ಸಾರಾಂಶ
ಇಲ್ಲಿನ ಉಣಕಲ್ ಹೊಸೂರು ರಸ್ತೆಯಲ್ಲಿ ನಿರ್ಮಿಸಿದ ಎರಡನೇ ನೇತ್ರ ಚಿಕಿತ್ಸಾ ಕೇಂದ್ರ ಐಸಿರಿ ಉದ್ಘಾಟನಾ ಸಮಾರಂಭ ಮಾ.1ರಂದು ಸಂಜೆ 4:45ಕ್ಕೆ ನಗರದ ದುರ್ಗಾ ಸ್ಪೋರ್ಟ್ಸ್ ಮೈದಾನದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನೇತ್ರ ಚಿಕಿತ್ಸೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರಾದ ಎಂ.ಎಂ. ಜೋಶಿ ನೇತ್ರವಿಜ್ಞಾನ ಸಂಸ್ಥೆಯಿಂದ ಇಲ್ಲಿನ ಉಣಕಲ್ ಹೊಸೂರು ರಸ್ತೆಯಲ್ಲಿ ನಿರ್ಮಿಸಿದ ಎರಡನೇ ನೇತ್ರ ಚಿಕಿತ್ಸಾ ಕೇಂದ್ರ ‘ಐಸಿರಿ’ ಉದ್ಘಾಟನಾ ಸಮಾರಂಭ ಮಾ.1ರಂದು ಸಂಜೆ 4:45ಕ್ಕೆ ನಗರದ ದುರ್ಗಾ ಸ್ಪೋರ್ಟ್ಸ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆ ವೈದ್ಯಕೀಯ ನಿರ್ದೇಶಕ ಡಾ. ಎ.ಎಸ್. ಗುರುಪ್ರಸಾದ ಹೇಳಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 57 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಎಂ.ಎಂ. ಜೋಶಿ ಆಸ್ಪತ್ರೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಅದರಂತೆ ಇದೀಗ 60 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಐದು ಮಹಡಿಯ ಭವ್ಯ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಕ್ಯಾಟ್‌ರಾಕ್ಟ್, ಕಾರ್ನಿಯಾ, ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸೆ, ಅಕ್ಷಿಪಟಲ್ ವಿಭಾಗ, ಗ್ಲುಕೋಮಾ ವಿಭಾಗ, ಚಿಕ್ಕ ಮಕ್ಕಳ ನೇತ್ರಚಿಕಿತ್ಸೆ, ಮೆಳ್ಳಗಣ್ಣು ವಿಭಾಗ ಸೇರಿದಂತೆ ವಿವಿಧ ವಿಭಾಗ ಹೊಂದಿದೆ. ಜತೆಗೆ ನಾಲ್ಕನೇ ಮಹಡಿಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸಂಕೀರ್ಣ, ನಾಲ್ಕು ಮಾಡ್ಯುಲರ್ ಆಪರೇಷನ್ ಥಿಯೇಟರ್, ಚಸ್ಮಾ ನಂಬರ್ ನಿವಾರಿಸುವ ರಿಫ್ರಾಕ್ಟಿವ್ ಸರ್ಜರಿಯ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ದೇಶದ ಮೂರನೇ ಹಾಗೂ ರಾಜ್ಯದಲ್ಲಿಯೇ ಮೊಟ್ಟಮೊದಲ ಝಡ್ 8 ತಂತ್ರಜ್ಞಾನ ಉದ್ಘಾಟನೆ ನಡೆಯಲಿದೆ ಎಂದರು.ಉದ್ಘಾಟನೆಗೆ ಉಪ ರಾಷ್ಟ್ರಪತಿ ಜಗದೀಪ ಧನಕರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಸ್ತುವಾರಿ ಸಚಿವ ಸಂತೋಷ ಲಾಡ್, ಎಚ್.ಕೆ. ಪಾಟೀಲ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಶ್ರೀನಿವಾಸ ಮಾನೆ, ಎಂ.ಆರ್. ಪಾಟೀಲ, ಮಹಾಪೌರರಾದ ವೀಣಾ ಬರದ್ವಾಡ ಇತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಶ್ರೀನಿವಾಸ ಜೋಶಿ, ಡಾ. ಆರ್. ಕೃಷ್ಣಪ್ರಸಾದ, ಡಾ. ಎಚ್.ವಿ. ಸತ್ಯಮೂರ್ತಿ ಇದ್ದರು.