ಸಾರಾಂಶ
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆಯ ನಾಲ್ವರು ಸೇರಿದಂತೆ ಪರೋಲ್ ದಿನೇಶ್, ಗಾಂಜಾ ವ್ಯಾಪಾರಿ ರಮೇಶ್, ಆರ್ಜಿ ಗ್ರಾಮದ ನಾಗೇಶ್, ಬಿಟ್ಟಂಗಾಲದ ಪೆಗ್ಗರಿಕಾಡಿನ ಪಿಕ್‌ಅಪ್ ಪ್ರಶಾಂತ್, ಕ್ಲೀನರ್ ರಮೇಶ್ ಹಾಗೂ ಕೇರಳ ಮೂಲದ ಜಂಶಾದ್ ಮತ್ತು ಹರೂನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಎಸ್ಪಿ ರಾಮರಾಜನ್ ಮಾಹಿತಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಗೋಣಿಕೊಪ್ಪ- ಹುಣಸೂರು ರಾಜ್ಯ ಹೆದ್ದಾರಿಯ ತಿತಿಮತಿ ಬಳಿ ದೇವರಪುರದಲ್ಲಿ ಡಿಸೆಂಬರ್ 9 ರಂದು ಕೇರಳ ಮೂಲದ ಚಿನ್ನದ ವ್ಯಾಪಾರಿ ಶಂಜಾದ್ ಎಂಬುವರ ಕಾರನ್ನು ಅಡ್ಡಗಟ್ಟಿ 61 ಲಕ್ಷದ 71 ಸಾವಿರ ರೂಪಾಯಿಗಳ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಮಡಿಕೇರಿಯ ತಮ್ಮ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್‌ಪಿ ಕೆ. ರಾಮರಾಜನ್, ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆಯ ನಾಲ್ವರು ಸೇರಿದಂತೆ ಪರೋಲ್ ದಿನೇಶ್, ಗಾಂಜಾ ವ್ಯಾಪಾರಿ ರಮೇಶ್, ಆರ್ಜಿ ಗ್ರಾಮದ ನಾಗೇಶ್, ಬಿಟ್ಟಂಗಾಲದ ಪೆಗ್ಗರಿಕಾಡಿನ ಪಿಕ್‌ಅಪ್ ಪ್ರಶಾಂತ್, ಕ್ಲೀನರ್ ರಮೇಶ್ ಹಾಗೂ ಕೇರಳ ಮೂಲದ ಜಂಶಾದ್ ಮತ್ತು ಹರೂನ್ ಬಂಧಿತ ಆರೋಪಿಗಳಾಗಿದ್ದಾರೆ. ಶಂಜಾದ್ ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಿ 61 ಲಕ್ಷ ನಗದಿನೊಂದಿಗೆ ಮೈಸೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಸಂದರ್ಭ ದೇವರಪುರದದಲ್ಲಿ ದರೋಡೆ ನಡೆದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ 40 ಮಂದಿ ಪೊಲೀಸರ ತನಿಖಾ ತಂಡ ರಚಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ನೇತೃತ್ವದಲ್ಲಿ ತನಿಖೆ ಕೈಗೊಂಡರು. ಡಿವೈಎಸ್ಪಿಗಳು ಅಪರಾಧ ತನಿಖಾ ದಳ, ಪೊಲೀಸ್ ತಾಂತ್ರಿಕ ಪಡೆಗಳ ನೆರವು ಪಡೆದು ತನಿಖೆ ಕೈಗೊಂಡ ಪೊಲೀಸರು, ಅಂದು ರಾತ್ರಿ ಆ ಮಾರ್ಗದಲ್ಲಿ ಸಂಚರಿಸಿದ್ದ ಎಲ್ಲ ವಾಹನಗಳನ್ನು ಕೇರಳ ಸೇರಿದಂತೆ ಕೊಡಗಿನ ಹೆದ್ದಾರಿಯಲ್ಲಿನ 300 ಸಿಸಿ ಕ್ಯಾಮರಾಗಳ ಮೂಲಕ ಪರಿಶೀಲನೆ ನಡೆಸಿದರು. ಈ ಹಂತದಲ್ಲಿ ಪ್ರಕರಣದಲ್ಲಿ ಸ್ಥಳೀಯರು ಪಾಲ್ಗೊಂಡಿರುವ ಅನುಮಾನ ಪೊಲೀಸರನ್ನು ಕಾಡಿತ್ತು. ಬಂಧಿತ ಆರೋಪಿಗಳಲ್ಲಿ ಪೆರೂರು ದಿನೇಶ್ ಕೊಲೆ ಕೇಸ್‌ವೊಂದರಲ್ಲಿ ತ್ರಿಶೂರ್ ಜೈಲಿನಲಿದ್ದು, ಪೆರೋಲ್ ಮೇಲೆ ವಿರಾಜಪೇಟೆಗೆ ಬಂದು ದರೋಡೆಯಲ್ಲಿ ಭಾಗಿಯಾಗಿದ್ದಾನೆ. ದೂರು ನೀಡಿದ್ದ ಶಂಜಾದ್ ಎಂಬ ವ್ಯಾಪಾರಿ ಕೂಡ ಚಿನ್ನಾಭರಣ ವ್ಯವಹಾರದಲ್ಲಿ ಅಕ್ರಮ ವ್ಯವಹಾರ ಮಾಡುತ್ತಿದ್ದರು. 1 ಕೆಜಿ ಯಷ್ಟು ಚಿನ್ನವನ್ನು ಯಾವುದೇ ಬಿಲ್ ಇಲ್ಲದೆ, ತೆರಿಗೆ ಪಾವತಿಸದೆ ಶಂಜಾದ್ ಮಾರಾಟ ಮಾಡಿದ್ದ ಆರೋಪವಿದ್ದು, ಜಿಎಸ್ ಟಿ, ತೆರಿಗೆ ಇಲಾಖೆಯಿಂದಲೂ ಇದೀಗ ದೂರುದಾರನ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ. ವಿಚಾರಣೆ ಎರಡು ಹಂತದಲ್ಲಿ ನಡೆಯುತ್ತಿದ್ದು, ಈವರೆಗೆ ದರೋಡೆ ಪ್ರಕರಣ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದೆಂದು ಎಸ್‌ಪಿ ಕೆ. ರಾಮರಾಜನ್ ತಿಳಿಸಿದರು.