಣೆಯ ಗ್ರಾಮಸ್ಥರು ಎರಡೂ ಪ್ರತ್ಯೇಕ ಗುಂಪುಗಳಾಗಿ ತೂಟೆಗಳನ್ನು ಎಸೆಯುತ್ತಾ ವೈರಿಗಳಾಗಿ ವರ್ತಿಸಿದರೂ, ಈ ಸೇವೆ ಮುಗಿದ ನಂತರ ಒಂದಾಗುತ್ತಾರೆ ಇದು ತೂಟೆದಾರದ ವಿಶೇಷ. ಈ ತೂಟೆದಾರ ಅತಿರೇಕಕ್ಕೆ ಹೋಗದಂತೆ ಗುತ್ತು ಮಾಗಣೆಯ ಪ್ರಮುಖರು ನಿಯಂತ್ರಿಸುತ್ತಾರೆ. ಕಟೀಲು ಕ್ಷೇತ್ರದ ಆಡಳಿತ ಸಮಿತಿ, ಆಸ್ರಣ್ಣ ಬಂಧುಗಳು, ತಂತ್ರಿಗಳು ಇದ್ದರು.