ಸಾರಾಂಶ
ಬೆಳ್ತಂಗಡಿ : ಭಾರಿ ಪ್ರಮಾಣದ ಹೊಂಡಗಳು ಸೃಷ್ಟಿಯಾಗಿ ಸಂಚಾರಕ್ಕೆ ತೀವ್ರ ಅಡಚಣೆ ನೀಡುತ್ತಿರುವ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ತನಕ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕಾಮಗಾರಿ ಆರಂಭವಾಗಿದೆ.
ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ತನಕ ರಸ್ತೆಯಲ್ಲಿ ಹೊಂಡಗಳಿಂದ ಸಂಚಾರ ಪ್ರಯಾಸವಾಗಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ಆಳವಾದ ಹೊಂಡಗಳು ವಾಹನ ಸವಾರರಿಗೆ ದುಃಸ್ವಪ್ನವಾಗಿದ್ದರೆ, ರಸ್ತೆಯುದ್ದಕ್ಕೂ ಹರಿಯುವ ಕೆಸರು ನೀರು ಪಾದಾಚಾರಿಗಳಿಗೆ ಸಮಸ್ಯೆ ಉಂಟು ಮಾಡಿದೆ. ಈ ಬಗ್ಗೆ ‘ಕನ್ನಡಪ್ರಭ’ದಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಜು.5ರಂದು ಈ ರಸ್ತೆ ದುರಸ್ತಿಗೆ ಆಗ್ರಹಿಸಿ ಶಾಸಕರ ನೇತೃತ್ವದಲ್ಲಿ ಕಲ್ಲೇರಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
ಇದೀಗ ಇಲ್ಲಿ ಹೊಂಡಗಳಿಗೆ ಜಲ್ಲಿ ಹುಡಿ ಹಾಕುವ, ರಸ್ತೆಯಲ್ಲಿ ಹರಿಯುವ ನೀರನ್ನು ಬಿಡಿಸಿಕೊಡುವ ಕೆಲಸ ಆರಂಭವಾಗಿದೆ. ಆದರೆ ಜೋರಾಗಿ ಸುರಿಯುತ್ತಿರುವ ಮಳೆಗೆ ಇದು ಎಷ್ಟು ಪರಿಣಾಮಕಾರಿ ಆಗಬಹುದು ಎಂಬ ಪ್ರಶ್ನೆಯು ಮೂಡಿದೆ.
ಕಳೆದ ಮಳೆಗಾಲದಲ್ಲಿ ಇಲ್ಲಿ ಸಾಕಷ್ಟು ಹೊಂಡಗಳು ನಿರ್ಮಾಣವಾಗಿದ್ದವು. ಬಳಿಕ ಯಾವುದೇ ಕಾಮಗಾರಿ ನಡೆಯದೇ ಈ ಮಳೆಗಾಲದಲ್ಲಿ ಅವು ಮತ್ತಷ್ಟು ಬೃಹತ್ ಹೊಂಡಗಳಾಗಿವೆ. ಮಳೆಗಾಲ ಆರಂಭಕ್ಕೆ ಮೊದಲು ರಸ್ತೆ ದುರಸ್ತಿಗೊಳಿಸುತ್ತಿದ್ದರೆ ಇಂತಹ ಸ್ಥಿತಿ ಎದುರಾಗುತ್ತಿರಲಿಲ್ಲ.ಈಗ ನಡೆಯುತ್ತಿರುವ ಕಾಮಗಾರಿಯಿಂದ ಹೆಚ್ಚಿನ ಪ್ರಯೋಜನವಾಗಲಾರದು, ಇದೊಂದು ಕಣ್ಣೊರೆಸುವ ತಂತ್ರ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.