ಕಲಿಯುಗದಲ್ಲಿ ಕೃಷ್ಣ ಮಂತ್ರ ಶೀಘ್ರ ಫಲದಾಯಕ: ಪುತ್ತಿಗೆ ಶ್ರೀ

| Published : Aug 18 2025, 12:01 AM IST

ಸಾರಾಂಶ

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಂಡಲೋತ್ಸವದ ನಿಮಿತ್ತ, ಚಾಂದ್ರ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 1008 ಬಾರಿ ಶ್ರೀ ಕೃಷ್ಣ ಮಂತ್ರಜಪ ಪಠಣ ಕಾರ್ಯಕ್ರಮಕ್ಕೆ ಶುಕ್ರವಾರ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಕೋಶಾಧಿಕಾರಿ ಶ್ರೀ ಗೋವಿಂದ ದೇವಗಿರಿ ಮಹಾರಾಜ್ ಚಾಲನೆ ನೀಡಿದರು.

1008 ಬಾರಿ ಶ್ರೀ ಕೃಷ್ಣ ಮಂತ್ರಜಪ ಪಠಣ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಂಡಲೋತ್ಸವದ ನಿಮಿತ್ತ, ಚಾಂದ್ರ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 1008 ಬಾರಿ ಶ್ರೀ ಕೃಷ್ಣ ಮಂತ್ರಜಪ ಪಠಣ ಕಾರ್ಯಕ್ರಮಕ್ಕೆ ಶುಕ್ರವಾರ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಕೋಶಾಧಿಕಾರಿ ಶ್ರೀ ಗೋವಿಂದ ದೇವಗಿರಿ ಮಹಾರಾಜ್ ಚಾಲನೆ ನೀಡಿದರು.ಈ ಸಂದರ್ಭ ಅನುಗ್ರಹ ಸಂದೇಶ ನೀಡಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಇಂದು ವೇಗದ ಯುಗದಲ್ಲಿ ನಾವು ಬದುಕುತಿದ್ದೇವೆ, ಪ್ರತಿಯೊಂದು ನಮಗೆ ತಕ್ಷಣ ಆಗಬೇಕಾಗಿದೆ. ಕಲಿಯುಗದಲ್ಲಿ ಕೃಷ್ಣನಾಮ ಬಹು ಶೀಘ್ರ ಫಲಪ್ರದಾಯಕವಾಗಿದೆ ಎಂದರು.ನಮ್ಮ ಪರಮಗುರುಗಳಾದ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರು ‘ಸ್ವಾಮೀ ಶ್ರೀ ಕೃಷ್ಣಾಯ ನಮಃ’ ಎಂಬ ಮಂತ್ರಪಠಣದಿಂದ ಸಿದ್ದಿ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ಇಷ್ಟಾರ್ಥ ಸಿದ್ದಿಗಾಗಿ, ಸಮಾಜದ ಕಲ್ಯಾಣಕ್ಕಾಗಿ ಈ ಮಂತ್ರ ಪಠಣದ ಕಾರ್ಯಕ್ರಮವನ್ನು, ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ ಎಂದರು.ಶ್ರೀ ಗೋವಿಂದ ದೇವಗಿರಿ ಮಹಾರಾಜ್ ಅವರು, ಭಾರತ ದೇಶದ ಮೂಲೆಮೂಲೆಗಳಲ್ಲಿ ಅಧ್ಯಾತ್ಮ ತುಂಬಿದೆ, ಇಡೀ ದೇಶವೇ ಒಂದು ಪುಣ್ಯಕ್ಷೇತ್ರವಾಗಿದೆ, ಇಲ್ಲಿ ಅಸಂಖ್ಯಾತ ತೀರ್ಥ ಕ್ಷೇತ್ರಗಳಿವೆ, ಅಂತಹ ಒಂದು ತೀರ್ಥ ಕ್ಷೇತ್ರ ಉಡುಪಿಗೆ ಬಂದು ಧನ್ಯತಾ ಭಾವ ಅನುಭವಿಸುತಿದ್ದೇನೆ ಎಂದರು.ಕೃಷ್ಣ ತನ್ನನ್ನು ಭಜಿಸುವಲ್ಲಿ ನಾನಿರುತ್ತೇನೆ ಎಂದಿದ್ದಾನೆ, ಇಲ್ಲಿ ಭಕ್ತರು ಮೈಮರೆತು 1008 ಬಾರಿ ಕೃಷ್ಣಮಂತ್ರ ಜಪ ಮಾಡಿದ್ದಾರೆ. ಇದನ್ನು ನೋಡಿ ನಾನು ದಂಗು ಬಡಿದಿದ್ದೇನೆ. ಈ ಅನುಷ್ಠಾನ ಅನಂತ ಫಲ ಸಮಾಜಕ್ಕೆ ಸಿಗಲಿದೆ ಎಂದವರು ಹೇಳಿದರು.

ಕಿರಿಯಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ವಿದ್ವಾನ್ ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.ರಾಜಾಂಗಣದಲ್ಲಿ ಮತ್ತು ಆನ್ ಲೈನ್ ಸಾವಿರಾರು ಮಂದಿ ಭಕ್ತರು ಒಕ್ಕೊರಲಿನಿಂದ 1008 ಬಾರಿ ಕೃಷ್ಣ ಮಂತ್ರ ಪಠಣ ನಡೆಸಿದರು. ಒಟ್ಟು 7 ಲಕ್ಷ ಕೃಷ್ಣ ಮಂತ್ರ ಜಪ ಏಕಕಾಲದಲ್ಲಿ ನಡೆಯಿತು.