ದಾವಣಗೆರೆಯಲ್ಲಿ ಶಾಸ್ತ್ರೀಯ ಸಂಗೀತಕ್ಕೂ ವೇದಿಕೆ ಸಿಗಲಿ

| Published : Dec 16 2024, 12:50 AM IST

ಸಾರಾಂಶ

ನಾಟಕ, ಸಾಹಿತ್ಯ, ಸಿನಿಮಾ ಹಾಡು, ಜಾನಪದ ಸಂಗೀತ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳು ದಾವಣಗೆರೆಯಲ್ಲಿ ನಿರಂತರ ನಡೆಯುತ್ತಿವೆ. ಅದೇ ರೀತಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳೂ ನಡೆಯಲಿ ಎಂದು ಹಿಂದುಸ್ಥಾನಿ ಗಾಯಕ ಪಂಡಿತ್‌ ಡಾ.ವೆಂಕಟೇಶ ಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸ್ವರಾಂಜಲಿ ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮದಲ್ಲಿ ಪಂ. ಡಾ.ವೆಂಕಟೇಶ ಕುಮಾರ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಾಟಕ, ಸಾಹಿತ್ಯ, ಸಿನಿಮಾ ಹಾಡು, ಜಾನಪದ ಸಂಗೀತ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳು ದಾವಣಗೆರೆಯಲ್ಲಿ ನಿರಂತರ ನಡೆಯುತ್ತಿವೆ. ಅದೇ ರೀತಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳೂ ನಡೆಯಲಿ ಎಂದು ಹಿಂದುಸ್ಥಾನಿ ಗಾಯಕ ಪಂಡಿತ್‌ ಡಾ.ವೆಂಕಟೇಶ ಕುಮಾರ ಹೇಳಿದರು.

ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಪ್ರತಿಮಾ ಸಭಾ ದಾವಣಗೆರೆ ಮತ್ತು ಸ್ವರಮಯಿ ಪುಣೆಯಿಂದ ಸಾಂಸ್ಕೃತಿಕ ಚೇತನ, ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಮತ್ತು ಸ್ವರಯೋಗಿನಿ ಡಾ.ಪ್ರಭಾ ಅತ್ರೆ ಸ್ಮರಣಾರ್ಥ ಹಮ್ಮಿಕೊಂಡಿದ್ದ ಸ್ವರಾಂಜಲಿ ಹಿಂದುಸ್ಥಾನಿ ಸಂಗೀತ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಇಲ್ಲಿ ಸಾಕಷ್ಟು ಕಡಿಮೆ ಇವೆ. ಹೆಚ್ಚಿನದಾಗಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸುವ ಪರಂಪರೆಯನ್ನು ಪ್ರತಿಮಾ ಸಭಾ ಮುಂದುವರಿಸಲಿ. ಹಿಂದಿನಿಂದಲೂ ದಾವಣಗೆರೆ ಬಗ್ಗೆ ನನಗೆ ಪರಿಚಯ ಇದೆ. ಇಲ್ಲಿನ ಸಾಂಸ್ಕೃತಿಕ ವಾತಾವರಣ ಅರಿವೂ ಇದೆ. ಸಂಸ್ಕೃತಿ, ಸಭ್ಯತೆ, ದಾನಿಗಳು ಹೀಗೆ ಎಲ್ಲಾ ವಿಚಾರದಲ್ಲೂ ದಾವಣಗೆರೆ ನಂಬರ್ 1 ಸ್ಥಾನದಲ್ಲಿದೆ ಎಂದು ಶ್ಲಾಘಿಸಿದರು.

ಪ್ರತಿಮಾ ಸಭಾ ಅಧ್ಯಕ್ಷ ಬಾ.ಮ. ಬಸವರಾಜಯ್ಯ ಮಾತನಾಡಿ, ಪ್ರತಿಮಾ ಸಭಾ ಸಂಸ್ಥೆಗೆ ಡಾ. ಎಂ.ಜಿ. ಈಶ್ವರಪ್ಪ ಅಧ್ಯಕ್ಷರಾದ ನಂತರ ಹೊಸ ದಿಕ್ಕು ಬಂದಂತಾಯಿತು. ಹಿರಿಯ ಜಾನಪದ ತಜ್ಞರಾದ ಡಾ. ಎಂ.ಜಿ. ಈಶ್ವರಪ್ಪ ಅಗಲಿಕೆ ನೋವನ್ನು ಕಾರ್ಯಕ್ರಮದ ಮೂಲಕ ಮರುಚೇತನಗೊಳಿಸಬೇಕಿದೆ. ಡಾ.ಈಶ್ವರಪ್ಪ, ಎಸ್.ಹಾಲಪ್ಪನವರ ಮಾರ್ಗದರ್ಶನದಲ್ಲಿ ಪ್ರತಿಮಾ ಸಭಾಕ್ಕೆ ಹೊಸ ಚೇತನ ಕೊಟ್ಟು, ಇನ್ನು ಮುಂದೆ ವರ್ಷಕ್ಕೆ ಕನಿಷ್ಠ 6 ಕಾರ್ಯಕ್ರಮಗಳನ್ನು ಸಂಘಟಿಸಲು ಉದ್ದೇಶಿಸಲಾಗಿದೆ. ಎಲ್ಲರೂ ಅದೇ ರೀತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಮಾ ಸಭಾ ಗೌರವಾಧ್ಯಕ್ಷ ಪ್ರೊ. ಎಸ್.ಹಾಲಪ್ಪ ಮಾತನಾಡಿ, ದಾವಣಗೆರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಲಗುಬಗೆಯಿಂದ ಓಡಾಡುತ್ತಿದ್ದ, ಸದಾ ನಮ್ಮೊಂದಿಗಿರುತ್ತಿದ್ದ ಡಾ. ಎಂ.ಜಿ. ಈಶ್ವರಪ್ಪ, ಪ್ರಭಾ ಅತ್ರೆ ಅವರ ಸ್ಮರಣಾರ್ಥ ಇಂದಿನ ಸ್ವರಾಂಜಲಿ ಏರ್ಪಡಿಸಿದ್ದು ಸ್ತುತ್ಯಾರ್ಹ. ಧಾರವಾಡ ಒಂದು ಕಾಲದಲ್ಲಿ ಸಂಗೀತ ಕೇಂದ್ರವೆಂಬ ಪ್ರಚಲಿತದಲ್ಲಿತ್ತು. ಭೀಮಸೇನ್ ಜೋಷಿ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್‌, ಕುಮಾರ ಗಂಧರ್ವರಂತಹ ದಿಗ್ಗಜರಿದ್ದ ಕಾಲದಲ್ಲಿ ಧಾರವಾಡದ ಬಗ್ಗೆ ಇಂತಹ ಅಭಿಪ್ರಾಯ ಮೂಡಿದ್ದಕ್ಕೆ ಆಶ್ಚರ್ಯವಿಲ್ಲ. ಅದೇ ಪರಂಪರೆ ಮುಂದುವರಿಸುವ ಜವಾಬ್ಧಾರಿ ಡಾ.ವೆಂಕಟೇಶ ಕುಮಾರರ ಮೇಲಿದೆ ಎಂದರು.

ಕೋಶಾಧ್ಯಕ್ಷ ಸಂಪನ್ನ ಮುತಾಲಿಕ್ ಸ್ವಾಗತಿಸಿದರು. ರಾಜಸ್ಥಾನ ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗಾಯಕಿ ಡಾ.ಚೇತನ್ ಪಾಠಕ್, ದಿವಂಗತ ಡಾ. ಎಂ.ಜಿ. ಈಶ್ವರಪ್ಪ ಧರ್ಮಪತ್ನಿ ಬಸಮ್ಮ, ಪುತ್ರ ಪೃಥುವೈನ್ಯ, ಪ್ರತಿಮಾ ಸಭಾದ ಪ್ರಧಾನ ಕಾರ್ಯದರ್ಶಿ, ನಗರವಾಣಿ ಸಹ ಸಂಪಾದಕ ಬಿ.ಎನ್. ಮಲ್ಲೇಶ ಇತರರು ಇದ್ದರು.

- - - -15ಕೆಡಿವಿಜಿ14: ಸ್ವರಾಂಜಲಿ ಹಿಂದುಸ್ಥಾನಿ ಸಂಗೀತ ಗಾಯನ ಕಾರ್ಯಕ್ರಮಕ್ಕೆ ಪಂಡಿತ್‌ ಡಾ. ವೆಂಕಟೇಶ ಕುಮಾರ.

-15ಕೆಡಿವಿಜಿ15: ಸ್ವರಾಂಜಲಿ ಹಿಂದುಸ್ಥಾನಿ ಸಂಗೀತ ಗಾಯನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನತೆ.