ಸಾರಾಂಶ
ರಾಜ್ಯದಲ್ಲಿ ರಾದ್ಧಾಂತ ಸೃಷ್ಟಿಸಿರುವ ವಕ್ಫ್ ಮಂಡಳಿ ಕೊಪ್ಪಳ ತಾಲೂಕಿನ ದಲಿತರ ಭೂಮಿ, ಹಿಂದೂಗಳ ದೇವಸ್ಥಾನ ಹಾಗೂ ಮಠಗಳ ಆಸ್ತಿ ಪಹಣಿಗಳಲ್ಲಿ ನಾಲ್ಕಾರು ವರ್ಷಗಳ ಹಿಂದೆಯೇ ವಕ್ಫ್ ಹೆಸರು ಸೇರ್ಪಡೆ ಮಾಡಿದ್ದು, ಅಂದಿನಿಂದ ಜನರು ಪರದಾಡುತ್ತಿದ್ದಾರೆ.
ಕೊಪ್ಪಳ : ರಾಜ್ಯದಲ್ಲಿ ರಾದ್ಧಾಂತ ಸೃಷ್ಟಿಸಿರುವ ವಕ್ಫ್ ಮಂಡಳಿ ಕೊಪ್ಪಳ ತಾಲೂಕಿನ ದಲಿತರ ಭೂಮಿ, ಹಿಂದೂಗಳ ದೇವಸ್ಥಾನ ಹಾಗೂ ಮಠಗಳ ಆಸ್ತಿ ಪಹಣಿಗಳಲ್ಲಿ ನಾಲ್ಕಾರು ವರ್ಷಗಳ ಹಿಂದೆಯೇ ವಕ್ಫ್ ಹೆಸರು ಸೇರ್ಪಡೆ ಮಾಡಿದ್ದು, ಅಂದಿನಿಂದ ಜನರು ಪರದಾಡುತ್ತಿದ್ದಾರೆ.
ತಾಲೂಕಿನ ಬಿಸರಳ್ಳಿ ಗ್ರಾಮದ ಮರಳು ಸಿದ್ಧೇಶ್ವರ ಮಠದ ಆಸ್ತಿ ಹಾಗೂ ದಲಿತರ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದ್ದು, ಕಳೆದ ನಾಲ್ಕಾರು ವರ್ಷಗಳಿಂದ ಆಸ್ತಿಯ ಮೇಲೆ ಮಾಲೀಕರಿಗೆ ಸಾಲವೂ ಸಿಗುತ್ತಿಲ್ಲ ಮತ್ತು ಆಸ್ತಿಯ ವರ್ಗಾವಣೆಯೂ ಆಗುತ್ತಿಲ್ಲ. ಗ್ರಾಮಸ್ಥರು ಆಗಿನಿಂದಲೂ ಕಂದಾಯ ಇಲಾಖೆ ಹಾಗೂ ವಕ್ಫ್ ಬೋರ್ಡ್ ಕಚೇರಿಗೆ ಅಲೆದಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ.
ಬಿಸರಳ್ಳಿಯ ಮರಳುಸಿದ್ಧೇಶ್ವರ ಮಠಕ್ಕೆ ಮೈಸೂರು ಸಂಸ್ಥಾನ ದಾನ ಕೊಟ್ಟಿರುವ ಭೂಮಿಯ ಸರ್ವೆ ನಂ.90ರಲ್ಲಿ ವಕ್ಫ್ ಹೆಸರು ದಾಖಲಾಗಿದ್ದು, 91ರಲ್ಲಿ ಬಂದಿಲ್ಲ. ಆದರೆ, ಸರ್ವೆ ನಂ.92ರಲ್ಲಿಯೂ ವಕ್ಫ್ ಹೆಸರು ಬಂದಿದೆ. ಅಲ್ಲದೆ, ದಲಿತರ ಭೂಮಿಗಳಲ್ಲಿಯೂ ವಕ್ಫ್ ಎಂದು ನಮೂದಾಗಿದೆ.
ಮೈಸೂರು ಸಂಸ್ಥಾನದಿಂದ ಇಲ್ಲಿಯವರೆಗೂ ದಾಖಲೆ ಇವೆ. ಕಳೆದ 6 ವರ್ಷಗಳ ಹಿಂದೆ ನಮ್ಮ ಪಹಣಿಯಲ್ಲಿ ಏಕಾಏಕಿ ವಕ್ಫ್ ಹೆಸರು ಸೇರಿದೆ. ನಾವು ಸಾಲ ಪಡೆಯಲು ಹೋದಾಗ ಇದು ಗೊತ್ತಾಗಿದೆ. ಈಗ ಮಾರಲು ಬರುತ್ತಿಲ್ಲ, ಆಸ್ತಿ ವರ್ಗಾವಣೆ ಆಗುತ್ತಿಲ್ಲ. ಅವರ ಬಳಿ ಇರುವ ದಾಖಲೆ ತೋರಿಸುತ್ತಿಲ್ಲ, ನಮ್ಮ ಬಳಿ ಇರುವ ದಾಖಲೆ ನೋಡುತ್ತಿಲ್ಲ. ವಕ್ಫ್ ಆಸ್ತಿ ಎಂದಷ್ಟೇ ಹೇಳುತ್ತಾರೆಯೇ ಹೊರತು ಬೇರೇನು ಹೇಳುತ್ತಿಲ್ಲ ಎಂದು ಸಂತ್ರಸ್ತ ಶಿವಯ್ಯ ಶಿವಲಿಂಗಯ್ಯ ಅಳಲು ತೊಡಿಕೊಂಡಿದ್ದಾರೆ.
ಇನ್ನು, ಕುಕನೂರಿನ ಟಿ.ರತ್ನಾಕರ ಅವರಿಗೆ ಸೇರಿದ 4 ಎಕರೆ ಭೂಮಿಯ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದು, ತೆಗೆಸಲು ನ್ಯಾಯಾಲಯದ ಮೆಟ್ಟಿಲು ಏರಿದರೂ ಪರಿಹಾರ ಸಿಕ್ಕಿಲ್ಲ. ಹೀಗೆ, ಕೊಪ್ಪಳ ಜಿಲ್ಲೆಯಲ್ಲಿ ದಲಿತರು, ಮುಸ್ಲಿಮರು ಸೇರಿ ಎಲ್ಲ ಸಮುದಾಯದ ಆಸ್ತಿಗಳ ಪಹಣಿಯಲ್ಲಿಯೂ ವಕ್ಫ್ ಎಂದು ನಮೂದಿಸಲಾಗಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.