ಕುಂಡ್ಯೋಳಂಡ ಹಾಕಿ ನಮ್ಮೆ ಲಾಂಛನ ಬಿಡುಗಡೆ

| Published : Jan 01 2024, 01:15 AM IST

ಕುಂಡ್ಯೋಳಂಡ ಹಾಕಿ ನಮ್ಮೆ ಲಾಂಛನ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಡ್ಯೋಳಂಡ ಹಾಕಿ ನಮ್ಮೆಯ ಲಾಂಛನ ಬಿಡುಗಡೆ ಸಮಾರಂಭ ನಡೆಯಿತು. ಈ ಟೂರ್ನಿಗೆ ಅಧಿಕ ಅನುದಾನ ನೀಡುವ ಬಗ್ಗೆ ಸಂಸದ ಪ್ರತಾಪ್‌ ಸಿಂಹ ಭರವಸೆ ನಿಡಿದರು. ಇಲ್ಲಿವೆರೆಗೆ ಹಾಕಿ ಆಯೋಜಿಸಿದವರು ಸಲಹೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಜಿಲ್ಲೆಯಲ್ಲಿ ಪ್ರತಿ ವರ್ಷ ಕೊಡವ ಕೌಟುಂಬಿಕ ಹಾಕಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ವರ್ಷಂಪ್ರತಿ ನಡೆಯುವ ಕ್ರೀಡಾ ಉತ್ಸವಕ್ಕೆ ಅನುದಾನವನ್ನು ನೀಡಿದ್ದೇನೆ. ಈ ವರ್ಷವೂ ಕುಂಡ್ಯೋಳಂಡ ಹಾಕಿ ಟೂರ್ನಮೆಂಟ್‌ಗಾಗಿ ಮೈಸೂರಿನ ದಾನಿಗಳಿಂದ ಪ್ರಾಯೋಜಕತ್ವವನ್ನು ಹಾಗೂ ಸಂಸದರ ನಿಧಿಯಿಂದ ಹೆಚ್ಚಿನ ಅನುದಾನ ಕೊಡುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಇಲ್ಲಿನ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕೊಡವ ಕುಟುಂಬಗಳ ನಡುವೆ 2024ರಲ್ಲಿ ನಡೆಯಲಿರುವ ಕುಂಡ್ಯೋಳಂಡ ಹಾಕಿ ನಮ್ಮೆಯ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.ಲಕ್ಕಿಡಿಪ್‌ ಬುಕ್ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕೊಡವ ಹಾಕಿ ನಮ್ಮೆ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಕೊಡವ ಕೌಟುಂಬಿಕ ಹಾಕಿ ಉತ್ಸವ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಹಾಕಿ ಟೂರ್ನಮೆಂಟ್ ಅನ್ನು ಯಶಸ್ವಿಯಾಗಿ ನಡೆಸಿಕೊಡುವ ಜವಾಬ್ದಾರಿ ಟೂರ್ನಮೆಂಟ್ ಡೈರೆಕ್ಟರ್ ಅವರದ್ದು ಆಗಿರುತ್ತದೆ. 25ನೇ ವರ್ಷದ ಹಾಕಿ ಟೂರ್ನಮೆಂಟ್‌ನಲ್ಲಿ ಈ ವರೆಗೆ ವಿಜೇತರಾದ ಹಾಗೂ ರನ್ನರ್ ಅಪ್ ಸ್ಥಾನ ಗಳಿಸಿದ ತಂಡಗಳಿಗೆ ಟ್ರೋಫಿ ನೀಡಲಾಗುತ್ತದೆ ಎಂದರು.

ಹಾಕಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಹಾಗೂ ಒಲಂಪಿಯನ್ ಡಾ.ಅಂಜಪರವಂಡ ಬಿ. ಸುಬ್ಬಯ್ಯ, ಕ್ರೀಡಾಕೂಟದ ಲೋಗೋ ಬಿಡುಗಡೆ ಮಾಡಿ ಮಾತನಾಡಿ, ಹಾಕಿ ಪಂದ್ಯಾವಳಿ ಆಯೋಜನೆ ಜವಾಬ್ದಾರಿಯುತವಾಗಿದ್ದು, ಪ್ರತಿ ಬಾರಿ ಸಣ್ಣಪುಟ್ಟ ಲೋಪದೋಷಗಳು ಉಂಟಾಗುತ್ತವೆ. ಹಿಂದಿನ ವರ್ಷಗಳಲ್ಲಿ ಘಟಿಸಿದ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಿ ಹಾಕಿ ಟೂರ್ನಿಯನ್ನು ಯಶಸ್ವಿಗೊಳಿಸಬೇಕು. ಈ ಹಿಂದಿನ ಎಲ್ಲ ಟೂರ್ನಿಯ ಜವಾಬ್ದಾರಿ ಹೊಂದಿದ ಎಲ್ಲ ಕುಟುಂಬಸ್ಥರ ಸಲಹೆ ಸೂಚನೆಗಳನ್ನು ಪಡೆದು ಇನ್ನೂ ಉತ್ತಮವಾಗಿ ನಡೆಸಬೇಕು ಎಂದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಈ ಹಿಂದೆ ಕೌಟುಂಬಿಕ ಹಾಕಿ ಹಬ್ಬ ಆಯೋಜಿಸಿದ ಬಿದ್ದಾಟಂಡ ತಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಮ್ಮ ಅನುಭವ ಮತ್ತು ಅನಿಸಿಕೆ ವ್ಯಕ್ತಪಡಿಸಿದರು.

ಕೊಳಕೇರಿ ಗ್ರಾಮ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆಟೊಳಿರ ಎಸ್. ಕುಟ್ಟಪ್ಪ ಸಭರ್ಕಾರ್ಯಕ್ರಮ ಉದ್ಘಾಟಿಸಿದರು. ಕುಟುಂಬದ ಪಟ್ಟೆದಾರ ಸುಬ್ಬಯ್ಯ, ಹಾಕಿ ಕ್ರೀಡಾ ಸಮಿತಿ ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಂದಿನ ವರ್ಷ ಹಾಕಿ ಉತ್ಸವ ಆಯೋಜಿಸುವ ಕುಟುಂಬದ ಪ್ರಮುಖರಾದ ಮಡಿಕೇರಿಯ ಮುದ್ದಂಡ ದೇವಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಪಳಂಗಂಡ ಲವ ಕುಮಾರ್ ಇದ್ದರು.

ಪೆಬ್ಬೆಟ್ಟಿರ ವೀಣಾ ಗಣಪತಿ ಪ್ರಾರ್ಥಿಸಿದರು. ಕ್ರೀಡಾ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ ಸ್ವಾಗತಿಸಿದರು. ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಕಾರ್ಯಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖಜಾಂಜಿ ವಿಶು ಪೂವಯ್ಯ ಮತ್ತು ನಯನಾ ಬಿಪಿನ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಮುತ್ತಪ್ಪ ವಂದಿಸಿದರು.