ಸಾರಾಂಶ
ತಾಲೂಕಿನಾದ್ಯಂತ ರೈತರು ಶೇಂಗಾ ಬೆಳೆಯಲು ಉತ್ಸಹಕಾರಾಗಿದ್ದರು. ಆದರೆ ದಿಢೀರನೆ ಮಳೆ ಕೈಕೊಟ್ಟ ಹಿನ್ನೆಲೆ ರೈತರು ಕೃಷಿ ಇಲಾಖೆ ಸಲಹೆ ಮೇರೆಗೆ ಶೇಂಗಾ ಪರ್ಯಾಯ ಬೆಳೆಯಾಗಿ ಸಿರಿಧಾನ್ಯ ಬೆಳೆಯಾದ ಸಾವೆ ಬೆಳೆಯಲು ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನಾದ್ಯಂತ ರೈತರು ಶೇಂಗಾ ಬೆಳೆಯಲು ಉತ್ಸಹಕಾರಾಗಿದ್ದರು. ಆದರೆ ದಿಢೀರನೆ ಮಳೆ ಕೈಕೊಟ್ಟ ಹಿನ್ನೆಲೆ ರೈತರು ಕೃಷಿ ಇಲಾಖೆ ಸಲಹೆ ಮೇರೆಗೆ ಶೇಂಗಾ ಪರ್ಯಾಯ ಬೆಳೆಯಾಗಿ ಸಿರಿಧಾನ್ಯ ಬೆಳೆಯಾದ ಸಾವೆ ಬೆಳೆಯಲು ಆರಂಭಿಸಿದ್ದಾರೆ.ಇದೇ ಮೊದಲ ಬಾರಿಗೆ ಚಳ್ಳಕೆರೆ ತಾಲೂಕಿನಾದ್ಯಂತ ಸಾವೆ ಬೆಳೆಯನ್ನು ಪರ್ಯಾಯ ಬೆಳೆಯನ್ನಾಗಿ ಅನೇಕ ರೈತರು ಆಯ್ಕೆ ಮಾಡಿಕೊಂಡಿರುವುದು. ಸುಮಾರು 1845 ಹೆಕ್ಟೇರ್ ಪ್ರದೇಶದಲ್ಲಿ ಸಾವೆ ಬೆಳೆ ಬಿತ್ತನೆಯಾಗಿದೆ. ಆದರೆ, ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಹುತೇಕ ಸಾವೆ ಬೆಳೆ ಈಗಾಗಲೇ ಒಣಗಲಾರಂಭಿಸಿದ್ದು ಸಾವೆ ಬಿತ್ತನೆ ಮಾಡಿದ ರೈತರು ಈಗ ಕಂಗಾಲಾಗಿದ್ದಾರೆ.
ತಾಲೂಕಿನ ಹುಲಿಕುಂಟೆ, ತೊರೆಬೀರನಹಳ್ಳಿ, ಜಡೇಕುಂಟೆ, ಕಾಪರಹಳ್ಳಿ, ಕಲಮರಹಳ್ಳಿ, ಬೆಳಗೆರೆ, ನಾರಾಯಣಪುರ, ಗೋಸಿಕೆರೆ ಗರ‍್ಲತ್ತು ಮುಂತಾದ ಕಡೆಗಳಲ್ಲಿ ಶೇ.73ರಷ್ಟು ರೈತರು ಸಾವೆಯನ್ನುಬಿತ್ತೆನೆ ಮಾಡಿದ್ದಾರೆ. ಆದರೆ, ಎಲ್ಲೂ ಸಹ ಉತ್ತಮ ಬೆಳೆಯಾಗಿಲ್ಲ. ರೈತರು ಬಿತ್ತನೆ ಮಾಡಿದ್ದ ಸಾವೆ ಈಗಾಗಲೇ ನೀರಿನ ಕೊರತೆಯಿಂದ ನೆಲಕಚ್ಚಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಸಾವೆ ಬೆಳೆಯನ್ನು ಬೆಳೆದಿದ್ದ ರೈತ ಈಗ ಬೀದಿಪಾಲಾಗುವ ಸ್ಥಿತಿ ಉಂಟಾಗಿದೆ.ಹುಲಿಕುಂಟೆ ಗ್ರಾಮದ ರೈತ ನಾಗರಾಜು ತನ್ನ 40 ಎಕರೆ ಜಮೀನಿನಲ್ಲಿ ಸುಮಾರು 4 ಲಕ್ಷ ಹಣ ಖರ್ಚು ಮಾಡಿ ಸಾವೆ ಬಿತ್ತನೆ ಮಾಡಿದ್ದಾರೆ. ಅದೇ ಗ್ರಾಮದ ರೈತ ರಂಗಸ್ವಾಮಿ ಸುಮಾರು 2.50 ಲಕ್ಷ ವೆಚ್ಚ ಮಾಡಿ 21 ಎಕರೆ ಸಾವೆಯನ್ನು ಬಿತ್ತನೆ ಮಾಡಿದ್ದರು. ಬನಜ್ಜರನಾಗರಾಜು 10 ಎಕರೆ ಸೇರಿದಂತೆ ನೂರಾರು ರೈತರು ಸಾವೆ ಬೆಳೆಯನ್ನು ಬಿತ್ತನೆ ಮಾಡಿ ಮಳೆಯ ಕೊರತೆಯಿಂದ ಈಗ ಕಂಗಾಲಾಗಿದ್ಧಾರೆ. ಸರ್ಕಾರದಿಂದ ಬೆಳೆ ಪರಿಹಾರ ಪಡೆಯಬಹುದು ಎಂಬ ಚಿಂತನೆಯಲ್ಲಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಮಾಹಿತಿ ನೀಡಿ, ರೈತ ಬಾಂಧವರಿಗೆ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಬೆಳೆಯುವಂತೆ ಸಲಹೆ ನೀಡಲಾಗಿತ್ತು. ಸಿರಿಧಾನ್ಯಗಳಲ್ಲಿ ಒಂದಾದ ಸಾವೆಯನ್ನು ಹಲವಾರು ರೈತರು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಿದ್ದಾರೆ. ಕೇವಲ ಮೂರು ತಿಂಗಳಲ್ಲಿ ಸಾವೆ ಬೆಳೆ ಬೆಳೆಯಬಹುದಾಗಿದೆ. ಆದರೆ, ಪ್ರಸ್ತುತ ವರ್ಷವೂ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಜೂನ್ ತಿಂಗಳಲ್ಲಿ ಮಳೆ ಪೂರ್ಣ ಪ್ರಮಾಣದಲ್ಲಿ ನಿಂತಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವೆ ಬೆಳೆಯಲು ಸಾಧ್ಯವಾಗಿಲ್ಲ. ಸರ್ಕಾರ ರೈತ ಸಿರಿ ಯೋಜನೆಯಲ್ಲಿ ಸಾವೆ ಬೆಳೆಗೆ ಪ್ರತಿ ಹೆಕ್ಟೇರ್ಗೆ 10000 5 ಎಕರೆಗೆ 20000 ಸಾವಿರ ಪರಿಹಾರ ಧನ ನೀಡಲಿದೆ ಎಂದು ತಿಳಿಸಿದ್ಧಾರೆ.