ನಾಯಕನಹಟ್ಟೀಲಿ ಸೇಂಗಾ ಬೆಳೆಗೆ ಎಲೆಚುಕ್ಕೆ ರೋಗ

| Published : Sep 20 2024, 01:44 AM IST

ಸಾರಾಂಶ

ನಾಯಕನಹಟ್ಟಿ ಹೋಬಳಿಯಲ್ಲಿ ಸೇಂಗಾ ಬೆಳೆಯಲ್ಲಿ ಕಂಡು ಬಂದಿರುವ ಎಲೆ ಚುಕ್ಕಿ ರೋಗದಿಂದಾಗಿ ರೈತರು ಹೈರಾಣವಾಗಿದ್ದು, ಮತ್ತೊಮ್ಮೆ ನಷ್ಟದ ಪ್ರಮಾಣ ಎದುರಿಸುವಂತಾಗಿದೆ. ಸದಾ ಬರಗಾಲದಿಂದಾಗಿ ಕೃಷಿಯಿಂದ ವಿಮುಖರಾಗಿದ್ದ ಇಲ್ಲಿನ ರೈತರು ಈ ಸಲ ಹದವಾಗಿ ಬಿದ್ದ ಮಳೆಯಿಂದಾಗಿ ತುಸು ನಿಟ್ಟುಸಿರು ಬಿಟ್ಟಿದ್ದರು. ಈಗ ಅತಿವೃಷ್ಟಿಯಿಂದಾಗಿ ಶೇಂಗಾ ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ

ನಾಯಕನಹಟ್ಟಿ ಹೋಬಳಿಯಲ್ಲಿ ಸೇಂಗಾ ಬೆಳೆಯಲ್ಲಿ ಕಂಡು ಬಂದಿರುವ ಎಲೆ ಚುಕ್ಕಿ ರೋಗದಿಂದಾಗಿ ರೈತರು ಹೈರಾಣವಾಗಿದ್ದು, ಮತ್ತೊಮ್ಮೆ ನಷ್ಟದ ಪ್ರಮಾಣ ಎದುರಿಸುವಂತಾಗಿದೆ. ಸದಾ ಬರಗಾಲದಿಂದಾಗಿ ಕೃಷಿಯಿಂದ ವಿಮುಖರಾಗಿದ್ದ ಇಲ್ಲಿನ ರೈತರು ಈ ಸಲ ಹದವಾಗಿ ಬಿದ್ದ ಮಳೆಯಿಂದಾಗಿ ತುಸು ನಿಟ್ಟುಸಿರು ಬಿಟ್ಟಿದ್ದರು. ಈಗ ಅತಿವೃಷ್ಟಿಯಿಂದಾಗಿ ಶೇಂಗಾ ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

80-90ರ ದಶಕದಲ್ಲಿ ಹೋಬಳಿ ವ್ಯಾಪ್ತಿಯ ಶೇಂಗಾ ಬೆಳೆ ವಿಸ್ತೀರ್ಣ ಪ್ರದೇಶ 25 ಸಾವಿರ ಹೆಕ್ಟೇರ್ ಇತ್ತು. ಈ ವರದಿಯನ್ನು ಕೃಷಿ ಇಲಾಖೆಯಲ್ಲಿ ದಾಖಲಿಸಲಾಗಿದೆ. ಇಡೀ ರಾಜ್ಯದಲ್ಲಿ ಉತ್ಕೃಷ್ಟ ಗುಣಮಟ್ಟದ ಶೇಂಗಾ ಬೆಳೆಗೆ ಹೋಬಳಿ ಕೇಂದ್ರ ಖ್ಯಾತಿ ಪಡೆದಿತ್ತು. ಕೆಂಪು ಮಿಶ್ರಿತ ಕಲ್ಲು ಭೂಮಿ ಶೇಂಗಾ ಬೆಳೆಯ ಗುಣಮಟ್ಟಕ್ಕೆ ಕಾರಣ ಎಂಬುದಾಗಿಯೂ ಚಳ್ಳಕೆರೆ ಕೃಷಿ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ನಿಗದಿಯಾಗುತ್ತಿತ್ತು.

ಆದರೆ, ಎರಡು ದಶಕಗಳಿಂದ ಕಾಡುತ್ತಿರುವ ಬರಗಾಲದಿಂದಾಗಿ ರೈತ ಕುಟುಂಬಗಳು ಶೇಂಗಾ ಬೆಳೆಯಿಂದ ವಿಮುಖ ಆಗಿವೆ. ಪ್ರಸಕ್ತ ಸಾಲಿನಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲಿ ಸುರಿದ ಮುಂಗಾರು ಮಳೆ ರೈತರನ್ನು ಹುರಿದುಂಬಿಸಿತ್ತು. ಹಾಗಾಗಿ, ರೈತರು ಸಾಲಸೋಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದು ಬೀಳು ಬಿದ್ದಿದ್ದ ಹೊಲಗಳಲ್ಲಿ ಬೀಜ ಬಿತ್ತಿದ್ದರು.

ಕೃಷಿ ಇಲಾಖೆ ವರದಿ ಪ್ರಕಾರ ಏಪ್ರಿಲ್‍ನಿಂದ ಇಲ್ಲಿಯವರೆಗೂ ಒಟ್ಟು 696 ಮಿ.ಮೀ ಮಳೆ ಬಿದ್ದಿದೆ. ಆದರೆ, ಅತಿಯಾದ ಮಳೆಯಿಂದ ಬಿತ್ತನೆಯೂ ವಿಳಂಬ ಆಗಿದೆ. ಅತಿ ತೇವಾಂಶ ಹಾಗೂ ಅತಿ ಬಿಸಿಲಿನ ಪರಿಣಾಮದಿಂದ ಶೇಂಗಾ ಬೆಳೆಗೆ ಎಲೆಚುಕ್ಕೆ ರೋಗ, ಬೆಂಕಿರೋಗ, ಬೇರು ಕೊಳೆ ರೋಗಗಳು ಬಾಧಿಸುತ್ತಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡಿವೆ.

ಮಲ್ಲೂರಹಳ್ಳಿ, ಎನ್. ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲೆಚುಕ್ಕೆ ಹಾವಳಿ ಹೆಚ್ಚಿದೆ. ಈ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಕೃಷಿ ಇಲಾಖೆ ರೈತರಿಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ರೋಗ ಬಂದ ಮೇಲೆ ಯಾವುದೋ ಒಂದು ಹೊಲ ಆಯ್ಕೆ ಮಾಡಿಕೊಂಡು ಸಾಂಕೇತಿಕವಾಗಿ ಪ್ರಚಾರ ನಡೆಸಿ ಕೃಷಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಹಾಗಾಗಿ, ರೈತರಿಗೆ ರೋಗ ಕಾಣಿಸಿಕೊಂಡ ತಕ್ಷಣ ರೋಗತಡೆ ಕುರಿತು ಮಾಹಿತಿ ಸಿಕ್ಕಿಲ್ಲ ಎಂದು ಮಲ್ಲೂರಹಳ್ಳಿಯ ರೈತ ಕಾಟಯ್ಯ ಹೇಳುತ್ತಾರೆ.ಹೋಬಳಿಯಲ್ಲಿ ಪ್ರತಿವರ್ಷ 420 ಮಿ.ಮೀ ವಾಡಿಕೆ ಮಳೆ ಇದೆ. 2022ನೇ ಸಾಲಿನಲ್ಲಿ 804 ಮಿ.ಮೀ, 2023ನೇ ಸಾಲಿನಲ್ಲಿ 466 ಮಿ.ಮೀ ಸರಾಸರಿ ಮಳೆ ಬಿದ್ದರೂ ಶೇಂಗಾ ಬೆಳೆ ಬಿತ್ತನೆ ವಿಸ್ತೀರ್ಣ ಕುಸಿತಗೊಳ್ಳುತ್ತಾ ಬಂದಿರುವುದು ಅಚ್ಚರಿ ಅನಿಸಿದೆ.ಕೃಷಿ ಇಲಾಖೆಯ ವರದಿಯಲ್ಲಿ ಸರಾಸರಿ ಮಳೆ ದಾಖಲಾಗುತ್ತದೆ. ಆದರೆ, ರೈತರು ಬಿತ್ತನೆಯಿಂದ- ಕೊಯ್ಲಿನವರೆಗೂ ಮಳೆ ಸಕಾಲದಲ್ಲಿ ಬಿದ್ದಿಲ್ಲ. ರೈತರಿಗೆ ಸರಾಸರಿ-ವಾಡಿಕೆ ಮಳೆಗಿಂತ ಸಕಾಲದಲ್ಲಿ ಬೀಳುವ ಮಳೆಯೇ ಲೆಕ್ಕ. ಈ ಸಲ ಮುಂಗಾರು ಅತಿವೃಷ್ಟಿ ಸೃಷ್ಟಿಸಿದರೂ, ಹಿಂಗಾರು ಮಳೆಯಿಂದ ರೋಗಗಳು ಹೆಚ್ಚಿವೆ. ನಾಯಕನಹಟ್ಟಿ ಪಟ್ಟಣದಲ್ಲಿ ಬಿದ್ದ ಮಳೆಯ ಮಳೆ ವರದಿಯನ್ನು ಇಡೀ ಹೋಬಳಿಗೆ ಅನ್ವ್ವಯಿಸುವುದು ಸೂಕ್ತ ಅಲ್ಲ ಎಂದು ಎನ್. ದೇವರಹಳ್ಳಿಯ ರೈತ ಬೋರಯ್ಯ ಅಭಿಪ್ರಾಯಪಟ್ಟಿದ್ದಾರೆ.ಕೃಷಿ ಇಲಾಖೆ ಪ್ರಕಾರ ಹೋಬಳಿಯಲ್ಲಿ ಒಟ್ಟು 18 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆ ಪ್ರದೇಶ ಇದೆ. ಪ್ರಸಕ್ತ ಬಿತ್ತನೆ ವರ್ಷದಲ್ಲಿ ಹೋಬಳಿಯಲ್ಲಿ 17,500 ಹೆಕ್ಟೇರ್‍ನಲ್ಲಿ ಶೇಂಗಾ ಬಿತ್ತನೆಯಾಗಿದೆ. ಎಲೆಚುಕ್ಕೆ ರೋಗದಿಂದ ಗಿಡಗಳ ಎಲೆಗಳು ಉದುರುತ್ತಿರುವುದರಿಂದ ಇಳುವರಿ ಮೇಲೆ ದುಷ್ಪರಿಣಾಮ ಬೀರಿದೆ ಎಂದು ರೈತರು ತಮ್ಮ ನೋವು ತೋಡಿಕೊಂಡಿದ್ದಾರೆ. ಮಳೆ ಬಂದರೂ, ಬರದಿದ್ದರೂ ಶೇಂಗಾ ರೈತರ ಗೋಳು ಮಾತ್ರ ತಪ್ಪಿಲ್ಲ.ಊರಾಚೆ ರೈತ ಸಂಪರ್ಕ ಕಚೇರಿ ಇದೆ. ಹಾಗಾಗಿ, ಕೃಷಿ ಅಧಿಕಾರಿಗಳು ರೈತರಿಗೆ ಸಿಗದಂತಾಗಿದ್ದಾರೆ. ನೀರಾವರಿಯುಳ್ಳ ದೊಡ್ಡ ರೈತರಿಗಷ್ಟೇ ಈ ಕೃಷಿ ಕೇಂದ್ರ ಸಹಕಾರಿ ಆಗಿದೆ. ಮಳೆ ಕೊರತೆ ಜತೆಗೆ ಕೃಷಿ ಅಧಿಕಾರಿಗಳ ಅಸಡ್ಡೆಯಿಂದಾಗಿ ಸಣ್ಣ ಹಿಡುವಳಿದಾರು ಕೃಷಿಯನ್ನೇ ಕೈಬಿಟ್ಟಿದ್ದಾರೆ. ಹಿರಿಯ ಅಧಿಕಾರಿಗಳು ಕೃಷಿ ಕೇಂದ್ರಕ್ಕೆ ಆಗಾಗ ಭೇಟಿ ನೀಡಬೇಕು.

- ನಾಗರಾಜ್ ಮೀಸೆ, ರೈತ ಸಂಘ ಅಧ್ಯಕ್ಷ ನಾಯಕನಹಟ್ಟಿ