ಸಾರಾಂಶ
ಆತ್ಮಭೂಷಣ್
ಮಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ನಾಲ್ಕು ನಿಗಮಗಳಲ್ಲಿ ಪ್ರಯಾಣಿಕರ ಟಿಕೆಟ್ ನೀಡಿಕೆ ವ್ಯವಸ್ಥೆಯನ್ನು ಶೀಘ್ರವೇ ಸಂಪೂರ್ಣ ಡಿಜಿಟಲ್ ರೂಪಕ್ಕೆ ಪರಿವರ್ತಿಸುತ್ತಿದೆ. ಪ್ರಸ್ತುತ ಇರುವ ಇಟಿಎಂ (ಎಲೆಕ್ಟ್ರಾನಿಕ್ ಟಿಕೆಟ್ ಮಿಷಿನ್) ಬದಲಾಯಿಸಿ ಹೊಸ ಸ್ಮಾರ್ಟ್ ಇಟಿಎಂ ಬಳಕೆಗೆ ಮುಂದಾಗಿದೆ. ಬಿಎಂಟಿಸಿ ಬಳಿಕ ಈಗ ಕೆಎಸ್ಆರ್‌ಟಿಸಿ, ವಾಯುವ್ಯ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆಗಳಲ್ಲಿ ಹೊಸ ಸ್ಮಾರ್ಟ್ ಇಟಿಎಂ ಬಳಸಲು ಆರಂಭಿಸಲಾಗಿದೆ.
ಟಚ್ ಸ್ಕ್ರೀನ್ ಮಿಷಿನ್:
ಇದುವರೆಗೆ ಸಾರಿಗೆ ಬಸ್‌ಗಳಲ್ಲಿ ಬಟನ್ ಆಧಾರಿತ ಇಟಿಎಂ ಉಪಯೋಗಿಸಲಾಗುತ್ತಿದೆ. ಏಳೆಂಟು ವರ್ಷಗಳ ಹಳೆ ವ್ಯವಸ್ಥೆಯಿಂದ ಪೂರ್ತಿ ಡಿಜಿಟಲೀಕರಣಕ್ಕೆ ಬದಲಾಯಿಸಲಾಗುತ್ತಿದೆ. ಹೊಸ ಇಟಿಎಂ ಹಾಲಿ ಬಟನ್ ಬದಲು ಆ್ಯಂಡ್ರಾಯ್ಡ್ ಮೊಬೈಲ್‌ನಂತೆ ಟಚ್ ಸ್ಕ್ರೀನ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಟಚ್ ಸ್ಕ್ರೀನ್ ಮೂಲಕ ಇಟಿಎಂ ಕಾರ್ಯನಿರ್ವಹಿಸುತ್ತದೆ. ಈ ಕುರಿತಂತೆ ಇಬೆಕ್ಸ್ ಕಂಪನಿ ಜೊತೆ ಕೆಎಸ್ಆರ್‌ಟಿಸಿ ಒಪ್ಪಂದ ಮಾಡಿಕೊಂಡಿದ್ದು, ರಾಜ್ಯವ್ಯಾಪಿ ಬಸ್‌ಗಳಲ್ಲಿ ಇನ್ನು ಮುಂದೆ ಇದೇ ಇಟಿಎಂ ಕಾರ್ಯನಿರ್ವಹಿಸಲಿದೆ. ಒಮ್ಮೆ ಚಾರ್ಜ್ ಮಾಡಿದರೆ 14 ಗಂಟೆಗಳ ಅವಧಿಗೆ ಸಾಕಾಗುತ್ತದೆ.
ಪ್ರತ್ಯೇಕ ವೇ ಬಿಲ್ ಅನಗತ್ಯ:
ಈ ಹೊಸ ಇಟಿಎಂ ಸ್ಕ್ರೀನ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವೇ ಬಿಲ್ ಕೂಡ ಸ್ಕ್ರೀನ್‌ನಲ್ಲೇ ಡಿಸ್‌ಪ್ಲೇ ಆಗಲಿದ್ದು, ನಿರ್ವಾಹಕರ ಕೆಲಸ ಅತ್ಯಂತ ಸುಲಭ, ಪ್ರಯಾಣಿಕ ಸ್ನೇಹಿಯಾಗುವಂತೆ ಮಾರ್ಪಡಿಸಲಾಗಿದೆ.
ರೂಟ್ ಸರ್ಚ್ ಮೂಲಕ ಸುಲಭವಾಗಿ ಟಿಕೆಟ್ ನೀಡಲು ಸಾಧ್ಯವಾಗಲಿದೆ. ಮಹಿಳೆ, ಮಕ್ಕಳು, ಹಿರಿಯ ನಾಗರಿಕರು ಸೇರಿದಂತೆ 23 ವಿಧದ ಪಾಸ್ ವಿಭಾಗವನ್ನೂ ಟಿಕೆಟ್ ಮಿಷಿನ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ. ಪ್ರಯಾಣದ ಎಲ್ಲ ಮಾಹಿತಿ ಖಚಿತಪಡಿಸಿದ ಬಳಿಕವೇ ಟಿಕೆಟ್ ಪ್ರಿಂಟ್ ನೀಡುವಂತೆ ರೂಪಿಸಲಾಗಿದೆ.
ಯಾವುದೇ ಒಂದು ಮಾಹಿತಿ ಭರ್ತಿಯಾಗದಿದ್ದರೂ ಟಿಕೆಟ್ ಪ್ರಿಂಟ್ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಗೊಂದಲ ರಹಿತವಾಗಿ ಟಿಕೆಟ್ ಮಿಷಿನ್ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗೀಯ ಸಂಚಾರ ನಿಯಂತ್ರಕ ಕಮಲ್ ಕುಮಾರ್.
ಕುಳಿತಲ್ಲೇ ಮಾಹಿತಿ ಸಂಗ್ರಹ:
ಬಸ್ ಡಿಪೋಗೆ ತೆರಳಿದ ಬಳಿಕ ನಿರ್ವಾಹಕ ದಿನದ ಪ್ರಯಾಣದ ಲೆಕ್ಕಾಚಾರವನ್ನು ವೇ ಬಿಲ್‌ನಲ್ಲಿ ಕೈಯಲ್ಲಿ ಬರೆಯುವ ಅಗತ್ಯ ಇಲ್ಲ. ಎಲ್ಲ ಲೆಕ್ಕಾಚಾರಗಳೂ ಒಂದು ಪ್ರಿಂಟ್‌ನಲ್ಲಿ ಸುಲಭದಲ್ಲಿ ಸಿಗಲಿದೆ. ಬಸ್ ಡಿಪೋ ತಲುಪಿದ ಕೂಡಲೇ ಸ್ವಯಂಚಾಲಿತವಾಗಿ ಹೊಸ ಇಟಿಎಂ ಯಂತ್ರ ವೈಫೈ ಮೂಲಕ ಸರ್ವರ್‌ನ್ನು ಸಂಪರ್ಕಿಸುತ್ತದೆ.
ಬಸ್ ಹೊರಟಲ್ಲಿಂದ ಅಂತಿಮವಾಗಿ ಡಿಪೋ ತಲುಪಲ್ಲಿ ವರೆಗೆ ಎಲ್ಲ ಮಾಹಿತಿಯೂ ವಿಭಾಗ ಮಾತ್ರವಲ್ಲ ಕೇಂದ್ರ ಕಚೇರಿ ಅಧಿಕಾರಿಗಳಿಗೂ ಸುಲಭದಲ್ಲಿ ಸಿಗಲಿದೆ. ಹೊಸ ಇಟಿಎಂನಲ್ಲಿ ಜಿಪಿಎಸ್ ವ್ಯವಸ್ಥೆ ಅಳವಡಿಸಿರುವುದರಿಂದ ಬಸ್ ಎಲ್ಲೆಲ್ಲಿ ಸಂಚರಿಸಿತು, ಸಮಯ, ಪ್ರಯಾಣಿಕರ ಸಂಖ್ಯೆ, ಆದಾಯವನ್ನು ಕೂಡ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಸಂಗ್ರಹಿಸಬಹುದು.
ನವೆಂಬರ್‌ಗೆ ಯುಪಿಐ, ಗೂಗಲ್ ಪೇ, ಸ್ವೈಪ್‌ನಲ್ಲೂ ಟಿಕೆಟ್!
ನವೆಂಬರ್ ವೇಳೆಗೆ ಪ್ರಯಾಣಿಕರು ಯುಪಿಐ, ಗೂಗಲ್ ಪೇ ಅಥವಾ ಸ್ವೈಪ್ ಮೂಲಕವೂ ಬಸ್‌ನಲ್ಲೇ ಟಿಕೆಟ್ ಖರೀದಿಗೆ ಅವಕಾಶ ಕಲ್ಪಿಸಲು ಕೆಎಸ್‌ಆರ್‌ಟಿಸಿ ಉದ್ದೇಶಿಸಿದೆ. ಇದು ಪ್ರಯಾಣಿಕ ಸಾರಿಗೆ ವಿಭಾಗದಲ್ಲಿ ಡಿಜಿಟಲ್ ಕ್ರಾಂತಿಗೆ ಕಾರಣವಾಗಲಿದೆ.
ಬಿಎಂಟಿಸಿ ಹಾಗೂ ಮಂಗಳೂರಿನಲ್ಲಿ ಖಾಸಗಿ ಸಾರಿಗೆಯೊಂದರಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಆದರೆ ಇಡೀ ಸಾರಿಗೆ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಕಾರ್ಯರೂಪಕ್ಕೆ ತರಲಾಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಚಿಲ್ಲರೆ ಸಮಸ್ಯೆ ತಲೆದೋರಲು. ಆನ್‌ಲೈನ್ ಬುಕ್ಕಿಂಗ್‌ನಿಂದ ತೊಡಗಿ ಬಸ್‌ನಲ್ಲೇ ನಗದು ರಹಿತ(ಕ್ಯಾಶ್‌ಲೆಸ್) ಟಿಕೆಟ್ ಖರೀದಿಗೆ ತೆರೆದುಕೊಳ್ಳಲಿದೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ
ಅಕ್ಟೋಬರ್‌ನಿಂದಲೇ ಕೆಎಸ್ಆರ್‌ಟಿಸಿಯಲ್ಲಿ ಹೊಸ ಸ್ಮಾರ್ಟ್ ಇಟಿಎಂ ಮೂಲಕ ಟಿಕೆಟ್ ವ್ಯವಸ್ಥೆ ಆರಂಭಿಸಲಾಗಿದೆ. ಮಂಗಳೂರು ವಿಭಾಗದ ಮಂಗಳೂರಲ್ಲಿ ಇಷ್ಟರಲ್ಲೇ ಜಾರಿಗೊಳಿಸಲಾಗಿದೆ. ಉಡುಪಿ, ಕುಂದಾಪುರಗಳಲ್ಲೂ ಒಂದು ವಾರದಲ್ಲಿ ಅನುಷ್ಠಾನಗೊಳ್ಳಲಿದೆ. ನವೆಂಬರ್ ವೇಳೆಗೆ ಕ್ಯಾಶ್‌ಲೆಸ್ ಟಿಕೆಟ್ ಖರೀದಿಯೂ ಬಸ್‌ಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ನಿರ್ವಾಹಕ ಮಾತ್ರವಲ್ಲ ಪ್ರಯಾಣಿಕ ಸ್ನೇಹಿ ವ್ಯವಸ್ಥೆ ಇದಾಗಿದೆ.
-ರಾಜೇಶ್ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಮಂಗಳೂರು ವಿಭಾಗ