ನುಗ್ಗಿ ಗ್ರಾಮಸ್ಥರಲ್ಲಿ ಕೆಎಫ್‌ಡಿ ಆತಂಕ

| Published : Feb 29 2024, 02:01 AM IST

ನುಗ್ಗಿ ಗ್ರಾಮಸ್ಥರಲ್ಲಿ ಕೆಎಫ್‌ಡಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗನ ಕಾಯಿಲೆಯಿಂದ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವುದು ನುಗ್ಗಿ ಗ್ರಾಮಸ್ಥರನ್ನು ಕಂಗೆಡಿಸಿದೆ. ಮಹಿಳೆ ಪತಿ ಕೆಎಫ್‌ಡಿ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಹಿಂದಿರುಗಿದ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಮಹಿಳೆ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಮೃತಪಟ್ಟಿರುವುದು ಆತಂಕ ಮೂಡಿಸಿದೆ.

೬ ಜನರಿಗೆ ಸೋಂಕು ಮಹಿಳೆ ಸಾವು

ಕನ್ನಡಪ್ರಭ ವಾರ್ತೆ ಕೊಪ್ಪ:

ಮಂಗನ ಕಾಯಿಲೆಯಿಂದ ಕೂಲಿ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವುದು ನುಗ್ಗಿ ಗ್ರಾಮಸ್ಥರನ್ನು ಕಂಗೆಡಿಸಿದೆ. ಮಹಿಳೆ ಪತಿ ಕೆಎಫ್‌ಡಿ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಹಿಂದಿರುಗಿದ ಕೆಲವೇ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದ ಮಹಿಳೆ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಮೃತಪಟ್ಟಿರುವುದು ಆತಂಕ ಮೂಡಿಸಿದೆ.

ತಾಲೂಕಿನ ನುಗ್ಗಿ ಗ್ರಾ.ಪಂ. ವ್ಯಾಪ್ತಿಯ ಎಸ್ಟೇಟ್ ಕೂಲಿ ಕಾರ್ಮಿಕ ಮಹಿಳೆ ಕೊಟ್ರಮ್ಮ (೪೩) ಮಂಗನಕಾಯಿಲೆಯಿಂದ ಮಂಗಳವಾರ ಮೃತಪಟ್ಟಿದ್ದಾರೆ. ಕೊಟ್ರಮ್ಮನ ಪತಿ ನಿಜಗುಣರಿಗೆ ಕೆಎಫ್‌ಡಿ ಸೋಂಕು ದೃಢಪಟ್ಟಿದ್ದರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ನಾಲ್ಕೈದು ದಿನಗಳ ಹಿಂದಷ್ಟೆ ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.

ಕೊಟ್ರಮ್ಮ ಅನಾರೋಗ್ಯವೆಂದು ಪಟ್ಟಣದ ಖಾಸಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮೈಕೈ ನೋವು, ಜ್ವರ, ಸುಸ್ತು ಎಂದು ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಕೊಟ್ರಮ್ಮನ ಪರೀಕ್ಷಿಸಿದ ವೈದ್ಯರು ಕೆಎಫ್‌ಡಿ ಎಂಬ ಅನುಮಾನಪಟ್ಟು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ರಕ್ತ ಪರೀಕ್ಷೆಯಲ್ಲಿ ಕೆಎಫ್‌ಡಿ ದೃಢಪಟ್ಟಿತ್ತು.

ಮಂಗಳವಾರದಂದು ಪುನಃ ಮಹಿಳೆ ಆಸ್ಪತ್ರೆಗೆ ಬಂದಾಗ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಕಳುಹಿಸುವಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

ಅಲ್ಲದೆ ಮಂಗಳವಾರ ಜಿಲ್ಲೆಯಲ್ಲಿ ಸುಮಾರು ೬ ಜನರಲ್ಲಿ ಕೆಎಫ್‌ ಡಿ ಸೋಂಕು ಕಾಣಿಸಿಕೊಂಡಿದೆ ಎಂದು ಡಾ. ಮಹೇಂದ್ರ ಕಿರಿಟಿ ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಗ್ರಾಮಸ್ಥರ ಮನವಿ:

ಮೃತ ಮಹಿಳೆ ಕುಟುಂಬಕ್ಕೆ ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ನೀಡಲು ಆಗ್ರಹಿಸಿ ನುಗ್ಗಿ ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಬುಧವಾರ ತಾಲೂಕು ತಹಸೀಲ್ದಾರ್‌ ಮತ್ತು ಶಾಸಕ ಟಿ.ಡಿ.ರಾಜೇಗೌಡರ ಮುಖೇನ ೨ ಪ್ರತ್ಯೇಕ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಕೊಟ್ರಮ್ಮ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಪತಿಯೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇದನ್ನು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಸಿಎಂ ಪರಿಹಾರ ನಿಧಿಯಿಂದ ೧೫ ಲಕ್ಷ ರು. ಪರಿಹಾರ ಕೊಡಿಸಲು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನುಗ್ಗಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಸದಸ್ಯರಾದ ದೀಕ್ಷಿತ್ ಬಿ.ಎಚ್., ದಾನವೇಲ್, ಗುಲಾಬಿ, ಶಾಂತಿ, ರೇಖಾ, ಗುರುವಣ್ಣ, ಬಸವರಾಜು, ಶಿವಾನಂದ, ಸುರೇಶ್, ರಾಘವೇಂದ್ರ, ಪ.ಪಂ. ಸದಸ್ಯ ಇದ್ದೀನಬ್ಬ, ಕೊಪ್ಪ ತಾಲೂಕು ಬಿಜೆಪಿ ಕಾರ್ಯದರ್ಶಿ ಅರುಣ್ ಶಿವಪುರ ಮುಂತಾದವರಿದ್ದರು.

ಕೆಎಫ್‌ಡಿ ಕುರಿತು ತಾಲೂಕಿನ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಗ್ರಾಪಂ ಜನಪ್ರತಿನಿಧಿಗಳು ಹಾಗೂ ಸದಸ್ಯರು, ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ. ಅನಾವಶ್ಯವಾಗಿ ತೋಟ ಹಾಗೂ ಕಾಡಿಗೆ ಹೋಗಬಾರದೆಂದು ತಿಳಿಸಿದ್ದರೂ ಕೂಲಿ ಹಾಗೂ ಸೌದೆ ಆಸೆಗಾಗಿ ಕೆಲವರು ತೋಟ ಹಾಗೂ ಕಾಡಿಗೆ ಹೋಗುತ್ತಿದ್ದರು. ಕೋವಿಡ್‌ನಂತೆ ಕೆಎಫ್‌ಡಿ ತೀವ್ರಗತಿಯಲ್ಲಿ ಸಾವುನೋವುಗಳಿಲ್ಲದೆ ಇರುವುದರಿಂದ ಗ್ರಾಮಸ್ಥರಲ್ಲಿ ಅಸಡ್ಡೆ ಮೂಡಿಸಿತ್ತು. ಇದೀಗ ಕೆಎಫ್‌ಡಿ ಯಿಂದ ಕೊಟ್ರಮ್ಮ ಸಾವು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ. ಅನಾವಶ್ಯಕವಾಗಿ ಕಾಡಿಗೆ ಯಾರೂ ತೆರಳಬಾರದು. ಮಂಗನ ಕಾಯಿಲೆ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು

-ಎಚ್.ಆರ್. ಜಗದೀಶ್,

ಮಾಜಿ ಅಧ್ಯಕ್ಷ, ನುಗ್ಗಿ ಗ್ರಾ.ಪಂ.