ಕಲೆ ಬರಹಗಾರರನ್ನು ಲೋಕದಿಂದ ಪ್ರತ್ಯೇಕಿಸದಿರಲಿ

| Published : Jan 07 2025, 12:15 AM IST

ಸಾರಾಂಶ

ಹೆಣ್ಣು ಅಡುಗೆ ಮನೆಗೆ ಸೀಮಿತ ಎಂಬ ಹಣೆಪಟ್ಟಿಯಿಂದ ಹೊರಬರಬೇಕೆಂದರೆ ಆಯಾ ಕಾಲಘಟ್ಟದ ಸತ್ಯಗಳಿಗೆ ದನಿಯಾದಾಗ ಬದಲಾವಣೆ ತರಲು ಸಾಧ್ಯ ಎಂದು ಲೇಖಕಿ ಎನ್.ಸಂಧ್ಯಾರಾಣಿ ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ, ಹಾಸನ

ಹೆಣ್ಣು ಅಡುಗೆ ಮನೆಗೆ ಸೀಮಿತ ಎಂಬ ಹಣೆಪಟ್ಟಿಯಿಂದ ಹೊರಬರಬೇಕೆಂದರೆ ಆಯಾ ಕಾಲಘಟ್ಟದ ಸತ್ಯಗಳಿಗೆ ದನಿಯಾದಾಗ ಬದಲಾವಣೆ ತರಲು ಸಾಧ್ಯ ಎಂದು ಲೇಖಕಿ ಎನ್.ಸಂಧ್ಯಾರಾಣಿ ಪ್ರತಿಪಾದಿಸಿದರು.ನಗರದಲ್ಲಿ ನಡೆದ ಸಾಹಿತ್ಯೋತ್ಸವದಲ್ಲಿ ನಮ ನೆಲೆ-ನಮ ಸೆಲೆ ವಿಚಾರ ಗೋಷ್ಟಿ-೨ ರಲ್ಲಿ ಮಾತನಾಡಿದ ಅವರು, ನಾವು ಎಷ್ಟು ಒಳ್ಳೆಯ ಮನುಷ್ಯ ಆಗಿರುತ್ತೇವೆ ಎನ್ನುವುದು ಕಲೆಯ ಪ್ರತಿಬಿಂಬ. ಮನುಷ್ಯತ್ವ ಎನ್ನುವ ಸೆಲೆ ಕಲಾವಿದ ಎನ್ನುವ ಸೆಲೆಗಿಂತ ದೊಡ್ಡದು ಎಂದರು.ನನ್ನ ಓದು ಒಂದು ರೀತಿಯ ಸೆಲೆ. ಹೊಸ ಲೇಖಕರ ಬರಹಗಳನ್ನು ಓದುವುದರಿಂದ ನಾವು ಹಾಗೂ ಸಮಾಜ ಎಲ್ಲಿದೆ ಎಂಬುದನ್ನು ಅರಿಯಬಹುದು. ನಾಟಕ , ಸಿನಿಮಾ, ಹಾಡುಗಳು ನಮ ಸೆಲೆ ಬತ್ತದ ಹಾಗೆ ಆರ್ದ್ರಗೊಳಿಸುತ್ತದೆ. ಯಾರೂ ನಿರ್ವಾತವಾಗಿ ಬರೆಯಲು ಆಗುವುದಿಲ್ಲ. ನಿರ್ವಾತವಾಗಿ ಯಾವುದು ಹುಟ್ಟುವುದಿಲ್ಲ ಹಾಗು ಬೆಳೆಯುವುದಿಲ್ಲ. ಬರಹಗಾರ ಸಮಾಜಕ್ಕೆ ಹೇಗೆ ತನ್ನನ್ನು ಅಪಿಸಿಕೊಳ್ಳುತ್ತಾನೆ ಹಾಗೂ ಹೇಗೆ ತೆಗೆದುಕೊಳ್ಳುತ್ತಾನೆಂಬುದರ ಮೇಲೆ ಸಾಹಿತಿಯ ಅಸ್ತಿತ್ವ ಅವಲಂಬನೆಯಾಗಿರುತ್ತದೆ. ಬರವಣಿಗೆ ಎಂದರೆ ಕೇವಲ ಪ್ರತಿಭಟನೆಯಲ್ಲ. ಅದರಲ್ಲಿ ಕಲೆ ಇರಬೇಕು. ಕಲೆ ಬರಹಗಾರರನ್ನು ಲೋಕದಿಂದ ಪ್ರತ್ಯೇಕಿಸಬಾರದು ಎಂದರು.

ನಿರಂತರ ಓದು, ಬರೆಯುವ ಹವ್ಯಾಸ ನಮನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ. ಹೆಣ್ತತನದ ತಲ್ಲಣಗಳ ಕುರಿತು ಬರೆಯಲು ನಾನು ಇಷ್ಟಪಡುತ್ತೇನೆ. ಲೇಖಕರಾದವರು ಯಾವುದಾದರೂ ನಿಲುವು ಹೊಂದಲೇಬೇಕು ಆದರೆ ಅದು ಪ್ರತಿಭಟನೆ ಆಗಿರಬಾರದು ಎಂದು ಪುನರುಚ್ಚರಿಸಿದರು.

ಸಾಹಿತಿ ರೇಣುಕಾ ರಮಾನಂದ ಮಾತನಾಡಿ, ಸ್ವಾತಂತ್ರ್ಯ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಸಿಗಲಿಲ್ಲ. ೧೯೭೯ರ ನಂತರದ ಬಂಡಾಯ ಸಾಹಿತ್ಯದ ಅವಧಿಯಲ್ಲಿ ಸ್ತ್ರೀಯರಿಗೆ ಬರೆಯುವ ಸ್ವಾತಂತ್ರ್ಯ ಸಿಕ್ಕಿತು. ಪುರುಷ ವರ್ಗಕ್ಕೆ ಸರಿಸಾಟಿಯಾಗಬೇಕೆಂದು ಮಹಿಳೆಯರು ಬರೆಯಲು ಮುಂದಾದರಾದರೂ ಅದಕ್ಕೆ ಪ್ರೋತ್ಸಾಹ ಸಿಗಲಿಲ್ಲ. ಕೌಟುಂಬಿಕ ವಿಚಾರ, ಅಡುಗೆ ಮನೆಯ ಬರಹಗಳಿಗೆ ಮಾತ್ರ ಮಹಿಳೆ ಸೀಮಿತ ಎಂಬ ಭಾವನೆ ಮೂಡಿತು. ಆದರೆ ಮುಸ್ಲಿಂ ಸಮುದಾಯದ ಕೆ.ಷರೀಪಾ, ಬಾನು ಮುಷ್ತಾಕ್, ಸಾರಾ ಅಬೂಬಕರ್ ಅವರು ಬರವಣಿಗೆ ಮೂಲಕ ಸಮಾಜದ ಕಣ್ಣು ತೆರೆಸಿದರು. ನಂತರ ಧಾರ್ಮಿಕ ಸಂಕೋಲೆಗಳಿಂದ ಕೆಲ ಮಹಿಳಾ ಬರಹಗಾರರು ಮುಕ್ತರಾದರು ಎಂದರು.

ಪ್ರಖರ ಚರಿತ್ರೆ ಹೊಂದಿದ್ದೇವೆ: ಸಾಹಿತಿ ಪಿ.ಚಂದ್ರಿಕಾ ಮಾತನಾಡಿ, ಸ್ತ್ರೀಯರು ಚರಿತ್ರೆಯ ಪುಟಗಳಲ್ಲಿ ಬರುವುದಿಲ್ಲವಾದರೂ ಪ್ರಖರ ಚರಿತ್ರೆ ಹೊಂದಿದ್ದೇವೆ. ಜಗತ್ತಿಗೆ ಏನನ್ನು ಕೊಟ್ಟಿದ್ದೇವೆಂಬುದನ್ನು ಮರೆಮಾಡುವಾಗ ನಮನ್ನು ನಾವು ಸಾಬೀತುಪಡಿಸಿಕೊಳ್ಳಲು ಬರವಣಿಗೆ ಅತ್ಯವಶ್ಯಕವಾಗಿದೆ. ಜಗತ್ತು ನಾವು ಹೀಗೆ ಇರಬೇಕೆಂದು ಬಯಸಿದಾಗ ಅದಕ್ಕೆ ಪ್ರತಿರೋಧವೊಡ್ಡಿ ನಮದೇಯಾದ ನೆಲೆ ಕಂಡುಕೊಳ್ಳಬೇಕು ಅದು ಜವಾಬ್ದಾರಿ ಎಂದರು.ಕವಯತ್ರಿ ತಿರುಮಲಾಂಬ ಅವರ ಸಾಹಿತ್ಯದ ಬಗ್ಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟೀಕಿಸಿದರು. ಪುರುಷ ಪ್ರಧಾನ ವ್ಯವಸ್ಥೆಯಿಂದ ಬೇಸತ್ತ ಅವರು ಸತಿ ಹಿತೈಷಿನಿ ಎಂಬ ಪ್ರಕಾಶನ ನಿಲ್ಲಿಸುತ್ತಾರೆ. ನಂತರ ಬರೆಯುವುದನ್ನು ಬಿಡುತ್ತಾರೆ. ಅಪಾರ ನೋವಿನಿಂದ ಯಾವತ್ತೋ ಸತ್ತು ಹೋಗಿದ್ದೇನೆ ಎನ್ನುತ್ತಾರೆ. ಆದರೆ ಮಾಸ್ತಿಯವರಿಗೆ ಈ ಬಗೆಗ ಪಶ್ಚಾತ್ತಾಪ ಆಗಲೇ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಡಾ.ಭವ್ಯ ನವೀನ್ ಅವರು ಗೋಷ್ಠಿ ನಿರ್ವಹಿಸಿದರು.