ಸಾರಾಂಶ
ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯಕ್ತರು, ಎಂಜಿನಿಯರ್, ಆರೋಗ್ಯ ನಿರೀಕ್ಷಕರು ಸೇರಿದಂತೆ ಪಾಲಿಕೆ ಅಧಿಕಾರಿಗಳು ನಿರಂತರ ಪ್ರತಿ ಗಲ್ಲಿ ಗಲ್ಲಿಗಳನ್ನು ಸುತ್ತುವ ಜತೆಗೆ ಮೇಲ್ವಿಚಾರಣೆ ನಡೆಸಬೇಕು.
ಹುಬ್ಬಳ್ಳಿ: ಸಚಿವ ಸಂತೋಷ ಲಾಡ್ ಭಾನುವಾರ ಬೆಳಂಬೆಳಗ್ಗೆ ಬೀದಿಗಿಳಿದು ನಗರದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡರು. ನಗರದಲ್ಲಿ ಅಲ್ಲಲ್ಲಿ ಕಂಡುಬರುತ್ತಿದ್ದ ಕಸದ ರಾಶಿಗಳನ್ನು ನೋಡಿ ಬೇಸತ್ತತ್ತಿಂದ ಅವರು ಅಧಿಕಾರಿಗಳು, ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡರು. ನಗರದ ಹಲವೆಡೆ ಮಿಂಚಿನ ಸಂಚಾರ ಕೈಗೊಂಡು ಅಧಿಕಾರಿಗಳು, ಸಾರ್ವಜನಿಕರಿಗೆ ಸ್ವಚ್ಛತಾ ಪಾಠ ಮಾಡಿದರು.
ಇಲ್ಲಿಯ ಸಿದ್ಧಾರೂಢ ಮಠ, ಹೆಗ್ಗೇರಿ ಕಾಲನಿ, ಗಣೇಶನಗರ, ಆನಂದನಗರ ಸರ್ಕಲ್, ರಾಮಲಿಂಗೇಶ್ವರ ನಗರ, ಗಾಂಧಿವಾಡ, ಕೇಶ್ವಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪೌರಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ನಗರ ಸ್ವಚ್ಛತೆ, ನೈರ್ಮಲ್ಯತೆ ಬಗ್ಗೆ ಜಾಗೃತಿ ಮೂಡಿಸಿದರು.ಸ್ವತಃ ಸಚಿವರು ತ್ಯಾಜ್ಯ, ಚರಂಡಿ ಸ್ವಚ್ಛಗೊಳಿಸುವ ಪರಿಕರಗಳ ಮೂಲಕ ಗಟಾರು ಶುಚಿಗೊಳಿಸುವ ಕಾರ್ಯ, ರಸ್ತೆ ಬದಿಯಲ್ಲಿ ಚೆಲ್ಲಿದ ಕಸ ತುಂಬಿದರು. ಗಬ್ಬೆದ್ದು ನಾರುವ ರಸ್ತೆಯ ಬದಿಯಲ್ಲಿ ಅಧಿಕಾರಿಗಳನ್ನು ಕರೆದು, ಇಂತಹ ವಾತಾವರಣದಲ್ಲಿ ಇರಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೇ, ಪಾಲಿಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಚರಂಡಿ, ನಾಲೆಗಳಲ್ಲಿ ಅರ್ಧ ಭಾಗ ಹೂಳು ತುಂಬಿಕೊಂಡಿದ್ದು, ಮಳೆಯಾದಾಗ ನೀರು ಹರಿಯಲು ಸೂಕ್ತ ದಾರಿಯಿಲ್ಲದೇ ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ. ಇದೆಲ್ಲವೂ ಅಧಿಕಾರಿಗಳಿಗೆ ಗೊತ್ತಿದ್ದರೂ ಸ್ವಚ್ಛಗೊಳಿಸಿಲ್ಲ. ಸಾರ್ವಜನಿಕರೂ ಬೇಕಾಬಿಟ್ಟಿಯಾಗಿ ನಾಲೆ, ಚರಂಡಿಗಳಿಗೆ ಕಸ ಚೆಲ್ಲುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಜತೆಗೆ ನಗರ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಖಾಲಿ ಸೈಟ್ ಮಾಲೀಕರಿಗೆ ಮತ್ತು ರಸ್ತೆಯಲ್ಲಿ ಕಸ ಚೆಲ್ಲುವವರನ್ನು ಗುರುತಿಸಿ ದಂಡ ಹಾಕಬೇಕು. ಈಗಾಗಲೇ ಪಾಲಿಕೆಯು 622 ಬ್ಲ್ಯಾಕ್ ಸ್ಪಾಟ್, 82 ಸಾವಿರಕ್ಕೂ ಅಧಿಕ ಖಾಲಿ ಸೈಟ್‌ಗಳನ್ನು ಗುರುತಿಸಿದೆ. ಆದರೆ, ಅವುಗಳ ಸುಧಾರಣೆಗೆ ಕ್ರಮವಹಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯಕ್ತರು, ಎಂಜಿನಿಯರ್, ಆರೋಗ್ಯ ನಿರೀಕ್ಷಕರು ಸೇರಿದಂತೆ ಪಾಲಿಕೆ ಅಧಿಕಾರಿಗಳು ನಿರಂತರ ಪ್ರತಿ ಗಲ್ಲಿ ಗಲ್ಲಿಗಳನ್ನು ಸುತ್ತುವ ಜತೆಗೆ ಮೇಲ್ವಿಚಾರಣೆ ನಡೆಸಬೇಕು. ಸರ್ಕಾರಿ ರಜಾ ದಿನ ಹಾಗೂ ಭಾನುವಾರಗಳಂದು ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಎನ್‌ಎಸ್‌ಎಸ್ ಹಾಗೂ ಇತರ ಸ್ವಯಂ ಸೇವಾ ಸಂಘಟನೆಗಳ ಸಹಯೋಗದಲ್ಲಿ ನಗರ ನೈರ್ಮಲ್ಯಕ್ಕಾಗಿ ಕಾರ್ಯಕ್ರಮ ರೂಪಿಸಿ ಜಾರಿಗೊಳಿಸಬೇಕು. ಇದಕ್ಕೆ ನಾನೂ ಸಹಕಾರ ನೀಡುತ್ತೇನೆ ಅಲ್ಲದೇ, ತಿಂಗಳಲ್ಲಿ ನಾಲ್ಕೈದು ದಿನ ಸ್ವಚ್ಛತಾ ಅಭಿಯಾನ ನಡೆಸಲು ಸಿದ್ಧ ಎಂದು ತಿಳಿಸಿದರು.ಇದೇ ವೇಳೆ ಮಾತನಾಡಿದ ಶಾಸಕ ಪ್ರಸಾದ ಅಬ್ಬಯ್ಯ, ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಮತ್ತು ಪೌರಕಾರ್ಮಿಕರು ಸೇರಿ 100 ಜನರ ತಂಡಗಳನ್ನು ಮಾಡಿಕೊಂಡು ಪ್ರತಿ ವಾರ ಒಂದೊಂದು ವಾರ್ಡ್‌ಗೆ ಒಂದು ತಂಡ ಕಳಿಸಿ, ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಈಗ ಮಳೆಗಾಲ ಆರಂಭವಾಗಿರುವದರಿಂದ ಅಧಿಕಾರಿಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು.
ಈ ವೇಳೆ ವಿವಿಧ ಬಡಾವಣೆಗಳ ಸಾರ್ವಜನಿಕರು ಬಡಾವಣೆ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು. ನಗರ ನೈರ್ಮಲ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಚಿವರು ಮನವಿ ಮಾಡಿದರು.ಜಿಲ್ಲಾಧಿಕಾರಿ ದಿವ್ಯಪ್ರಭು, ಮೇಯರ್ ರಾಮಪ್ಪ ಬಡಿಗೇರ, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಡಿಸಿಪಿ ಮಹಾನಿಂಗ ನಂದಗಾವಿ, ಐಎಎಸ್ ಪ್ರೊಬೇಷನರಿ ಅಧಿಕಾರಿ ರಿತಿಕಾ ವರ್ಮಾ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಪಾಲಿಕೆ ಅಧೀಕ್ಷಕ ಎಂಜಿನಿಯರ್ ಆರ್. ವಿಜಯಕುಮಾರ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಮುಖಂಡರಾದ ರಾಜಣ್ಣ ಕೊರವಿ, ನಾಗರಾಜ ಗೌರಿ, ದೀಪಕ ಚಿಂಚೋರೆ, ಸುವರ್ಣಾ ಕಲ್ಲಕುಂಟ್ಲಾ ಇದ್ದರು.
ಸ್ವಾಭಿಮಾನ ಇರಲಿ: ನಮ್ಮ ನಗರ, ಸ್ವಚ್ಛ ನಗರ ಎಂಬ ಅಭಿಮಾನ, ಪ್ರೀತಿ ಪ್ರತಿಯೊಬ್ಬ ನಾಗರಿಕರಲ್ಲಿ ಮೂಡಬೇಕು. ಅಂದಾಗ ನಮ್ಮ ನಗರ ಸ್ವಚ್ಛ ಹಾಗೂ ಸುಂದರ ನಗರವಾಗಿ ರೂಪಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜಿಕರಲ್ಲಿ ಜಾಗೃತಿ ಮೂಡಿಸಲು ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಸ್ವಚ್ಛತಾ ಅಭಿಯಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಳೆಯಿಂದ ಸಾಕಷ್ಟು ಅವಾಂತರ ಉಂಟಾಗಿದೆ. ಈಗಾಗಲೇ ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ತಾವು ಡಿಸಿ, ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ಕೂಡ ನಡೆಸಿದ್ದೇವೆ. ಸದ್ಯ ರಸ್ತೆ ಕೆಳಮಟ್ಟಮತ್ತು ತಗ್ಗು ಪ್ರದೇಶದಲ್ಲಿ ಮನೆ ನಿರ್ಮಾಣ, ಪ್ಲಾನ್ ಇಲ್ಲದೇ ನಗರ ಅಭಿವೃದ್ಧಿಗೊಳಿಸಿದ್ದರಿಂದ ಇಂತಹ ಸಮಸ್ಯೆಗಳು ಉಂಟಾಗುತ್ತಿದೆ. ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಹು-ಧಾ ಮಹಾನಗರದಲ್ಲಿ 82 ಸಾವಿರಕ್ಕೂ ಅಧಿಕ ಖಾಲಿ ಸೈಟ್‌ಗಳಿದ್ದು, ಮಾಲೀಕರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈಗಾಗಲೇ ದಂಡ ಪ್ರಕ್ರಿಯೆ ನಡೆದಿದೆ. ಈ ಮಧ್ಯೆ ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಎಚ್ಚೆತ್ತು ಸ್ವಯಂ ಪ್ರೇರಣೆಯಿಂದ ಸಹಕಾರ ನೀಡಬೇಕು. ಇಲ್ಲದಿದ್ದರೆ, ಹೆಚ್ಚಿನ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.