ಮಳೆಗೆ ಸೋರುತ್ತಿರುವ ಕೀರ್ತಿ ನಾರಾಯಣಸ್ವಾಮಿ ದೇಗುಲ

| Published : Jun 08 2024, 12:38 AM IST

ಸಾರಾಂಶ

ಹತ್ತು ವರ್ಷದ ಹಿಂದೆ ಕುಸಿದುಹೋಗಿದ್ದ ಇಲ್ಲಿನ ದೇಗುಲವನ್ನು ಪುರಾತತ್ವ ಇಲಾಖೆ ಪುನರ್ ಮರುಜೋಡಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ತಲಕಾಡು

ಶುಕ್ರವಾರ ಸುರಿದ ಜೋರು ಮಳೆಗೆ ತಲಕಾಡಿನ ಇತಿಹಾಸ ಪ್ರಸಿದ್ದ ಶ್ರೀ ಕೀರ್ತಿ ನಾರಾಯಣಸ್ವಾಮಿ ದೇವಾಲಯದ ಒಳಾಂಗಣದಲ್ಲಿ ವಿಪರೀತವಾಗಿ ಸೋರಿ ಭಕ್ತರಿಗೆ ಹಾಗೂ ಅರ್ಚಕರಿಗೆ ಫಜೀತಿ ತಂದೊಡ್ಡಿತು.

ದೇಗುಲದ ಒಳಭಾಗದಲ್ಲಿ ವಿದ್ಯುತ್ ಸರಬರಾಜು ಮಾಡುವ ಯುಪಿಸ್ ಇಟ್ಟಿದ್ದ ಸ್ಥಳದಲ್ಲಿ, ದೇಗುಲದ ಮೇಲ್ಛಾವಣಿಯಿಂದ ಮಳೆ ನೀರು ಸೋರುತ್ತಿದ್ದರಿಂದ ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸಿ ಸಂಭವನೀಯ ಅಪಾಯ ತಪ್ಪಿಸಲಾಯಿತು.

ದೇಗುಲದ ಗರ್ಭಗುಡಿ ಪ್ರವೇಶ ದ್ವಾರದ ಮೇಲೆ ಶ್ರೀ ರಂಗನಾಥಸ್ಬಾಮಿ ವಿರಮಿಸುವ ವಿಗ್ರಹ ಮೇಲ್ಚಾವಣಿಯ ಉದ್ದಕ್ಕೂ ಮಳೆ ನೀರು ಸೋರಿ ದೇಗುದಲ್ಲಿ ಸಾಕಷ್ಟು ಫಜೀತಿ ಉಂಟು ಮಾಡಿತು.

ಹತ್ತು ವರ್ಷದ ಹಿಂದೆ ಕುಸಿದುಹೋಗಿದ್ದ ಇಲ್ಲಿನ ದೇಗುಲವನ್ನು ಪುರಾತತ್ವ ಇಲಾಖೆ ಪುನರ್ ಮರುಜೋಡಣೆ ನಡೆಸಿದೆ. ಸಿಮೆಂಟ್ ಬಳಸದೆ ಮೇಲ್ಛಾವಣಿ ಭಾರಿ ಗಾತ್ರದ ಕಲ್ಲುಗಳನ್ನು ವಿಶೇಷ ಸುಣ್ಣದ ಗಾರೆ ಬಳಸಿ ಇಂಟರ್ ಲಾಕ್ ವಿಧಾನದಲ್ಲಿ ಮರುಜೋಡಣೆ ನಡೆಸಿದೆ. ಮೇಲ್ಛಾವಣಿ ಕಲ್ಲುಗಳ ಜಾಯಿಂಟ್ ಗಳಿಗೆ, ಅಂಟುವಾಳ ಸುಣ್ಣದ ಗಾರೆಯಿಂದ ಮುಚ್ಚಿದ್ದು, ಈಗ ಅದು ಉದ್ದಕ್ಕೂ ಸಣ್ಣ ಸಣ್ಣ ಬಿರುಕು ಬಿಟ್ಟಿದೆ. ಹೀಗಾಗಿ ಪ್ರತಿ ಮಳೆಯಲ್ಲೂ ಇಲ್ಲಿನ ದೇಗುಲ ಸೋರುತ್ತಿದೆ. ದೇಗುಲ ನಿರ್ವಹಣೆ ಮಾಡಬೇಕಾದ ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ದಿನೇ ದಿನೇ ದ್ವಿಗುಣವಾಗಿದೆ. ಇದರಿಂದ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಹಾಗು ದೈನಂದಿನ ಪೂಜಾ ಕೈಂಕರ್ಯ ನೆರವೇರಿಸುವ ಅರ್ಚಕರಿಗೆ ಅನಾನುಕೂಲವಾಗಿದೆ.

ಕೂಡಲೆ ದೇಗುಲದ ಮೇಲ್ಛಾಣಿಗೆ ಟೈಲ್ಸ್ ಮಿಶ್ರಿತ ವಿಶೇಷ ಸುಣ್ಣದ ಚುರ್ಕಿ ಗಾರೆ ಕಾಮಗಾರಿ ನಡೆಸಿ, ದೇಗುಲದ ಒಳಭಾಗದಲ್ಲಿ ಮಳೆನೀರು ಸೋರದಂತೆ ವ್ಯವಸ್ಥೆ ಮಾಡುವಂತೆ ದೇಗುಲದ ಭಕ್ತರು ಒತ್ತಾಯಿಸಿದ್ದಾರೆ.

ದೇಗುಲದ ನಿರಂತರ ನಿರ್ವಹಣೆಗೆ ಒತ್ತಾಯ

ಮರಳುಗುಡ್ಡದ ಕಾಡಂಚಿನ ದೇಗುಲ ಇದಾದ್ದರಿಂದ ಗರ್ಭಗುಡಿ ಗೋಪುರದ ಮೇಲೆ ನಿರಂತರವಾಗಿ ಜೇನುಗೂಡು ಕಟ್ಟುತ್ತಿವೆ. ಇದಲ್ಲದೆ ಗೋಪುರದ ಮೇಲೆ ಅರಳಿಗಿಡಗಳು ಬೆಳೆಯುತ್ತಿವೆ. ಮುಂದಿನ ದಿನಗಳಲ್ಲಿ ಅರಳಿಗಿಡದ ಬೇರುಗಳು ಗೋಪುರಕ್ಕೆ ಅಪಾಯ ತಂದೊಡ್ಡುವ ಮುನ್ನ ಗೋಪುರದ ಸ್ವಚ್ಚತೆ ಹಾಗೂ ಮೇಲ್ಛಾವಣಿಯಿಂದ ಮಳೆ ನೀರು ಸೋರದಂತೆ ಪುರಾತತ್ಬ ಇಲಾಖೆ ಕೂಡಲೆ ಅಗತ್ಯ ಕ್ರಮ ಜರುಗಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.