ಸಾರಾಂಶ
ವಿಧಾನಸಭೆ : ಬೆಂಗಳೂರಿನ್ನು ಒಡೆಯುವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಜಾರಿಗೆ ತರುತ್ತಿದ್ದು, ಇದು ಬೆಂಗಳೂರಿನ ಪಾಲಿಕೆ ಮರಣ ಶಾಸನವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಕುರಿತು ಮಾತನಾಡಿದ ಆರ್. ಅಶೋಕ್, ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ದೊಡ್ಡ ಕೆಂಪೇಗೌಡ ಅವರ ಮರಿ ಮೊಮ್ಮಗ, ಚಿಕ್ಕ ಕೆಂಪೇಗೌಡರ ಮೊಮ್ಮಗ, ಹಾನಹಳ್ಳಿ ಕೆಂಪೇಗೌಡರ ಮಗ ಡಿ.ಕೆ. ಶಿವಕುಮಾರ್ ಅವರು ನಾಡಪ್ರಭು ಕೆಂಪೇಗೌಡ ಅವರು ಕಟ್ಟಿರುವ ಬೆಂಗಳೂರನ್ನು ಛಿದ್ರ ಮಾಡಲು ಹೊರಟಿದ್ದಾರೆ. ಇದು ಬೆಂಗಳೂರಿನ ದುರ್ದೈವ ಎಂದರು.
ಬಿಬಿಎಂಪಿ ವಿಭಜನೆ ಮಾಡುತ್ತೇವೆ ಎನ್ನುವುದಾದರೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳನ್ನೂ ಒಡೆಯಿರಿ. ಎಲ್ಲದಕ್ಕೂ ಮುಖ್ಯಮಂತ್ರಿಗಳನ್ನು ಅಧ್ಯಕ್ಷರನ್ನಾಗಿ ಮಾಡಿ. ಆಗ ಭಾಷಾ ತಾರತಮ್ಯ, ಆರ್ಥಿಕ ತಾರತಮ್ಯ ಹೆಚ್ಚಾಗಿ ಕನ್ನಡವೇ ಇಲ್ಲದೆ ಕೇಂದ್ರಾಡಳಿತ ಪ್ರದೇಶ ಕೂಗು ಹೆಚ್ಚಾಗಲಿದೆ. ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವು ಕೆಂಪೇಗೌಡರಿಗೆ ಮಾಡಿದ ದ್ರೋಹ. ಈ ಶಾಪ ಸರ್ಕಾರಕ್ಕೆ ತಟ್ಟದೇ ಬಿಡುವುದಿಲ್ಲ ಎಂದರು.
ಡಿ.ಕೆ. ಶಿವಕುಮಾರ್ ಬ್ರೈನ್ ಮ್ಯಾಪಿಂಗ್ ಮಾಡಬೇಕು
ಡಿ.ಕೆ. ಶಿವಕುಮಾರ್ ಅವರ ಮೆದುಳಿನಲ್ಲಿ ಏನಿದೆ ಎಂಬುದನ್ನು ತಿಳಿಯುವುದೇ ಕಷ್ಟವಾಗುತ್ತಿದೆ. ಅವರು ಸುಗಮ ಆಡಳಿತಕ್ಕಾಗಿ ಬಿಬಿಎಂಪಿಯನ್ನು ವಿಭಜಿಸಿ ನಾಲ್ಕೈದು ಪಾಲಿಕೆ ಮಾಡಲು ಹೊರಟ್ಟಿದ್ದಾರೆ. ಅದೇ ನಾಲ್ಕೈದು ಉಪ ಮುಖ್ಯಮಂತ್ರಿಗಳು ಬೇಕು ಎಂದು ಅವರ ಪಕ್ಷದಲ್ಲೇ ಕೂಗು ಎದ್ದಿದ್ದರೂ, ಅದನ್ನು ಬೇಡ ಎನ್ನುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮಂಪರು ಪರೀಕ್ಷೆಗೊಳಗಾದರೂ, ಅದರಿಂದಲೂ ಅವರು ಬಚಾವಾಗಿ ತಮಗೆ ಬೇಕಾದಂತೆ ಉತ್ತರ ನೀಡುತ್ತಾರೆ ಎಂದು ಆರ್. ಅಶೋಕ್ ವ್ಯಂಗ್ಯವಾಡಿದರು.
ಐಎಎಸ್ ಅಧಿಕಾರಿ ಮಾಡುವಕೆಲಸ ಮೇಯರ್ ಮಾಡಲ್ವಾ?ಬೆಂಗಳೂರಿಗೆ ಉತ್ತಮ ಆಡಳಿತ ತರಲು ಗ್ರೇಟರ್ ಬೆಂಗಳೂರು ವಿಧೇಯಕ ಜಾರಿಗೆ ತರುತ್ತೀವಿ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲ. ಅಧಿಕಾರಿಗಳೇ ಎಲ್ಲ ಆಡಳಿತ ಮಾಡುತ್ತಿದ್ದಾರೆ. ಕೇವಲ ಮುಖ್ಯ ಆಯುಕ್ತರೊಬ್ಬರೇ ಇಡೀ ಬೆಂಗಳೂರಿನ ಆಡಳಿತ ನಿಭಾಯಿಸುತ್ತಿದ್ದಾರೆ. ಹೀಗಿದ್ದ ಮೇಲೆ ಮೇಯರ್, ಕಾರ್ಪೋರೇಟರ್‌ಗಳು ಬಂದರೆ ಮತ್ತಷ್ಟು ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲವೇ? ಹಾಗಿದ್ದ ಮೇಲೆ ಬಿಬಿಎಂಪಿ ವಿಭಜನೆ ಏತಕ್ಕಾಗಿ ಎಂದು ಪ್ರಶ್ನಿಸಿದ ಬಿಜೆಪಿಯ ಎಸ್.ಆರ್.ವಿಶ್ವನಾಥ್, ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆ ಮಾಡಲು ಮುಂದಾಗಿದೆ. ಈಗ ಗ್ರೇಟರ್ ಬೆಂಗಳೂರು ಅಡಿ ಪಾಲಿಕೆಗಳ ರಚನೆಯಾದರೂ ಅದು ಊರ್ಜಿತವಾಗುವುದಿಲ್ಲ. ಹೀಗಾಗಿ ಬಿಬಿಎಂಪಿ ವಿಭಜನೆಗೂ ಮುನ್ನ ಸರ್ಕಾರ ಯೋಚಿಸಬೇಕು ಎಂದರು.
ಕೆಳಗೆ ಬಿದ್ದಿದ್ದ ಅಶೋಕ್ ಕಟೌಟ್‌ಕಟ್ಟಿಸಿದ ಮಲ್ಲಿಕಾರ್ಜುನ ಖರ್ಗೆಗ್ರೇಟರ್ ಬೆಂಗಳೂರು ವಿಧೇಯಕದ ಬಗ್ಗೆ ಮಾತನಾಡುವಾಗ ಆರ್.ಅಶೋಕ್, ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕಟೌಟ್ ಕಟ್ಟಿಸಿದ ಘಟನೆಯನ್ನು ವಿವರಿಸಿದರು.
ಈ ಹಿಂದೆ ನಾನು ಸಚಿವನಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಮನೆಗೆ ಹೋಗುವ ದಾರಿಯಲ್ಲಿ ನನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನನ್ನ ಫ್ಲೆಕ್ಸ್ ಕಟ್ಟಿದ್ದನ್ನು ನೋಡಿದರು. ಅದರಲ್ಲಿ ಒಂದು ಫ್ಲೆಕ್ಸ್ ಕಳಚಿ ಕೆಳಗೆ ಬಿದ್ದಿತ್ತು. ಅದನ್ನು ಗಮನಿಸಿದ ಮಲ್ಲಿಕಾರ್ಜುನ ಖರ್ಗೆ ಕಾರು ನಿಲ್ಲಿಸಿ, ತಮ್ಮ ಚಾಲಕರಿಂದ ಫ್ಲೆಕ್ಸ್‌ಅನ್ನು ಮತ್ತೆ ಕಟ್ಟಿಸಿ ನನಗೆ ಕರೆ ಮಾಡಿ ನಿನ್ನ ಫ್ಲೆಕ್ಸ್ ಬಿದ್ದಿತ್ತು, ಕಟ್ಟಿಸಿದ್ದೇನೆ ಅಶೋಕ್ ಎಂದು ಹೇಳಿದ್ದರು. ಅವರ ದೊಡ್ಡ ಗುಣವನ್ನು ನಾನು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರೂ ಗೌರವಿಸುತ್ತಾರೆ ಎಂದು ವಿವರಿಸಿದರು.
ರಾಜ್ಯವನ್ನೂ ಇಬ್ಬಾಗ ಮಾಡ್ಬಿಡಿ
ಬೆಂಗಳೂರು ಒಡೆಯುವ ವಿಧೇಯಕ ಮಂಡಿಸಿರುವ ಈ ದಿನ ಬೆಂಗಳೂರಿನ ಪಾಲಿಕೆ ಕರಾಳ ದಿನವಾಗಿದೆ. ಇಬ್ಭಾಗ ಮಾಡಿದರೆ ಮಾತ್ರ ಆಡಳಿತ ಸುಲಭ ಎನ್ನುವುದಾದರೆ ದೇಶ ಹಾಗೂ ಕರ್ನಾಟಕದ ಆಡಳಿತವನ್ನೂ ಇಬ್ಭಾಗ ಮಾಡಿ.
-ಆರ್.ಅಶೋಕ್, ಪ್ರತಿಪಕ್ಷ ನಾಯಕ.