ಕುರಿ ದೊಡ್ಡಿಯಾದ ಶುದ್ಧ ಕುಡಿಯುವ ನೀರಿನ ಘಟಕಗಳು

| Published : Jun 30 2024, 12:48 AM IST

ಕುರಿ ದೊಡ್ಡಿಯಾದ ಶುದ್ಧ ಕುಡಿಯುವ ನೀರಿನ ಘಟಕಗಳು
Share this Article
  • FB
  • TW
  • Linkdin
  • Email

ಸಾರಾಂಶ

ಜನರ ದಾಹ ತೀರಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಇಂದು ಕುರಿಗಳ ಆಶ್ರಯ ತಾಣಗಳಾಗಿ ಮಾರ್ಪಟ್ಟಿವೆ.

ಘಟಕಗಳಿಗೆ ನಿರ್ವಹಣೆಯ ಕೊರತೆ । ದುಬಾರಿ ಹಣ ನೀಡಿ ನೀರು ಕುಡಿಯುವ ಸ್ಥಿತಿ ನಿರ್ಮಾಣ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಜನರ ದಾಹ ತೀರಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳು ಇಂದು ಕುರಿಗಳ ಆಶ್ರಯ ತಾಣಗಳಾಗಿ ಮಾರ್ಪಟ್ಟಿವೆ.

ತಾಲೂಕಿನಲ್ಲಿ ಸುಮಾರು 179 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 89 ಶುದ್ಧ ಕುಡಿಯುವ ನೀರಿನ ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 69 ಘಟಕಗಳು ದುರಸ್ತಿ ಹಂತದಲ್ಲಿವೆ, ಇನ್ನುಳಿದ 21 ಘಟಕಗಳ ಕ್ಯಾಬೀನ್‌ಗಳನ್ನು ಮಾತ್ರ ಸ್ಥಾಪನೆ ಮಾಡುವ ಮೂಲಕ ಕೈ ತೊಳೆದುಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಸದುದ್ದೇಶದಿಂದ ಸರ್ಕಾರ ಕೆಲ ಏಜೆನ್ಸಿಗಳಿಗೆ ಘಟಕ ಸ್ಥಾಪನೆ ಜವಾಬ್ದಾರಿ ನೀಡಿದ್ದು, ಏಜೆನ್ಸಿಯವರು ಸರಿಯಾದ ಕೆಲಸ ನಿರ್ವಹಣೆ ಮಾಡಲಾರದ ಪರಿಣಾಮ ಶುದ್ಧ ನೀರು ಒದಗಿಸಬೇಕಾದ ಘಟಕಗಳು ಇಂದು ನಿರ್ವಹಣೆ ಕೊರತೆಯಿಂದ ನಲುಗುತ್ತಿವೆ.

ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದ ಗ್ರಾಮ ಪಂಚಾಯಿತಿ ಪಿಡಿಒಗಳು ಉತ್ತಮವಾಗಿ ಹಾಗೂ ಕೆಟ್ಟು ಹೋಗಿರುವ ಜೊತೆಗೆ ಕೇವಲ ಕ್ಯಾಬಿನ್ ಹಂತದಲ್ಲಿರುವ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹೊಣೆ ಹೊತ್ತುಕೊಂಡಿದ್ದರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ ಎನ್ನಬಹುದಾಗಿದೆ.

ಏಜೆನ್ಸಿಗಳ ವಿವರ:

ಹೈಟೆಕ್, ಕೋ ಆಪರೇಟಿವ್, ಪಾನ್ ಏಸಿಯಾ, ಕೆಕೆಆರ್‌ಡಿಬಿ, ಕೆಆರ್‌ಐಡಿಎಲ್. ಎಂ.ಎಸ್. ಆಕ್ವಾ, ವೆಂಕೋಬಾ, ನರಸಿಂಹನಾಯಕ, ರಾಜು ಅಂಗಡಿ, ಶಿವಾನಂದ, ನಿರ್ಮಿತಿ, ವಾಟರ್‌ ಲೈಪ್ ಸೇರಿದಂತೆ ವಿವಿಧ ಏಜೆನ್ಸಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಹೊಣೆ ನೀಡಲಾಗಿದೆ.

ಖಾಸಗಿ ಘಟಕಗಳ ಮೊರೆ:

ಸರ್ಕಾರದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೇವಲ ₹5ಗೆ ಒಂದು ಕ್ಯಾನ್ ನೀರು ಸಿಗುತ್ತದೆ, ಆದರೆ, ಖಾಸಗಿ ಘಟಕಗಳಲ್ಲಿ ಹತ್ತರಿಂದ ಇಪ್ಪತ್ತು ರೂಪಾಯಿ ಕೊಡಬೇಕಾಗಿದ್ದು, ಅನಿವಾರ್ಯವಾಗಿ ದುಬಾರಿ ಹಣ ನೀಡಿ ನೀರು ಖರೀದಿಸಿ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.

ಘಟಕದಲ್ಲಿ ಕಸ-ಕಡ್ಡಿ ಧೂಳು:

ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಕೆಲ ಘಟಕದ ಗಾಜುಗಳನ್ನು ಒಡೆದಿದ್ದು, ಬಹುತೇಕ ಪರಿಕರಗಳು ಕಳ್ಳರ ಪಾಲಾಗಿವೆ. ಕೆಲ ಘಟಕಗಳ ಪರಿಕರಗಳು ಧೂಳಿನಲ್ಲಿ ಮಿಂದೆದ್ದಿವೆ. ಘಟಕದ ಒಳಗೆ ಕಸ ಬಿದ್ದಿದೆ. ಇದನ್ನು ಸ್ವಚ್ಛಗೊಳಿಸುವ ಕೆಲಸ ನಿಯಮಿತವಾಗಿ ನಡೆಯುತ್ತಿಲ್ಲ. ಇದು ಸಹ ಘಟಕ ದುಸ್ಥಿತಿಗೆ ಬರಲು ಮತ್ತೊಂದು ಕಾರಣ.

ಕುಷ್ಟಗಿ ತಾಲೂಕಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿರುವ ಕುರಿತು ಹಾಗೂ ಕೇವಲ ಕ್ಯಾಬಿನ್‌ಗಳನ್ನು ಹಾಕಲಾಗಿರುವ ಮಾಹಿತಿ ಇದ್ದು, ಈ ಕುರಿತು ಸಂಬಂಧಪಟ್ಟ ಏಜೆನ್ಸಿಗಳ ಗಮನಕ್ಕೂ ತರಲಾಗಿದೆ. ಅನುದಾನಕ್ಕಾಗಿ ಕಾಯುತ್ತಿದ್ದೇವೆ. ಅನುದಾನ ಬಂದ ತಕ್ಷಣ ಕೆಲಸ ಶುರು ಮಾಡಲಾಗುತ್ತದೆ ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸರಬರಾಜು ಇಲಾಖೆ ಎಇಇ ವಿಜಯಕುಮಾರ ತಿಳಿಸಿದ್ದಾರೆ.