ಕೊಪ್ಪಳ, ಬಿಎಸ್‌ಪಿಎಲ್‌ ಒಟ್ಟಿಗಿರಲು ಅಸಾಧ್ಯ

| Published : Mar 24 2025, 12:33 AM IST

ಸಾರಾಂಶ

ಕೊಪ್ಪಳದಲ್ಲಿರುವ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. 20ಕ್ಕಿಂತ ಹೆಚ್ಚು ಹಳ್ಳಿಗಳು ಕಾರ್ಖಾನೆಗಳ ಹೊಗೆ, ಧೂಳಿನಿಂದ ಬಾಧಿತವಾಗಿ ಜನಜೀವನ ಸಂಕಷ್ಟದಲ್ಲಿದೆ

ಕುಷ್ಟಗಿ: ಕೊಪ್ಪಳ ಜಿಲ್ಲೆಯ ಪರಿಸರ ಉಳಿಯಬೇಕಾದರೆ ಈಗಿರುವ ಕಾರ್ಖಾನೆಗಳು ಹೊಸ ತಂತ್ರಜ್ಞಾನ ಬಳಸಿ, ಹೊಗೆ, ಬೂದಿ ಜನರನ್ನು ಬಾಧಿಸದಂತೆ ಮಾಡಬೇಕು, ಕೊಪ್ಪಳ ಇರಬೇಕು ಇಲ್ಲವೇ ಬಿಎಸ್‌ಪಿಎಲ್‌ ಇರಬೇಕು, ಎರಡು ಒಟ್ಟಿಗೆ ಇರಲು ಸಾಧ್ಯವಿಲ್ಲ. ಇಂತಹ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟದೂರು ಹೇಳಿದರು.

ತಾಲೂಕಿನ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಯುವ ಪಡೆ) ನೇತೃತ್ವದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಾಲಿನ್ಯಕಾರಿ ಕಾರ್ಖಾನೆ ಬಾಧಿತರ ಎರಡು ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಪ್ಪಳದಲ್ಲಿರುವ ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. 20ಕ್ಕಿಂತ ಹೆಚ್ಚು ಹಳ್ಳಿಗಳು ಕಾರ್ಖಾನೆಗಳ ಹೊಗೆ, ಧೂಳಿನಿಂದ ಬಾಧಿತವಾಗಿ ಜನಜೀವನ ಸಂಕಷ್ಟದಲ್ಲಿದೆ. ರೈತರ ಕೃಷಿ ಬೆಳೆ ಹಾಳಾಗಿವೆ. ಬೂದಿ ಹೊಗೆಯಿಂದ ಮೇವು ತಿಂದು ದನಗಳು ಅತಿಸಾರದಿಂದ ಸಾಯುತ್ತಿವೆ. ಜನ ಕೆಮ್ಮು, ದಮ್ಮು, ಅಸ್ತಮಾ, ಟಿಬಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಬಾಧಿತ ಪ್ರದೇಶದಲ್ಲಿ ಕೈಗಾರಿಕಾ ಮಂತ್ರಿಗಳು ಸಂಚರಿಸಿ ನೋಡಿದರೆ ಮೇಲ್ನೋಟಕ್ಕೆ ಪರಿಸರ ಮಾಲಿನ್ಯ ಇರುವುದು ಗೊತ್ತಾಗಲಿದೆ. ಕೊಪ್ಪಳ ಜಿಲ್ಲಾ ಕಚೇರಿ, ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು, ಗವಿಮಠ, ಗವಿಶ್ರೀನಗರ, ಕಾಳಿದಾಸನಗರ, ಬೇಲ್ದಾರ್ ಕಾಲನಿ, ಸಿದ್ಧಾರ್ಥನಗರ ಮುಂತಾದ ಪ್ರದೇಶಗಳು ಈಗಾಗಲೇ ಬಾಧಿತವಾಗಿದ್ದು, ಬಲ್ದೋಟ ಬಿಎಸ್‌ಪಿಎಲ್‌ ವಿಸ್ತರಣೆಯಿಂದ ಕೊಪ್ಪಳ ನಗರ ಮತ್ತು ಇಪ್ಪತ್ತು ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದರು.

ಸಮಿತಿಯ ಸಂಚಾಲಕ ಕೆ.ಬಿ. ಗೋನಾಳ ಮಾತನಾಡಿ, ತುಂಗಭದ್ರಾ ತಟದಲ್ಲಿರುವ ಕಾರ್ಖಾನೆಗಳು, ಪರಿಸರ ಮಾಲಿನ್ಯ ಉಂಟು ಮಾಡುವ ಸ್ಪಾಂಜ್ ಐರನ್, ಸಿಮೆಂಟ್, ರಾಸಾಯನಿಕ ಗೊಬ್ಬರ, ಸುಣ್ಣ ತಯಾರಿಸುವ ಬೃಹತ್ ಕಾರ್ಖಾನೆಗಳ ಮೇಲೆ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಬೇಕು. ಕಾರ್ಖಾನೆಗಳಿಂದ ಜಿಲ್ಲೆಗೆ ನಯಾಪೈಸೆ ಉಪಕಾರವಾಗಿಲ್ಲ. ಗಿಣಿಗೇರಿ, ಹಿರೇಬಗನಾಳ, ಹಳೆಕನಕಾಪುರ, ಬೇವಿನಹಳ್ಳಿ, ಹುಲಿಗಿ, ಹಿರೇಕಾಸನಕಂಡಿ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ, ಬೆಳವಿನಾಳ ಮುಂತಾದ ಗ್ರಾಮಗಳಲ್ಲಿ ಕೃಷಿ ಬೆಳೆ ಹಾನಿ, ಜಲಮಾಲಿನ್ಯ, ವಾಯುಮಾಲಿನ್ಯ ಉಂಟಾಗಿ ಜನರು ದೀರ್ಘಕಾಲಿನ ರೋಗಗಳಿಗೆ ತುತ್ತಾಗಿದ್ದಾರೆ. ತುಂಗಭದ್ರಾ ಜಲಾಶಯ ಈ ಕಾರ್ಖಾನೆಗಳ ತ್ಯಾಜ್ಯದಿಂದ ವಿಷವಾಗಿದೆ. ಈಗಿರುವ ಕಾರ್ಖಾನೆಗಳು ಮಾಲಿನ್ಯ ನಿಯಂತ್ರಣ ಮಾಡುವ ತನಕ ಬಾಧಿತ ಗ್ರಾಮಗಳ ಮತ್ತು ಕೊಪ್ಪಳದ ಜನರು ಹೋರಾಟ ಮಾಡಬೇಕು ಎಂದರು.

ಧಾರವಾಡ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಮಾತನಾಡಿ, ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಎಲ್ಲಕ್ಕೂ ಮಿಗಿಲಾಗಿ ಜನತೆಯ ಹೋರಾಟಗಳು ಬೆಳೆದು ಬಂದಾಗ ಮಾತ್ರ ಜನರ ವಿರೋಧಿಯಾಗಿರುವ ರಾಜಕಾರಣ ಸೋಲಿಸಬಹುದು. ನಾವೆಲ್ಲ ಅದನ್ನು ಇಂದಿನ ಕಂಪನಿಗಳ ವಿರುದ್ಧ ಸಾಧಿಸಬೇಕಾಗಿದೆ. ಗ್ರಾಮೀಣ ಜನರ ಆರೋಗ್ಯ ಕೆಡಿಸಲು ಯಾರಿಗೂ ಅವಕಾಶವಿಲ್ಲ. ಕಾರ್ಖಾನೆ ನಿಯಮ ಉಲ್ಲಂಘನೆ ಮಾಡಿ ಕೈಗಾರಿಕೆ ಸ್ಥಾಪಿಸಲಾಗಿದೆ. ಅಲ್ಲಿನ ರಸ್ತೆಗಳಲ್ಲಿ ಸುರಕ್ಷಿತ ಪ್ರಯಾಣ ಮಾಡಲು ಸಾಧ್ಯವಿಲ್ಲ. ನಿಮ್ಮ ಸಂಘಟನೆಯಲ್ಲಿ ವೈಚಾರಿಕ ಬದ್ಧತೆ ಇಟ್ಟುಕೊಂಡು ಹೋರಾಟ ಮಾಡಬೇಕು ಎಂದರು.

ರಾಘವೇಂದ್ರ ಕುಷ್ಟಗಿ ಮಾತನಾಡಿದರು. ಈ ಶಿಬಿರವನ್ನು ಕಾರ್ಖಾನೆಯಿಂದ ಬಾಧಿತರ ಮಕ್ಕಳಾದ ಮಹೇಶ ವದನಾಳ, ಶಿವಪ್ಪ ದೇವರಮನಿ, ಗಣೇಶ ಆಚಾರ, ಕೊಟ್ರಪ್ಪ ಪಲ್ಲೇದ, ಗವಿಸಿದ್ದಪ್ಪ ಪುಟಗಿ, ಶಂಕ್ರಪ್ಪ ಕರ್ಕಿಹಳ್ಳಿ, ತಿರುಪತಿ ಇಂದಿರಾನಗರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಮುದುಕಪ್ಪ ಎಂ. ಹೊಸಮನಿ, ಮಹಾಂತೇಶ ಕೊತಬಾಳ, ಶುಕರಾಜ ತಾಳಕೇರಿ, ಮದ್ದಾನಯ್ಯ ಹಿರೇಮಠ, ಶಶಿಕಲಾ, ಡಿ.ಎಚ್. ಪೂಜಾರ, ಟಿ. ರತ್ನಾಕರ, ಶರಣುಗಡ್ಡಿ, ನಜೀರಸಾಬ್ ಮೂಲಿಮನಿ, ಎಸ್.ಎ. ಗಫಾರ್, ಶರಣು ಶೆಟ್ಟರ್, ಎಂ.ಕೆ. ಸಾಹೇಬ್‌, ಶರಣುಪಾಟೀಲ ಇದ್ದರು.