ಭ್ರಾಂತಿ ಬಿಟ್ಟು ಶಾಂತಿಯಿಂದ ಬದುಕು ನಡೆಸಿ: ಗವಿಸಿದ್ದೇಶ್ವರ ಮಹಾಸ್ವಾಮಿಗಳು

| Published : Nov 30 2024, 12:46 AM IST

ಭ್ರಾಂತಿ ಬಿಟ್ಟು ಶಾಂತಿಯಿಂದ ಬದುಕು ನಡೆಸಿ: ಗವಿಸಿದ್ದೇಶ್ವರ ಮಹಾಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದ ಗುರು ದೊಡ್ಡಬಸವಾರ್ಯ ಮಠದಲ್ಲಿ ಗುರು ದೊಡ್ಡ ಬಸವಾರ್ಯ ತಾತನವರ ಪುಣ್ಯಸ್ಮರಣೋತ್ಸವದ ಶತಮಾನೋತ್ಸವದ ನಿಮಿತ್ತ ನಡೆದ ನೀಲಕಂಠಾರ್ಯ ತಾತನವರ ರಜತ ತುಲಾಭಾರ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪ್ರವಚನ ನೀಡಿದರು.

ಕುಷ್ಟಗಿ: ಜೀವನದಲ್ಲಿ ಭ್ರಾಂತಿ ಬಿಟ್ಟು ಶಾಂತಿ ಬಯಸುವ ಮೂಲಕ ಸುಂದರವಾದ ಬದುಕು ನಡೆಸಬೇಕು ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಎಂ. ಗುಡದೂರು ಗ್ರಾಮದ ಗುರು ದೊಡ್ಡಬಸವಾರ್ಯ ಮಠದಲ್ಲಿ ಗುರು ದೊಡ್ಡ ಬಸವಾರ್ಯ ತಾತನವರ ಪುಣ್ಯಸ್ಮರಣೋತ್ಸವದ ಶತಮಾನೋತ್ಸವದ ನಿಮಿತ್ತ ನಡೆದ ನೀಲಕಂಠಾರ್ಯ ತಾತನವರ ರಜತ (ಬೆಳ್ಳಿ) ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸುಂದರ ಜೀವನವನ್ನು ನಡೆಸಲು ಪುಣ್ಯದ ಕಾರ್ಯಗಳನ್ನು ಮಾಡಬೇಕು. ಜಗತ್ತನ್ನು ಅರಿತು ನಡೆಯಬೇಕು. ಎಲ್ಲ ನನ್ನದು ಎನ್ನುವ ಭ್ರಾಂತಿ ಬಿಡಬೇಕು. ಎಲ್ಲರಿಗೂ ಆಪೇಕ್ಷೆಗಳು ಇರುತ್ತವೆ. ಜಗತ್ತಿನಲ್ಲಿರುವುದು ಒಂದು ನಾವು ತಿಳಿದುಕೊಳ್ಳೋದು ಮತ್ತೊಂದು ಜಗತ್ತು ನಾವಂದುಕೊಂಡಂತೆ ಇಲ್ಲ, ನಮ್ಮಂಗ ಜಗತ್ತು ಇದೆ ಎನ್ನುವುದು ಭ್ರಾಂತಿಯಾಗಿದೆ. ಅದಕ್ಕೆ ಎಲ್ಲವನ್ನು ವಿಚಾರ ಮಾಡಿ ಅರಿಯಬೇಕಿದೆ ಎಂದರು.

ಒಂದು ಮೊಬೈಲ್ ಖರೀದಿ ಮಾಡಬೇಕಾದರೆ ಅದರ ಬಗ್ಗೆ ಎಲ್ಲ ತಿಳಿದುಕೊಳ್ಳುತ್ತೇವೆ. ಮದುವೆ ಮಾಡಬೇಕಾದರೆ ಎಲ್ಲ ವಿಚಾರ ಮಾಡುತ್ತೇವೆ. ಆದರೆ ಈ ಜಗತ್ತಿನ ಬಗ್ಗೆ ಯಾಕೆ ವಿಚಾರ ಮಾಡುತ್ತಿಲ್ಲ. ಅದಕ್ಕಾಗಿಯೆ ನಾವು ತಾಪದಿಂದ ಬದುಕುತ್ತಿದ್ದೇವೆ ಎಂದರು.

ಎಷ್ಟೆ ಆಸ್ತಿ-ಅಂತಸ್ತು ಗಳಿಸಿ ಹತ್ತಾರು ವಾಹನಗಳು ಇದ್ದರೂ ಒಂದೆ ವಾಹನದಲ್ಲಿ ತಿರುಗಾಡಬೇಕು. ಮನೆಯಲ್ಲಿ ನೂರು ಕ್ವಿಂಟಲ್ ಅಕ್ಕಿ ಇದ್ದರೂ ಒಂದು ಮುಟಿಗೆ ಅಕ್ಕಿ ಮಾತ್ರ ಊಟ ಮಾಡೋದು. ಹತ್ತು ಬೆಡ್ ರೂಮಿನ ಮನೆ ಇದ್ದರೂ ಮಲಗುವುದು ಅರ್ಧ ಮಂಚ. ನೂರು ಆಕಳು ಇದ್ದರೂ ಸಹಿತ ಕುಡಿಯುವುದು ಒಂದು ಕಪ್ಪು ಹಾಲು ಮಾತ್ರ. ಗಳಿಸಿರುವುದನ್ನು ನೆಚ್ಚಿ ಕೆಡಬೇಡ, ಒಡಲು ಭೂಮಿಯ ಸ್ವತ್ತು, ಈ ದೇಹ ಪಂಚಭೂತಗಳಿಂದ ನಿರ್ಮಾಣವಾಗಿದೆ. ಈ ನಮ್ಮ ದೇಹವೂ ಗ್ರಾಮ ಪಂಚಾಯಿತಿ ಇದ್ದಂಗೆ. ಇಂದ್ರಿಯಗಳು ಮೇಂಬರ್ ಇದ್ದಂಗೆ. ಇಂದ್ರಿಯಗಳು ಒಂದೊಂದಾಗಿ ಹೋದಂತೆಲ್ಲ ಜೀವವೇ ಹೋಗುತ್ತದೆ. ಜೀವ ಹೋದ ಮೇಲೆ ದೇಹ ಮಣ್ಣಿನ ಪಾಲು, ಅಸ್ತಿ ಗಂಗೆಯ ಪಾಲು, ನೀನು ಗಳಿಸಿರುವ ಆಸ್ತಿ ಅನ್ಯರ ಪಾಲು. ಸಾವು ಬಂದಾಗ ಕೈ ಹಿಡಿದ ಹೆಂಡತಿ, ಮಕ್ಕಳು, ಆಸ್ತಿ-ಅಂತಸ್ತು ಯಾವುದೂ ಬರುವುದಿಲ್ಲ. ಸಾವಿನ ಜತೆಗೆ ನಾವು ಮಾಡಿರುವ ಪುಣ್ಯದ ಕಾರ್ಯಗಳು ಬರುತ್ತವೆ ಎಂದು ಹೇಳಿದರು.

ಭೂಮಿಗೆ ಬಂದಾಗ ಹೆಸರು ಇದ್ದಿಲ್ಲ, ಉಸಿರು ಇತ್ತು, ಭೂಮಿ ಬಿಟ್ಟು ಹೋಗುವಾಗ ಉಸಿರು ಇರೋದಿಲ್ಲ, ಹೆಸರು ಉಳಿಯುವಂತಹ ಪುಣ್ಯದ ಕಾರ್ಯಗಳನ್ನು ಮಾಡಬೇಕು ಎಂದು ಶ್ರೀಗಳು ಹೇಳಿದರು.

ಜೀವನದಲ್ಲಿ ಕಷ್ಟ-ಸುಖಗಳು ಸಹಜವಾಗಿ ಬರುತ್ತವೆ. ಸಂತೋಷ ಕೆಡಿಸಿಕೊಳ್ಳಬಾರದು. ಒಳ್ಳೆಯವರಿಗೆ ಜನರು ಜಾಸ್ತಿ ಕಾಡೋದು, ಮಾವಿನ ಗಿಡಕ್ಕೆ ಕಲ್ಲು ಎಸೆಯುತ್ತಾರೆಯೇ ಹೊರತು ಜಾಲಿಗಿಡಕ್ಕೆ ಅಲ್ಲ. ನಾವು ಮಾವಿನಗಿಡದ ತರಹ ಇರಬೇಕು. ದೇವರು ಎಲ್ಲವನ್ನು ಕೊಟ್ಟಿದ್ದಾನೆ. ಸಂತೋಷದಿಂದ ಅನುಭವಿಸಬೇಕು. ಊರು ಅಂದ ಮೇಲೆ ತಿಪ್ಪೆಗಳು ಇರುತ್ತವೆ, ಊರು ಜನ ಮಾತನಾಡೋದು ತಲೆಯಲ್ಲಿ ಇಟ್ಟುಕೊಂಡು ತಲೆ ಡಸ್ಟ್ ಬಿನ್ ತರಹ ಮಾಡಿಕೊಳ್ಳದೆ, ಒಳ್ಳೆಯ ಉತ್ತಮವಾದ ಕಾರ್ಯಗಳನ್ನು ಮಾಡುವ ಮೂಲಕ ಸಂತರಾಗುವಂತೆ ಬದುಕಿ ಬಾಳಬೇಕಿದೆ ಎಂದರು.

ಆನಂತರ ತುಲಾಭಾರ ಕಾರ್ಯಕ್ರಮ ನಡೆಯಿತು. ನೀಲಕಂಠಾರ್ಯ ತಾತನವರು, ಅನೇಕ ಶ್ರೀಗಳು, ರಾಜಕಾರಣಿಗಳು, ಹತ್ತು ಸಾವಿರಕ್ಕೂ ಅಧಿಕ ಭಕ್ತರು ಇದ್ದರು.