ಸಾರಾಂಶ
ಇಷ್ಟು ದಿನ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ ಚಿರತೆ ಹಾವಳಿ ಇತ್ತೀಚಿಗೆ ಪಟ್ಟಣಗಳಲ್ಲಿ ಸಹ ಕಾಣುತ್ತಿದ್ದು ಸಂಜೆ ಆದರೆ ಸಾಕು ಜನ ಓಡಾಡಲು ಭಯ ಬೀಳುವಂತಾಗಿದೆ.
ಎಚ್.ಎನ್.ನಾಗರಾಜು
ಕೊರಟಗೆರೆ : ಇಷ್ಟು ದಿನ ಗ್ರಾಮೀಣ ಭಾಗಕ್ಕೆ ಸೀಮಿತವಾಗಿದ್ದ ಚಿರತೆ ಹಾವಳಿ ಇತ್ತೀಚಿಗೆ ಪಟ್ಟಣಗಳಲ್ಲಿ ಸಹ ಕಾಣುತ್ತಿದ್ದು ಸಂಜೆ ಆದರೆ ಸಾಕು ಜನ ಓಡಾಡಲು ಭಯ ಬೀಳುವಂತಾಗಿದೆ. ಜಿಲ್ಲೆಯಲ್ಲಿ ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳ ದಾಳಿ ಮೊದಲಿನಿಂದಲೂ ಇತ್ತು. ಆದರೆ ಈ ಒಂದು ತಿಂಗಳಿನಿಂದ ಚಿರತೆಗಳು ಪಟ್ಟಣಕ್ಕೆ ಕಾಲಿಟ್ಟಿದ್ದು ಜನರು ಭಯಭೀತರಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿರುವ ಕಾಡುಗಳು ಒತ್ತುವರಿ, ಕಲ್ಲುಗಾಣಿಗಾರಿಕೆ ಮತ್ತು ಕಾರ್ಖಾನೆ ನಿರ್ಮಾಣದಿಂದ ಹಳ್ಳಿಗಳಲ್ಲಿ ಚಿರತೆಗಳ ಹಾವಳಿಯಿಂದ ಬಡ ರೈತರ ಕುರಿ, ಮೇಕೆ, ಹಸುಗಳು ಬಲಿಯಾಗುತ್ತಿವೆ. ಇದರಿಂದಾಗಿ ಹೈನುಗಾರಿಕೆ ನಂಬಿ ಬದುಕುತ್ತಿರುವ ಜನರ ಬದುಕು ಮೂರಾಬಟ್ಟೆಯಾಗುತ್ತಿದೆ.
ಕೊರಟಗೆರೆ ತಾಲೂಕಿನಲ್ಲಿ ಒಟ್ಟು 10 ಮೀಸಲು ಅರಣ್ಯ ಪ್ರದೇಶ ಇದ್ದು, ಸುಮಾರು 12510 ಎಕರೆ ವಿರ್ಸ್ತೀಣದಲ್ಲಿ ಅರಣ್ಯ ಪ್ರದೇಶ ಹೊಂದಿದೆ, ಪರಿಬಾವೀತ ಅರಣ್ಯ ಪ್ರದೇಶ 20 ಕಡೆ ಇದೆ. ಗ್ರಾಮೀಣ ಭಾಗದ ರೈತರು ತಮ್ಮ ಹಸು ಕುರಿ, ಮೇಕೆಗಳನ್ನ ಮೇಹಿಸಲು ಹತ್ತಿರದ ಬೆಟ್ಟ, ಗುಡ್ಡ ಹಾಗೂ ಅರಣ್ಯ ಪ್ರದೇಶಗಳಿಗೆ ಹೋಗಬೇಕಾಗುತ್ತದೆ. ಅಲ್ಲಿ ಹಾಡುಹಗಲೇ ಚಿರತೆಗಳು ಪ್ರಾಣಿ ಹಾಗೂ ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಕಂಡ ಸ್ಥಳದಲ್ಲಿ ಬೋನುಗಳನ್ನ ಇಟ್ಟು ಚಿರತೆಗಳನ್ನ ಸೆರೆ ಹಿಡಿದು ಬೇರೆಡೆ ಬಿಡಲಾಗುತ್ತದೆ. ಆದರೂ ತಾಲೂಕಿನಲ್ಲಿ ಮತ್ತೆ ಚಿರತೆಗಳ ಪ್ರತ್ಯಕ್ಷ ಆಗುತ್ತಿರುವ ಕಾರಣವೇನು ಎಂದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.
ಚಿರತೆ ದಾಳಿಗೆ ಪರಿಹಾರ ಸಾಲದು
ಚಿರತೆ ದಾಳಿಯಿಂದಾಗಿ ಮನುಷ್ಯ ಮೃತಪಟ್ಟರೆ 7.5 ಲಕ್ಷ ರೂ ಸರ್ಕಾರ ನಿಗದಿಪಡಿಸಿದೆ. ಜೀವನಕ್ಕೆ ಆಧಾರವಾಗಿರುವ ಕುರಿ, ಮೇಕೆ, ೪ ಸಾವಿರ, ಹಸುಗಳಿಗೆ ೧೦ ಸಾವಿರ ನಿಗದಿ ಮಾಡಲಾಗಿದೆ. ಒಂದು ವರ್ಷಕ್ಕೆ ಸುಮಾರು 3 ಲಕ್ಷಕ್ಕೂ ಹೆಚ್ಚು ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಆದರೆ ಸಾಕು ಪ್ರಾಣಿಗಳಿಗೆ ನೀಡುವ ಪರಿಹಾರ ಕಡಿಮೆಯಾಗಿದ್ದು, ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತರ ಒತ್ತಾಯವಾಗಿದೆ. ಕೊರಟಗೆರೆ ತಾಲೂಕಿನಲ್ಲಿ 2023 -24 ರಲ್ಲಿ 2 ಕರಡಿ ಹಾಗೂ 2 ಚಿರತೆಗಳನ್ನ ಸೆರೆ ಹಿಡಿಯಲಾಗಿದೆ. 2024-25 ಸಾಲಿನಲ್ಲಿ 1 ಚಿರತೆ ಮಾತ್ರ ಸೆರೆ ಹಿಡಿಯಲಾಗಿದೆ. ತಾಲೂಕಿನ ತೋವಿನಕೆರೆ, ಅಕ್ಕಿರಾಂಪುರ, ಕೊರಟಗೆರೆ ಪಟ್ಟಣ, ಪಾತಗಾನಹಳ್ಳಿ ಸೇರದಂತೆ ಅನೇಕ ಭಾಗಗಳಲ್ಲಿ ಚಿರತೆಗಳು ಕಾಣಿಕೊಳ್ಳುತ್ತಿವೆ. ಮಲ್ಲೇಪುರ, ಹಂಚಿಹಳ್ಳಿ, ಕುರಂಕೋಟೆ, ಇನ್ನೂ ಅನೇಕ ಭಾಗಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ.
ಕೊರಟಗೆರೆ ತಾಲೂಕಿನಲ್ಲಿ ಚಿರತೆಗಳು ಹಾಗೂ ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು, ಜೀವನಕ್ಕೆ ಆಧಾರವಾಗಿದ್ದು ಸಾಕು ಪ್ರಾಣಿಗಳನ್ನ ಕಳೆದುಕೊಂಡ ರೈತ ಬೀದಿಗೆ ಬರುವಂತ ಪರಿಸ್ಥತಿ ನಿರ್ಮಾಣವಾಗಿದೆ. ಸರ್ಕಾರ ನಿಗದಿ ಪಡಿಸಿರುವ ಮೊತ್ತವನ್ನ ಹೆಚ್ಚಿಗೆ ಮಾಡಿ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು.
ಕೆ.ಸಿದ್ದರಾಜು ರೈತ ಸಂಘದ ತಾಲೂಕು ಅಧ್ಯಕ್ಷ.
ಇತ್ತೀಚಿನ ದಿಗಳಲ್ಲಿ ಗಣಿಗಾರಿಕೆ, ಅರಣ್ಯ ನಾಶದಿಂದ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತಿದ್ದು, ಸಾರ್ವಜನಿಕರು ಬೆಟ್ಟ, ಗುಡ್ಡ, ಅರಣ್ಯ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡಬಾರದು. ಚಿರತೆ, ಕರಡಿಗಳ ಇರುವ ಜಾಗದಲ್ಲಿ ಹೋಗದೆ ಇರುವುದು ಒಳ್ಳೆಯದು, ಈಗಾಗಲೇ ಅನೇಕ ಕಡೆ ಅರಿವು ಮೂಡಿಸಲಾಗುತ್ತಿದೆ. ಚಿರತೆಗಳು ಕಂಡಲ್ಲಿ ನಮಗೆ ಮಾಹಿತೆ ನೀಡಿ. ಮೂಕ ಪ್ರಾಣಿಗಳ ಮೇಲೆ ದಾಳಿ ಆದರೆ ತಕ್ಷಣ ನಮ್ಮ ಇಲಾಖೆಗೆ ಮಾಹಿತಿ ನೀಡಿ ಬೋನ್‌ಗಳನ್ನ ಇಟ್ಟು ಚಿರತೆಗಳನ್ನ ಸೆರೆ ಹಿಡಿಯಲಾಗುವುದು.
ಸುರೇಶ್ ವಲಯ ಅರಣ್ಯಾಧಿಕಾರಿ ಕೊರಟಗೆರೆ.
ಕಾಡು ಪ್ರಾಣಿಗಳು ತಕ್ಷಣ ಕರೆ ಮಾಡಿ ಕೊರಟಗೆರೆ ತಾಲೂಕಿನ ನಾನಾ ಭಾಗದಲ್ಲಿ ಚಿರತೆಗಳು ಕಾಣಿಕೊಳ್ಳುತ್ತಿದ್ದು, ಜನರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಚಿರತೆ ಹಾಗೂ ಕರಡಿಯಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅರಿವು ಮೂಡಿಸುವ ಕೆಲಸವನ್ನು ಕೊರಟಗೆರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ. ಒಂದು ವೇಳೆ ಗ್ರಾಮೀಣ ಭಾಗದಲ್ಲಿ ಚಿರತೆ ಹಾಗೂ ಕರಡಿಗಳು ಕಾಣಿಸಿಕೊಂಡರೆ ಆರ್‌ಎಫ್‌ಒ 9481990605 ಡಿಆರ್‌ಎಫ್‌ಒ 9481990617 ಅವರಿಗೆ ಕರೆ ಮಾಡಿ ತಿಳಿಸಬಹುದಾಗಿದೆ.