ಬಾಟಂ.. ಶೋಷಣೆಗೆ ಕಾರ್ಮಿಕರು ಒಗ್ಗಿಕೊಂಡಿದ್ದಾರೆ: ಜೆ. ಜಯರಾಂ

| Published : May 02 2024, 12:21 AM IST

ಬಾಟಂ.. ಶೋಷಣೆಗೆ ಕಾರ್ಮಿಕರು ಒಗ್ಗಿಕೊಂಡಿದ್ದಾರೆ: ಜೆ. ಜಯರಾಂ
Share this Article
  • FB
  • TW
  • Linkdin
  • Email

ಸಾರಾಂಶ

8 ಗಂಟೆ ದುಡಿಮೆ ಅವಧಿ ಅನುಷ್ಠಾನಕ್ಕಾಗಿ ಹೋರಾಡಿ ಗೆದ್ದ ಕಾರ್ಮಿಕರು ಮೇ ದಿನಾಚರಣೆಗೆ ಕಾರಣರಾದರು. ಆದರೆ ಇಂದು ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ 12 ಗಂಟೆಗೆ ಕೆಲಸದ ಅವಧಿ ಹೆಚ್ಚಿಸಿದರೂ ಮಾತನಾಡುವವರೇ ಇಲ್ಲ. ಶೋಷಣೆಗೆ ಒಗ್ಗಿಕೊಂಡಿದ್ದು, ಇದೆಲ್ಲ ಸಹಜ ಎಂಬ ಭಾವನೆಯಲ್ಲಿ ಜನರಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಧ್ವನಿಯೆತ್ತಬೇಕಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಶೋಷಣೆಗೆ ಒಗ್ಗಿಕೊಂಡಿದ್ದು, ಇದೆಲ್ಲ ಸಹಜ ಎಂಬ ಭಾವನೆಯಲ್ಲಿ ಜನರಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು ಎಂದು ಸಿಐಟಿಯು ಜಿಲ್ಲಾ ಘಟಕದ ಜೆ. ಜಯರಾಂ ಹೇಳಿದರು.

ನಗರದ ಪುರಭವನದಲ್ಲಿ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ, ಎಐಯುಟಿಯುಸಿ, ಎಐಸಿಸಿಟಿಯು ಜಂಟಿ ಸಮಿತಿಯು ಬುಧವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

56 ಇಂಚಿನ ಎದೆ, ವಿಶ್ವಗುರು ಎಂದು ಹೊಗಳಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಮಿಕರ ದಿನಗೂಲಿಯನ್ನು 176ಕ್ಕೆ ನಿಗದಿ ಮಾಡುತ್ತಾರೆ. ಸಂವೇದನೆ ಇಲ್ಲದವರಿಂದ ಮಾತ್ರ ಇಂತಹ ನಿರ್ಧಾರ ಸಾಧ್ಯ ಎಂದರು.

8 ಗಂಟೆ ದುಡಿಮೆ ಅವಧಿ ಅನುಷ್ಠಾನಕ್ಕಾಗಿ ಹೋರಾಡಿ ಗೆದ್ದ ಕಾರ್ಮಿಕರು ಮೇ ದಿನಾಚರಣೆಗೆ ಕಾರಣರಾದರು. ಆದರೆ ಇಂದು ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ 12 ಗಂಟೆಗೆ ಕೆಲಸದ ಅವಧಿ ಹೆಚ್ಚಿಸಿದರೂ ಮಾತನಾಡುವವರೇ ಇಲ್ಲ. ಶೋಷಣೆಗೆ ಒಗ್ಗಿಕೊಂಡಿದ್ದು, ಇದೆಲ್ಲ ಸಹಜ ಎಂಬ ಭಾವನೆಯಲ್ಲಿ ಜನರಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಧ್ವನಿಯೆತ್ತಬೇಕಿದೆ ಎಂದು ಅವರು ಹೇಳಿದರು.

ಸಂಪತ್ತಿನ ಸೃಷ್ಟಿಯಲ್ಲಿ ಹಗಳಿರುಳು ದುಡಿಯುತ್ತಿರುವ ಕಾರ್ಮಿಕರಿಗೆ ಉತ್ತಮ ಆಹಾರ, ಆರೋಗ್ಯ, ಶಿಕ್ಷಣ, ಸೇವಾ ಭದ್ರತೆಯ ಅಗತ್ಯವಿದೆ. ಅದನ್ನು ಪಡೆಯಲು ನಾವು ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಅವರು ತಿಳಿಸಿದರು.

ದೆಹಲಿಯಲ್ಲಿ ಶಿಕ್ಷಣ ಹಾಗೂ ಸಮಾಜಕ್ಕಾಗಿ ಉತ್ತಮ ಕೆಲಸ ಮಾಡಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಲಾಗಿದೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ಕಾಂಗ್ರೆಸ್ ಕಾಲದಲ್ಲೂ ವಿರೋಧಿಸಿದ್ದೇವೆ. ಇಂದು ಕೂಡ ಒಗ್ಗಟ್ಟಾಗಿ ವಿರೋಧಿಸುತ್ತೇವೆ ಎಂದು ಅವರು ಹೇಳಿದರು.

ಎಲ್ಲರಿಗೂ ಮನೆ, ಶಿಕ್ಷಣ, ಆರೋಗ್ಯ ಇರಬೇಕು ಇದು ಮೇ ದಿನಾಚರಣೆ ಮಹತ್ವವನ್ನು ಹೇಳುತ್ತದೆ, ಇಂತಹ ಸರ್ಕಾರ ತರಲು ಸಾಕಷ್ಟು ಕೆಲಸವನ್ನು ಮಾಡಬೇಕು. ಕಾರ್ಮಿಕ ದಿನಾಚರಣೆಯು ಕಾರ್ಮಿಕರ ಸ್ಥಿತಿಗತಿ ಅವಲೋಕನಕ್ಕೆ ನಮ್ಮನ್ನು ಪ್ರೇರೇಪಿಸಬೇಕು. ಸಂಕಷ್ಟಕ್ಕೆ ದೂಡುತ್ತಿರುವ ಸಂಗತಿಗಳ ನಿವಾರಣೆಗೆ ಸಿದ್ಧಗೊಳಿಸಬೇಕು ಎಂದರು.

ಕಾರ್ಮಿಕ ಸಂಘಟನೆಗಳ ಮುಖಂಡ ಎಚ್.ಆರ್. ಶೇಷಾದ್ರಿ ಮಾತನಾಡಿ, ಇತ್ತೀಚೆಗೆ ಮೇ ದಿನಾಚರಣೆಯು ಸಾಂಕೇತಿಕವಾಗಿ ಉಳಿದುಕೊಂಡಿದೆ. ದಿನಾಚರಣೆಯ ಸಂಭ್ರಮವೇ ಕಾಣುತ್ತಿಲ್ಲ, ಇಂತಹ ಪರಿಸ್ಥಿತಿ ಮುಂದಿನ ದಿನಗಳನ್ನು ನೋಡಿದಾಗ ಆತಂಕವೂ ಉಂಟಾಗುತ್ತದೆ. ಸರ್ಕಾರ ಕಾನೂನು ಬದಲಾವಣೆ ಮಾಡಿ, ಕಾರ್ಪೋರೆಟ್ ಪರವಾಗಿ ಕೆಲಸ ಮಾಡುತ್ತ, ಕಾರ್ಮಿಕರ ಪರವಾಗಿ ಯಾವುದೇ ಕೆಲಸ ಮಾಡದೇ ಇದೆ ಎಂದರು.

ಕಾಯಂ ಕಾರ್ಮಿಕರ ಸಂಖ್ಯೆ ಕಡಿಮೆ ಆಗುತ್ತಿದೆ. ತಾತ್ಕಾಲಿಕ ನೌಕರರು ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅಭಿವೃದ್ಧಿ ನಾ? ದೆಹಲಿಯಲ್ಲಿ ನಡೆದ ರೈತರ ಹೋರಾಟ ಶತಮಾನದ ಅದ್ಬುತ ಹೋರಾಟ. ಇವತ್ತಿಗೂ ಅವರಿಗೆ ಪರಿಹಾರ ಸಿಕ್ಕಿಲ್ಲ. ಅದಾನಿ, ಅಂಬಾನಿ ಆಸ್ತಿ ಹೆಚ್ಚು ಮಾಡಿಕೊಂಡಿದ್ದಾರೆ. ಆದರೆ, ಬಡತನದ ಬೇಗೆಯಿಂದ ಬಳಲುತ್ತಿರುವ ಸಂಖ್ಯೆಗಳು ಬೆಳೆಯುತ್ತಿದೆ ಎಂದು ಅವರು ಹೇಳಿದರು.

ಕಾರ್ಮಿಕ ಸಂಘಟನೆಗಳ ಮುಖಂಡ ಚಂದ್ರಶೇಖರ ಮೇಟಿ ಮಾತನಾಡಿ, ಬಂಡವಾಳಶಾಹಿಗಳು ತಮ್ಮ ಸಂಸ್ಕೃತಿಯನ್ನು ಕಾರ್ಮಿಕ ವರ್ಗದ ಮೇಲೆ ಹೇರಲು ಯಶಸ್ವಿಯಾಗಿದೆ. ಇದನ್ನು ವಿಮುಕ್ತಿ ಮಾಡಬೇಕು. ಬಂಡವಾಳವಾಹಿಗಳು ಇರುವುದೇ ಶೋಷಣೆ ಮಾಡಲು, ಇದಕ್ಕೆ ವಿರುದ್ಧವಾಗಿ ಕಾರ್ಮಿಕ ಸಂಘಟನೆಗಳು ಸಾಂಸ್ಕೃತಿಕ ಹೋರಾಟ ಕಟ್ಟಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸಂಚಾಲಕ ಎನ್.ಕೆ. ದೇವದಾಸ್, ಸಂಘಟನೆಗಳ ಮುಖಂಡರಾದ ಯಶೋಧರ್, ಅಣ್ಣಪ್ಪ ಮೊದಲಾದವರು ಇದ್ದರು.