ಹಾನಗಲ್ಲ ತಾಲೂಕಲ್ಲಿ ಡೆಂಘೀ ನಿಯಂತ್ರಣಕ್ಕೆ ಸಮನ್ವಯದ ಕೊರತೆ

| Published : Jun 29 2024, 12:36 AM IST

ಸಾರಾಂಶ

ಡೆಂಘೀ ನಿಯಂತ್ರಣಕ್ಕೆ ಬರುತ್ತಿಲ್ಲ, ಸಾರ್ವಜನಿಕರ ಸಹಕಾರವಿಲ್ಲ. ಫಾಗಿಂಗ್ ವಿಷಯದಲ್ಲಿ ಸ್ಪಷ್ಟತೆ ಇಲ್ಲ, ಸಮನ್ವಯದ ಕೊರತೆ, ಮೀಟಿಂಗಿಗೆ ಸೀಮಿತ ವರದಿಯಾಗುತ್ತಿದೆ ಎಂಬ ದೂರುಗಳು ಡೆಂಘೀ ನಿಯಂತ್ರಣದ ದಿನ ಅಧಿಕಾರಿಗಳ ನಡುವೆ ಗಂಭೀರ ಚರ್ಚೆಗೆ ಗ್ರಾಸವಾದವು.

ಹಾನಗಲ್ಲ: ಡೆಂಘೀ ನಿಯಂತ್ರಣಕ್ಕೆ ಬರುತ್ತಿಲ್ಲ, ಸಾರ್ವಜನಿಕರ ಸಹಕಾರವಿಲ್ಲ. ಫಾಗಿಂಗ್ ವಿಷಯದಲ್ಲಿ ಸ್ಪಷ್ಟತೆ ಇಲ್ಲ, ಸಮನ್ವಯದ ಕೊರತೆ, ಮೀಟಿಂಗಿಗೆ ಸೀಮಿತ ವರದಿಯಾಗುತ್ತಿದೆ ಎಂಬ ದೂರುಗಳು ಡೆಂಘೀ ನಿಯಂತ್ರಣದ ದಿನ ಅಧಿಕಾರಿಗಳ ನಡುವೆ ಗಂಭೀರ ಚರ್ಚೆಗೆ ಗ್ರಾಸವಾದವು.ಶುಕ್ರವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ತಹಸೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯ, ಪುರಸಭೆ, ತಾಲೂಕು ಪಂಚಾಯತ್ ಅಧಿಕಾರಿಗಳು, ತಾಲೂಕಿನ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.ಚರ್ಚೆಯ ನಂತರ ಮಾತನಾಡಿದ ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ, ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು. ನಾನು ಸ್ವತಃ ಹಳ್ಳಿಗಳು ಹಾಗೂ ಪುರಸಭೆಯಲ್ಲಿನ ಬಡಾವಣೆಗಳಿಗೆ ಭೇಟಿ ನೀಡುತ್ತೇನೆ. ಅರಳೇಶ್ವರ ಗ್ರಾಮ ಪಂಚಾಯತಿಯ ಹೋತನಹಳ್ಳಿಯಲ್ಲಿ ೧೦ ಡೆಂಘೀ ಪ್ರಕರಣಗಳಿವೆ ಎಂದು ಸಭೆಯ ಗಮನ ಸೆಳೆದರು.ಚರ್ಚೆಯ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ಲಿಂಗರಾಜ ಅವರು ನೀಡುವ ಉತ್ತರಗಳಿಗೆ ಅಸಮಾಧಾನಗೊಂಡ ತಹಸೀಲ್ದಾರ ರೇಣುಕಮ್ಮ, ಸಬೂಬು ಹೇಳಿ, ಸರಿಯಾದ ಮಾಹಿತಿ ಇಲ್ಲದೆ ಉತ್ತರ ಹೇಳಿ ಹೋಗುವುದು ಬೇಡ. ಸರಿಯಾದ ರೀತಿಯಲ್ಲಿ ಸ್ವಚ್ಛತೆಗೆ ಗಮನ ಕೊಡಲು ಕ್ರಮ ಜರುಗಿಸಿರಿ. ತಾಪಂ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಇದನ್ನು ಅರಿತು ಸಾರ್ವಜನಿಕರ ಸಹಕಾರ ಪಡೆದರೆ ಎಲ್ಲವೂ ಸಾಧ್ಯ ಎಂದು ಯುದ್ಧೋಪಾದಿಯಲ್ಲಿ ಕ್ರಮಕ್ಕೆ ಸೂಚಿಸಿದರು.ಅಂಗನವಾಡಿ ಕಾರ್ಯಕರ್ತೆಯರು, ಪ್ರೌಢ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಭೆ ಮಾಡಿ ಜಾಗೃತಿಗೆ ಮುಂದಾಗಬೇಕು. ಸಮವಸ್ತ್ರದ ಬದಲು ಶಾಲಾ ಮಕ್ಕಳಿಗೆ ಮೈತುಂಬ ಬಟ್ಟೆ ಹಾಕಿಕೊಳ್ಳಲು ಕ್ರಮ ಜರುಗಿಸಬೇಕು. ಶಾಲೆಗಳಲ್ಲಿ ಸ್ವಚ್ಛತೆಗೆ ಕ್ರಮ ಅತ್ಯಗತ್ಯ. ನಗರ ಗ್ರಾಮಗಳಲ್ಲಿ ಸ್ವಚ್ಛತೆಯ ವಿಷಯದಲ್ಲಿ ತೀರ ನಿರ್ಲಕ್ಷ್ಯವಿದೆ. ಹಾನಗಲ್ಲ ಪಟ್ಟಣದಲ್ಲಿಯಂತೂ ಗಟಾರಗಳ ನೀರು ಎಲ್ಲೆಂದರಲ್ಲಿ ಹರಿದು ರೋಗಾಣುಗಳ ತಾಣವಾಗುತ್ತಿದೆ. ಇದಕ್ಕೆ ಕ್ರಮಗಳಿಲ್ಲ. ಲಾರ್ವಾ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮ ಬೇಕೆ ಬೇಕು. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಡೆಂಘೀ ಪ್ರಕರಣ ಇಲ್ಲಿವೆ ಎಂಬ ವಿಷಯದ ಚರ್ಚೆ ಹಾಗೂ ಸಲಹೆಗಳನ್ನು ಅಧಿಕಾರಿಗಳಿಗೆ ನೀಡಲಾಯಿತು.ತಾಲೂಕು ವೈದ್ಯಾಧಿಕಾರಿ ಡಾ.ಲಿಂಗರಾಜ ಮಾತನಾಡಿ, ತಾಲೂಕಿನಲ್ಲಿ ೧೫೬ ಡೆಂಘೀ ಪ್ರಕರಣಗಳು ಕಂಡು ಬಂದು ಈಗ ಎಲ್ಲರೂ ಗುಣಮುಖರಾಗಿದ್ದಾರೆ. ಎಲ್ಲಾ ಜ್ವರ ಇರುವವರು ಡೆಂಘೀ ಪೀಡಿತರಲ್ಲ. ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ ೧೦೦ ಬೆಡ್‌ಗಳಿವೆ. ಆದರೆ ರೋಗಿಗಳ ಸಂಖ್ಯೆ ಮಾತ್ರ ಹೆಚ್ಚಿದೆ. ಡೆಂಘೀ ರೋಗಿಗಳು ಹಾಗೂ ಇತರ ರೋಗಿಗಳನ್ನು ಪ್ರತ್ಯೇಕವಾಗಿಡಲು ಇಲ್ಲಿ ವ್ಯವಸ್ಥೆ ಇಲ್ಲ. ಆದಾಗ್ಯೂ ಸುರಕ್ಷತೆ, ಆರೋಗ್ಯ ರಕ್ಷಣೆಗೆ ಕ್ರಮ ಜರುಗಿಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.ಶುಕ್ರವಾರ ಡೆಂಘೀ ದಿನ :ರಾಜ್ಯದಲ್ಲಿ ಪ್ರತಿ ಶುಕ್ರವಾರ ಡೆಂಘೀ ಜಾಗೃತಿ ದಿನವಾಗಿ ಆಚರಿಸಿ ಆ ದಿನ ಪಟ್ಟಣದ ಎಲ್ಲ ಬಡಾವಣೆಗಳು ಹಾಗೂ ಗ್ರಾಮಗಳಲ್ಲಿ ವಿಶೇಷ ಕಾಳಜಿಯ ದಿನವಾಗಿ ಆರೋಗ್ಯ ಹಾಗೂ ತಾಲೂಕು ಪಂಚಾಯತ್ ನೌಕರರು ಮನೆ ಮನೆಗೆ ಭೇಟಿ ನೀಡಿ ಶುದ್ಧ ನೀರು ಬಳಕೆ. ಕೊಳಚೆ ನೀರು ನಿರ್ಮೂಲನೆಗೆ ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್‌ ರೇಣುಕಮ್ಮ ಸೂಚಿಸಿದರು.ಪ್ರತಿ ಶುಕ್ರವಾರ ದಿನವನ್ನು ಸಾರ್ವಜನಿಕರು ಮನೆಯಲ್ಲಿನ ನೀರಿನ ಸಂಗ್ರಹವನ್ನು ಚೆಲ್ಲಿ ಮರುಪೂರಣ ಮಾಡುವುದು ಒಳ್ಳೆಯದು. ಇದರಿಂದ ಡೆಂಘೀ ಉತ್ಪಾದನೆಯಾಗುವ ಲಾರ್ವಾ ನಿರ್ಮೂಲನೆ ಸಾಧ್ಯ. ಇದು ತಾಲೂಕಿನ ಎಲ್ಲ ಹಳ್ಳಿ, ಪಟ್ಟಣಗಳಲ್ಲಿ ಜಾಗೃತವಾಗಬೇಕು ಎಂದು ಶ್ರೀಕಾಂತ ಪಾಟೀಲ ಸಲಹೆ ನೀಡಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ತಾಲೂಕು ಪಂಚಾಯತ್ ಅಧಿಕಾರಿ ಚನ್ನಬಸಪ್ಪ ಹಾವಣಗಿ, ಚನ್ನವೀರಪ್ಪ ರೂಡಗಿ, ಶ್ರೀಕಾಂತ ಪಾಟೀಲ, ಡಾ. ಸ್ವಾತಿ ಉರಣಕರ ಇದ್ದರು.