ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಯ ಯೋಜನೆ ಒಂದು ವರ್ಷದಲ್ಲಿ ಫಲ ನೀಡೋದು ಅಸಾಧ್ಯ, ಏನಿಲ್ಲವೆಂದರೂ ಸಿಹಿ ಫಲ ನೀಡಲು 4-5 ವರ್ಷಗಳೇ ಬೇಕಾಗುತ್ತದೆ ಎಂದಿರುವ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ಅವರು, ಕಲ್ಯಾಣ ನಾಡಿನಲ್ಲಿ ಫಲಿತಾಂಶ ಸುಧಾರಣೆ ಜೊತೆಗೆ ಶೈಕ್ಷಣಿಕ ಮೂಲ ಸವಲತ್ತು ಸೃಷ್ಟಿಸುವ ಮಂಡಳಿಯ ಅಭಿಯಾನ ಗುರಿ ತಲುಪೋವರೆಗೂ ನಿಲ್ಲೋದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.ಈ ಸಂಬಂಧ ಹೇಳಿಕೆ ನೀಡಿರುವ ಅವರು, ಈ ಬಾರಿ ಸಿಸಿಟಿವಿ ಅಳವಡಿಕೆ, ವೆಬ್ ಕ್ಯಾಸ್ಟಿಂಗ್ ಹಾಗೂ ಇತರೆ ಬಿಗಿ ಕ್ರಮಗಳನ್ನು ಪರೀಕ್ಷಾ ಕೇಂದ್ರದಲ್ಲಿ ತೆಗೆದುಕೊಳ್ಳಲಾಗಿತ್ತು. ಇಂತಹ ಉಪಕ್ರಮಗಳಿಂದಾಗಿ ಆರಂಭದಲ್ಲಿ ತುಸು ತೊಂದರೆಯಾಗಬಹುದೇ ವಿನಾ ಒಟ್ಟಾರೆಯಾಗಿ ಮಕ್ಕಳ ಶಿಕ್ಷಣ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತದೆ. ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿದೆ ಎಂದಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ 8,59,967 ವಿದ್ಯಾರ್ಥಿಗಳ ಪೈಕಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2023 ಕ್ಕೆ ಹೋಲಿಸಿದರೆ, ಈ ವರ್ಷ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 10.49% ಕುಸಿತವನ್ನು ತೋರಿಸುತ್ತದೆ.ತಮ್ಮ ಮತಕ್ಷೇತ್ರ ಜೇವರ್ಗಿಯಲ್ಲಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಜಾರಿಗೆ ತಂದ ಯೋಜನೆ ಮೊದಲ ವರ್ಷ ನಿರೀಕ್ಷಿತ ಫಲ ನೀಡದೆ ಹೋದರೂ ಮುಂದಿನ ವರ್ಷಗಳಲ್ಲಿ ನಾವು ನಿರೀಕ್ಷೆಯಂತೆ ಫಲ ನೀಡಿದೆ. ಅದೇ ರೀತಿ ಬರೋ ದಿನಗಳಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಲೇಬೇಕಾಗಿದೆ. ಗುರಿ ಮುಟ್ಟುವವರೆಗೂ ನಾವು ಈ ಅಭಿಯಾನ ಮುಂದುವರಿಸಬೇಕಿದೆ ಎಂದಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಿಂದ ಅಕ್ಷರ ಆವಿಷ್ಕಾರ ಯೋಜನೆ ಕೈಗೊಂಡಿದ್ದು, ಇದರಲ್ಲಿ “ಕಲಿಕಾ ಆಸರೆ” ಪುಸ್ತಕವನ್ನು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಕಲ್ಯಾಣ ಜಿಲ್ಲೆಗಳಲ್ಲಿರುವ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳಿಗಾಗಿ ಕೆಕೆಆರ್‌ಡಿಬಿ ಹೆಚ್ಚು ಒತ್ತು ನೀಡುತ್ತಿದೆ. ಅದಕ್ಕಾಗಿ ಸುಮಾರು 700 ಕೋಟಿ ರು.ಗಳನ್ನು ಈ ವರ್ಷ ಖರ್ಚು ಮಾಡಲಾಗಿದೆ. ಶಿಕ್ಷಣ ರಂಗದಲ್ಲಿನ ಸುಧಾರಣೆಯ ಕೆಕೆಆರ್‌ಡಿಬಿ ಅಭಿಯಾನ ಉತ್ತಮ ಫಲಿತಾಂಶದ ನಿರೀಕ್ಷೆಯೊಂದಿಗೆ ಮುಂದುವರಿಯಲಿದೆ ಎಂದಿದ್ದಾರೆ.ಈಗಾಗಲೇ ನಾನು ಕಲಬುರಗಿ ಅಪರ ಶಿಕ್ಷಣ ಆಯುಕ್ತಾಲಯದ ಆಯುಕ್ತರಾದ ಡಾ. ಆಕಾಶ ಶಂಕರ್ ಅವರೊಂದಿಗೆ ದೂರವಾಣಿಯ ಮೂಲಕ ಮಾತುಕತೆ ನಡೆಸಿದ್ದೇನೆ. ಶಿಕ್ಷಣ ರಂಗದಲ್ಲಿನ ತಜ್ಞರನ್ನೊಳಗೊಂಡ ಸಮೀತಿ ರಚಿಸುವುದು, ಅವರ ಸಲಹೆ- ಸೂಚನೆಗಳನ್ನು ಕೆಕೆಆರ್‌ಡಿಬಿಯ ಅಕ್ಷರ ಅವಿಷ್ಕಾರ ಅನುಷ್ಠಾನದಲ್ಲಿ ಅಳಡಿಸಿಕೊಂಡು ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿನ ಶಿಕ್ಷಣ ರಂಗಕ್ಕೆ ಕಾಯಕಲ್ಪ ನೀಡುವುದು ನಮ್ಮ ಗುರಿ. ಈ ಗುರಿ ಸಾಧನೆಯತ್ತ ನಮ್ಮ ಪಯಣ ನಿರಂತರ, ಸಮಾಜದಲ್ಲಿನ ಸರ್ವರ ಸಹಕಾರ ಸದಾಕಾಲ ಇರಲೇಬೇಕು ಎಂದು ಡಾ. ಅಜಯ್ ಸಿಂಗ್ ಕೋರಿದ್ದಾರೆ.