ಭಾಷೆ ಕಲಿಕೆ, ಕಲಿಸುವಲ್ಲಿ ಬದ್ಧತೆ ಕಾಣುತ್ತಿಲ್ಲ: ಡಿ.ಮಂಜುನಾಥ ವಿಷಾದ

| Published : Sep 22 2024, 02:05 AM IST

ಭಾಷೆ ಕಲಿಕೆ, ಕಲಿಸುವಲ್ಲಿ ಬದ್ಧತೆ ಕಾಣುತ್ತಿಲ್ಲ: ಡಿ.ಮಂಜುನಾಥ ವಿಷಾದ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಜಿಲ್ಲಾ ಒಕ್ಕಲಿಗರ ಸಂಘದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯವು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡದ ಸಾಂಸ್ಕೃತಿಕ ಪರಂಪರೆ ಅರಿಯದ ನಮ್ಮವರು ಬೇರೆ ಬೇರೆ ಹುನ್ನಾರ ನಡೆಸಿ ಕಲಿಕೆಯನ್ನು ಉದ್ಯಮ ಮಾಡಿಕೊಂಡು ಇಂಗ್ಲೀಷ್ ಶಿಕ್ಷಣಕ್ಕೆ ಮಾರು ಹೋಗುತ್ತಿದ್ದಾರೆ. ಇದರಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆಗಳನ್ನು ನಾಶ ಮಾಡುವ ಪ್ರಕ್ರಿಯೆ ನೋಡುತ್ತಿದ್ದೇವೆ. ಹಗಲು ಕಂಡ ಬಾವಿಗೆ ರಾತ್ರಿ ಬಿದ್ದಂತೆ ಎನ್ನುವ ಗಾದೆಯಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಅವರು ಜಿಲ್ಲಾ ಒಕ್ಕಲಿಗರ ಸಂಘದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯವು ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಯುವ ಜನತೆ ಮತ್ತು ಕನ್ನಡ ಸಾಂಸ್ಕೃತಿಕ ಪರಂಪರೆ ವಿಚಾರವಾಗಿ ಮಾತನಾಡಿದ ಅವರು, ಕನ್ನಡ ಭಾಷೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತು ಎನ್ನುವುದನ್ನು ಹಲ್ಮಿಡಿ ಶಾಸನ ಹೇಳುತ್ತೆ. ಇತ್ತೀಚಿನ ತಾಳಗುಂದದ ಶಾಸನ ಮತ್ತಷ್ಟು ವರ್ಷಗಳ ಹಿಂದೆಯೇ ಬಳಕೆಯಲ್ಲಿ ಇದ್ದುದ್ದನ್ನು ಸಾರಿದೆ. ಸಾಹಿತ್ಯ ಪರಂಪರೆಯನ್ನು ನೋಡಿದಾಗ ನೃಪತುಂಗನ ಕಾಲದಲ್ಲಿ ಶ್ರೀವಿಜಯ ಬರೆದ ಕವಿರಾಜಮಾರ್ಗ ಕೃತಿ ಮೊದಲ ಕೃತಿ ಎಂದರೂ ಸುಮಾರು ಒಂದೂವರೆ ಸಾವಿರ ವರ್ಷಗಳ ಸಾಹಿತ್ಯದ ಇತಿಹಾಸವಿದೆ ಎಂದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ದೊರೆತಿದೆ. ಬಹುತ್ವದ ಭಾರತದಲ್ಲಿ ಸಾವಿರಾರು ಭಾಷೆಗಳ ನಡುವೆ ನಮ್ಮ ಭಾಷೆಗೆ ಆ ಸ್ಥಾನ ದೊರೆತಿರುವುದು ಹೆಮ್ಮೆಯಲ್ಲವೇ? ಎಂದರು. ಮಾತೃಭಾಷೆ ಅಥವಾ ಪರಿಸರದ ಭಾಷೆ ಚೆನ್ನಾಗಿ ಕಲಿತಾಗ ಉಳಿದ ಭಾಷೆಗಳನ್ನು ಕಲಿಯಲು ಸಹಕಾರಿಯಾಗುತ್ತೆ. ಆದರೆ, ಆ ಮಕ್ಕಳಿಗೆ ಅಮ್ಮನ ಭಾಷೆಯನ್ನು ಮರೆಮಾಚಿದರೆ ಅದರಿಂದ ಆಗುತ್ತಿರುವ ಪರಿಣಾಮ ಏನು ಅರಿವಾಗಬೇಕಿದೆ. ನಮ್ಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಫಲಿತಾಂಶ, ಅಂಕಗಳು ಗುಣಮಟ್ಟವನ್ನು ಕಳಪೆ ಮಾಡುತ್ತಿದೆ. ಭಾಷಾ ಕಲಿಕೆಯಲ್ಲಿ, ಕಲಿಸುವಲ್ಲಿ ಬದ್ಧತೆ ಕಾಣದಾಗಿದೆ ಎಂದು ವಿವರಿಸಿದರು.

ಉಪನ್ಯಾಸಕರಾದ ಎಸ್.ಎಂ.ಜಗದೀಶ್, ಕೆ. ಜಿ. ದಿವಾಕರ್, ಎಂ. ಜಿ. ನಾಗರಾಜ್ ಮುನ್ನೂರಳ್ಳಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ವನಮಾಲ ಮೋಹನ್, ಸಹನಾ ಸುಭಾಷ್, ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮಾ ಸತೀಶ್, ಸಂಘದ ಖಜಾಂಚಿ ಕೆ.ವಿ.ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಕ್ರಮಾಧಿಕಾರಿ ಎನ್. ಜೆ.ಪ್ರಕಾಶ್ ಉಪಸ್ಥಿತರಿದ್ದರು.