ಧಾರವಾಡ ಬತ್ತದ ಕಣಜವಾಗಲಿ

| Published : Nov 17 2024, 01:22 AM IST

ಸಾರಾಂಶ

ಈ ಹಿಂದೆ ಕಲಘಟಗಿ ಹಾಗೂ ಉತ್ತರ ಕನ್ನಡ ಭಾಗಗಳು ಬತ್ತದ ಕಣಜವಾಗಿದ್ದವು. ಈಗ ಇಲ್ಲವಾಗಿದ್ದು, ಈ ಬಗ್ಗೆ ಕೃಷಿ ವಿವಿ ಎಚ್ಚರಗೊಳ್ಳಬೇಕು.

ಧಾರವಾಡ:

ಬತ್ತದ ತಳಿಗಳ ಸಂರಕ್ಷಣೆಯಲ್ಲಿ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮುಗದ ಕೃಷಿ ಸಂಶೋಧನಾ ಕೇಂದ್ರವು ಸಾಕಷ್ಟು ಶ್ರಮವಹಿಸಿದೆ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿ ಹೇಳಿದರು.

ಸಮೀಪದ ಮುಗದ ಕೃಷಿ ಸಂಶೋಧನಾ ಕೇಂದ್ರದ ಶತಮಾನೋತ್ಸವಕ್ಕೆ ಚಾಲನೆ ನೀಡಿದ ಅವರು, ಈ ಕೇಂದ್ರದಿಂದ ಸಾಕಷ್ಟು ರೈತ ಪರ ಕಾರ್ಯಕ್ರಮಗಳೂ ಇನ್ನೂ ನಡೆಯಬೇಕಿದೆ. ಈ ಮೂಲಕ ಕೇಂದ್ರವು ರೈತರಿಗೆ ಮತ್ತಷ್ಟು ಹತ್ತಿರವಾಗಲಿ. ಈ ಹಿಂದೆ ಕಲಘಟಗಿ ಹಾಗೂ ಉತ್ತರ ಕನ್ನಡ ಭಾಗಗಳು ಬತ್ತದ ಕಣಜವಾಗಿದ್ದವು. ಈಗ ಇಲ್ಲವಾಗಿದ್ದು, ಈ ಬಗ್ಗೆ ಕೃಷಿ ವಿವಿ ಎಚ್ಚರಗೊಳ್ಳಬೇಕು. ಈ ಕೇಂದ್ರದಿಂದ ಧಾರವಾಡ ಜಿಲ್ಲೆಯು ಬತ್ತದ ಕಣಜವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.

ಅಖಿಲ ಭಾರತ ಭತ್ತ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಆರ್.ಎಂ. ಸುಂದರ, ಶತಮಾನೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಈ ಕೇಂದ್ರದಿಂದ ಅಭಿಲಾಷಾ, ಮುಗದ ಸಿರಿ, ಮುಗದ ಸುಗಂಧಿ, ಮುಂತಾದ ಬತ್ತದ ತಳಿಗಳು ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದುಕೊಂಡಿವೆ ಎಂದರು.

ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕೇಂದ್ರ ಕಳೆದ ನೂರು ವರ್ಷಗಳಲ್ಲಿ ಅನೇಕ ಬತ್ತದ ತಳಿಗಳನ್ನು ಬಿಡುಗಡೆ ಮಾಡುವಲ್ಲಿ ಶ್ರಮಿಸಿದೆ. ಕೇಂದ್ರಕ್ಕೆ ಬೇಸಾಯಶಾಸ್ತ್ರ ಹಾಗೂ ಸಸ್ಯ ಸಂರಕ್ಷಣೆ ವಿಭಾಗದ ವಿಜ್ಞಾನಿಗಳ ಹುದ್ದೆಯನ್ನು ಮಂಜೂರು ಮಾಡಲು ಐಐಆರ್‌ಆರ್‌ ಹೈದರಾಬಾದ್‌ಗೆ ಮನವಿ ಸಲ್ಲಿಸಿದರು. ಈ ಕೇಂದ್ರದಿಂದ ಧಾರವಾಡ ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳ ರೈತರಿಗೆ ಅನುಕೂಲವಾಗಿದೆ. ಬತ್ತದ ಬೆಳೆಯ ಜತೆ ಮಣ್ಣಿನ ಸಂರಕ್ಷಣೆ, ಉಪಕಸುಬುಗಳು ಹಾಗೂ ಸಮಗ್ರ ಕೃಷಿ ಮಾಡಲು ರೈತರಲ್ಲಿ ವಿನಂತಿಸಿದರು.

ಪ್ರಾಧ್ಯಾಪಕ ಡಾ. ಜಿ.ಎನ್. ಹನುಮರಟ್ಟಿ, ಈ ಕೇಂದ್ರವು ಸ್ಥಳೀಯ ಬತ್ತದ ತಳಿಗಳ ಕುರಿತು ಸಂಶೋಧನೆಗೆ ಒಟ್ಟು 35 ಎಕರೆ ಜಮೀನು ಹೊಂದಿದ್ದು, 1980ರಲ್ಲಿ ಎಐಸಿಆರ್‌ಪಿ ಯೋಜನೆಯನ್ನು ಈ ಕೇಂದ್ರಕ್ಕೆ ತರಲಾಯಿತು. ಕೇಂದ್ರವು ಸುಮಾರು ನೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಸಾವಿರಾರು ರೈತರಿಗೆ ಸಹಾಯವಾಗಿದೆ. ಅಮೃತ್, ಮುಗದ ಸುಗಂಧಿ (ಬಾಸುಮತಿ), ಮುಗದ ಸಿರಿ, ಎಂಜಿಡಿ 101, ಮುಗದ 01 ನಂತಹ ಉನ್ನತ ತಳಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ರವಿ ಕಸಮಳಗಿ, ಡಾ. ಸಿ. ಗಿರೀಶ, ಡಾ. ವಿ.ವಿ. ಅಂಗಡಿ, ಶಂಕರ ಲಂಗಾಟಿ ಇದ್ದರು. ಡಾ. ಬಿ.ಡಿ. ಬಿರಾದಾರ ಸ್ವಾಗತಿಸಿದರು. ಡಾ. ಜೆ.ಆರ್. ದಿವಾಣ ವಂದಿಸಿದರು. ಶತಮಾನೋತ್ಸವದ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯದ ಉದ್ಘಾಟನೆ ನೆರವೇರಿಸಲಾಯಿತು.