ಜಾತಿ, ರಾಜಕೀಯ ಕನ್ನಡಿಗರ ಒಗ್ಗಟ್ಟಿಗೆ ಅಪಾಯ

| Published : Oct 20 2025, 01:02 AM IST

ಸಾರಾಂಶ

ನೆರೆಯ ಆಂಧ್ರದಲ್ಲಿ ಇದೇ ರೀತಿಯಾಗಿ ರಾಜ್ಯ ವಿಭಜನೆಯಾಯಿತು. ಆಂಧ್ರಪ್ರದೇಶ ಬೇರೆ, ತೆಲಂಗಾಣ ಬೇರೆ ರಾಜ್ಯಗಳಾದವು. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೆ ಕನ್ನಡ ಸಂಘ, ಸಂಸ್ಥೆಗಳು ಅವಕಾಶ ನೀಡಬಾರದು. ನ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ಭಾಷೆ ಹಿನ್ನೆಲೆಗೆ ಸರಿದು, ಜಾತಿ, ರಾಜಕೀಯ ಮುನ್ನಲೆಗೆ ಬರುತ್ತಿರುವುದು ಕನ್ನಡಿಗರ ಒಗ್ಗಟ್ಟಿಗೆ ಅಪಾಯಕಾರಿ ಎಂದು

ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಎಚ್ಚರಿಸಿದರು.

ಬೆಂಗಳೂರಿನ ಕಾವ್ಯಶ್ರೀ ಚಾರಿಟಬಲ್‌ ಟ್ರಸ್ಟ್, ಜಿಲ್ಲಾ ಕಸಾಪ ಹಾಗೂ ದಿನೇಶ್‌ ಫೌಂಡೇಷನ್‌ ವತಿಯಿಂದ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ದ್ವಿತೀಯ ಕಾವ್ಯಶ್ರೀ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, ನೂರು ವರ್ಷಗಳ ಹೋರಾಟದ ನಂತರ ಕನ್ನಡ ಮಾತನಾಡುವ ಜನರೆಲ್ಲಾ ಒಂದೆಡೆ ಸೇರುವಂತಾಯಿತು. ಭಾಷಾವಾರು ಪ್ರಾಂತ್ಯ ರಚನೆಯಾಯಿತು. ಆದರೆ 70ನೇ ರಾಜ್ಯೋತ್ಸವ ಹೊಸ್ತಿಲಿನಲ್ಲಿ ಇರುವ ನಾವು ಭಾಷೆ ಹಿಂದಕ್ಕೆ ಸರಿಸಿ, ಜಾತಿ, ರಾಜಕೀಯವನ್ನು ಮುಂದೆ ಮಾಡುತ್ತಿರುವುದರಿಂದ ಆಗುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ನೆರೆಯ ಆಂಧ್ರದಲ್ಲಿ ಇದೇ ರೀತಿಯಾಗಿ ರಾಜ್ಯ ವಿಭಜನೆಯಾಯಿತು. ಆಂಧ್ರಪ್ರದೇಶ ಬೇರೆ, ತೆಲಂಗಾಣ ಬೇರೆ ರಾಜ್ಯಗಳಾದವು. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೆ ಕನ್ನಡ ಸಂಘ, ಸಂಸ್ಥೆಗಳು ಅವಕಾಶ ನೀಡಬಾರದು. ನಮ್ಮ ರಾಜ್ಯ ಅಖಂಡ ಕರ್ನಾಟಕವಾಗಿ ಉಳಿಯಬೇಕು ಎಂದು ಅವರು ಆಶಿಸಿದರು.

1924 ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದಾಗ ಹುಯಿಲಗೋಳ ನಾರಾಯಣರಾಯರ ಉದಯವಾಗಿ ನಮ್ಮ ಚೆಲುವ ಕನ್ನಡನಾಡು ಗೀತೆ ಹಾಡಲಾಯಿತು. ಕುವೆಂಪು ಅವರು 20ನೇ ವರ್ಷದವರಾಗಿದ್ದಾಗ ಜೈ ಭಾರತ ಜನನಿಯ ತನುಜಾತೆ... ಗೀತೆ ಬರೆದರು. ಅದು ಈಗ ನಾಡಗೀತೆಯಾಗಿದೆ. ಏಕೀಕರಣ ಚಳವಳಿ ನಡೆದಾಗ ಮೈಸೂರು ಪ್ರಾಂತ್ಯದವರು ಒಪ್ಪಿರಲಿಲ್ಲ. ಆದರೂ ಕೆಂಗಲ್‌ ಹನುಮಂತಯ್ಯ ಅವರು ಭಾಷೆ ತಾಯಿ ಇದ್ದಂತೆ. ಅದು ಎಲ್ಲವನ್ನು ಮೀರಿದ್ದು ಎಂದು ವಿಶಾಲ ಮೈಸೂರು ರಾಜ್ಯ ರಚನೆಗೆ ಕಾರಣರಾದರು. ನಾವು ಭಾಷೆಯ ಮೇಲೆ ನಾಡನ್ನು ಕಟ್ಟುವುದರ ಜೊತೆಗೆ ಬದುಕನ್ನು ಕಟ್ಟಿಕೊಂಡಿದ್ದೇವೆ ಎಂಬುದನ್ನು ಮರೆಯಬಾರದು ಎಂದರು.

ಸಮ್ಮೇಳನವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಉದ್ಘಾಟಿಸಿದರು. ರಾಮೋಹಳ್ಳಿಯ ಆರೂಢ ಭಾರತೀ ಸ್ವಾಮೀಜಿ. ಗುರು ಚರಂತಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ. ತ್ಯಾಗರಾಜ್‌ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.

ಚಿಕ್ಕಹೆಜ್ಜಾಜಿ ಮಹದೇವ್‌,ಎಸ್‌. ರಾಮಲಿಂಗೇಶ್ವರ ಸಿಸಿರಾ ಮುಖ್ಯ ಅತಿಥಿಗಳಾಗಿದ್ದರು. ಎಚ್‌.ಡಿ. ಕೋಟೆ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಬಿ.ಎಸ್. ಮಂಜುನಾಥ್‌, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಉಪಸ್ಥಿತರಿದ್ದರು. ಕಾವ್ಯಶ್ರೀ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಜಿ. ಶಿವಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು.

ಧಾರವಾಡದ ಲೂಸಿ ಸಾಲ್ಡಾನ ಅವರನ್ನು ಕುರಿತು ಚರಂತಯ್ಯ ಕೊಣ್ಣೂರ ರಚಿಸಿರುವ ಜ್ಞಾನ ಯಜ್ಞದ ಮೌನ ಮುದ್ರೆ ಕೃತಿ ಬಿಡುಗಡೆ ಮಾಡಲಾಯಿತು. ಈ ಕೃತಿ ಕುರಿತು ಎಲ್‌.ಐ. ಲಕ್ಕಮ್ಮನವರ ಮಾತನಾಡಿದರು. ವೀರೇಶ್‌ ಸ್ವಾಗತಿಸಿದರು. ಸಂಗೀತ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಪಂಡಿತ ಶ್ರೀಕಾಂತ್‌ ಚಿಮಲ್‌ ಪ್ರಾರ್ಥಿಸಿದರು. ತೇಜಸ್ವಿನಿ ಶ್ರೀನಿವಾಸ್‌ ಅವರ ನೇತೃತ್ವದಲ್ಲಿ ಸ್ವಯಂಭು ನೃತ್ಯ ಸಾಧನಾ ಕೇಂದ್ರದ ಪುಟಾಣಿಗಳು ಅದ್ಭುತವಾಗಿ ಭರತನಾಟ್ಯ ಪ್ರದರ್ಶಿಸಿದರು.ವಿವಿಧ ಕ್ಷೇತ್ರಗಳ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಸದ್ಭಾವನಾ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ಕಾವ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕವಿಗೋಷ್ಠಿ, ಚರ್ಚಾಗೋಷ್ಠಿ ಹಾಗೂ ಸಂವಾದ ಕೂಡ ನಡೆದವು.