ಸಮತೆ, ಸಹಿಷ್ಣುತೆ ಯುವಜನಾಂಗಕ್ಕೆ ದಾರಿದೀಪವಾಗಲಿ: ಜಯಂತ್ ಕಾಯ್ಕಿಣಿ

| Published : Jul 02 2025, 11:49 PM IST

ಸಾರಾಂಶ

ಭಾರತೀಯ ಸಮಾಜ ಯಾವುದೋ ಒಂದು ಕಂಬದ ಮೇಲೆ ನಿಂತ ಸರ್ಕಸ್ ಅಲ್ಲ. ಸಾವಿರ ಕಂಬಗಳ ಮೇಲೆ ನಿಂತ ಚಪ್ಪರ. ಹೀಗಾಗಿ, ಸಮಾಜದ ವಿವಿಧ ಸಂಸ್ಕೃತಿಗಳ ಆಚರಣೆಯೇ ಭಾರತದ ವಿಶಿಷ್ಠತೆ ಎಂದು ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭಾರತೀಯ ಸಮಾಜ ಯಾವುದೋ ಒಂದು ಕಂಬದ ಮೇಲೆ ನಿಂತ ಸರ್ಕಸ್ ಅಲ್ಲ. ಸಾವಿರ ಕಂಬಗಳ ಮೇಲೆ ನಿಂತ ಚಪ್ಪರ. ಹೀಗಾಗಿ, ಸಮಾಜದ ವಿವಿಧ ಸಂಸ್ಕೃತಿಗಳ ಆಚರಣೆಯೇ ಭಾರತದ ವಿಶಿಷ್ಠತೆ ಎಂದು ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯ ಬಸವ ಸಭಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 38ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ, ನಾಟಕ, ಸಾಹಿತ್ಯ ಎಲ್ಲವೂ ಈ ವಿಶಿಷ್ಠ ಸಂಸ್ಕೃತಿಗಳ ಪ್ರತಿಬಿಂಬ. ಅದು ಜನಪ್ರಿಯ ಚಲನಚಿತ್ರಗಳಿರಬಹುದು, ಗಾಢವಾದ ಹೊಳಹುಗಳಿರುವ ಗಂಭೀರವಾದ ಸಾಹಿತ್ಯ ಇರಬಹುದು ಅಥವಾ ಹವ್ಯಾಸಿ ಯಕ್ಷಗಾನ ಇರಬಹುದು, ಎಲ್ಲವೂ ಜನಜೀವನದ ಕಲಾತ್ಮಕ ಅಭಿವ್ಯಕ್ತಿಯೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಲೆ ನಮ್ಮನ್ನು ಮನುಷ್ಯರನ್ನಾಗಿ ರೂಪಿಸುವಲ್ಲಿ ನೆರವಾಗಲಿ ಎಂದರು.

ಸಮಕಾಲೀನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲಕ ಮುಕ್ತಿ ಮಾರ್ಗದ ಕಾಣ್ಕೆ ಅನಾವರಣಗೊಳಿಸುವುದೇ ಶಿಕ್ಷಣದ ನಿಜಧರ್ಮ ಎಂದು ಹೇಳಿದರು.

ವಿಕಾಸಪಥವು ಹಾವು ಏಣಿ ಆಟ ಇದ್ದ ಹಾಗೆ. ಇಲ್ಲಿ ಅಸಮಾನತೆ, ಅಸಹನೆ, ಅಸಹಿಷ್ಣುತೆಗಳೆಂಬ ಹಾವುಗಳಿವೆ. ಅದರ ಜೊತೆಗೆ ಸಮಾನತೆ, ಸಹಿಷ್ಣುತೆಗಳೆಂಬ ಏಣಿಗಳೂ ಇವೆ. ಶಿಕ್ಷಣದ ಮೂಲಕ ಇಂಥಹ ಏಣಿಗಳನ್ನು ಕಂಡುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕರ ಸಮಕಾಲೀನ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ನಿಷ್ಕಲ್ಮಷವಾದ ಮಮತೆ ಮತ್ತು ಸಮತೆ ಯುವಜನಾಂಗಕ್ಕೆ ದಾರಿದೀಪವಾಗಲಿ ಎಂದು ಆಶಿಸಿದರು.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿಶ್ವವಿದ್ಯಾಲಯವನ್ನು ಈ ಉನ್ನತ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಹಲವು ಮಹನೀಯರು ಕಾರಣಕರ್ತರಾಗಿದ್ದಾರೆ. ಆದರೆ ವಿವಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಗುರುತರ ಸವಾಲು ನಮ್ಮ ಮುಂದಿದೆ. ಸರ್ಕಾರದ ಅನುದಾನದ ಕೊರತೆ, ನೇಮಕಾತಿಯಲ್ಲಿ ಹಿನ್ನೆಡೆ, ಆಂತರಿಕ ಸಂಪನ್ಮೂಲಗಳ ಕ್ರೋಢೀರಣದಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.

ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಸಿಂಡಿಕೇಟ್ ಸದಸ್ಯರುಗಳು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ವಿವಿಧ ವಿಭಾಗಗಳ ಅಧ್ಯಾಪಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುವೆಂಪು ವಿವಿ ಕುಲಪತಿಗೆ ಡಿ.ಎಸ್‌.ಅರುಣ್ ಬಹಿರಂಗ ಪತ್ರ

ಶಿವಮೊಗ್ಗ: ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಕುವೆಂಪು ವಿಶ್ವವಿದ್ಯಾನಿಲಯದ ಸಂಸ್ಥಾಪನಾ ದಿನಾಚರಣೆ ಬುಧವಾರ ನಡೆದಿದೆ. ಇದೇ ದಿನ ವಿವಿ ಕುಲಪತಿಗೆ ಬಹಿರಂಗ ಪತ್ರ ಬರೆದಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್‌.ಅರುಣ್‌ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಸಾಮಾನ್ಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸಬೇಕೆಂದು ನಿರ್ಧರಿಸಿ, ಕಳೆದ ಫೆಬ್ರವರಿ 10 ರಂದು ಪ್ರಾರಂಭಗೊಂಡ ಸಮ ಸೆಮಿಸ್ಟರ್‌ಗಳನ್ನು ಕೇವಲ 90 ದಿನಗಳಲ್ಲೇ ಪೂರ್ಣಗೊಳಿಸಿ, ಮೇ 15ರೊಳಗೆ ಶೈಕ್ಷಣಿಕ ವರ್ಷವನ್ನು ಮುಕ್ತಾಯಗೊಳಿಸಲು ತ್ವರಿತ ಕ್ರಮವನ್ನು ತೆಗೆದುಕೊಂಡದ್ದು ಯಾಕೆ?

ಶೈಕ್ಷಣಿಕ ವೇಳಾಪಟ್ಟಿಯಂತೆ ಜೂನ್ 13ರಂದು ಎಲ್ಲ ಪದವಿ ಪರೀಕ್ಷೆಗಳು ಹಾಗೂ ಅಂತಿಮ ವರ್ಷದ ಪರೀಕ್ಷೆಗಳು ಜೂನ್ 4ರಂದೇ ಪೂರ್ಣಗೊಂಡರೂ ಮೌಲ್ಯಮಾಪನ ಕಾರ್ಯವನ್ನು ಇನ್ನೂ ಪ್ರಾರಂಭಿಸದಿರುವುದು ಎಂತಹ ನಿರ್ಲಕ್ಷ್ಯ? ಮೌಲ್ಯಮಾಪನವನ್ನು ನಡೆಸದ ಮೇಲೆ ಅತಿ ತುರ್ತಾಗಿ ಪರೀಕ್ಷೆಗಳನ್ನು ಏಕೆ ನಡೆಸಲಾಯಿತು?

ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಅಥವಾ ಉದ್ಯೋಗದ ಆಸೆಯೊಂದಿಗೆ ತಮ್ಮ ಫಲಿತಾಂಶಕ್ಕಾಗಿ ಇನ್ನೆಷ್ಟು ದಿನ ನಿರೀಕ್ಷಿಸುತ್ತಾ ಕೂರಬೇಕು? ಈ ವಿಳಂಬವು ಅವರ ಭವಿಷ್ಯಕ್ಕೆ ದೊಡ್ಡ ತೊಂದರೆಯನ್ನುಂಟುಮಾಡುವುದಿಲ್ಲವೇ?

ಮೌಲ್ಯಮಾಪನದ ಬೋರ್ಡಿನ ಮುಖ್ಯಸ್ಥರು ಡಿಎ ಹಾಗೂ ಟಿಎ ಸಂಭಾವನೆ ಸಂಬಂಧಿತ ವಿಷಯದಲ್ಲಿ ಗೊಂದಲಗಳಿವೆ. ಇತರ ವಿಶ್ವವಿದ್ಯಾನಿಲಯಗಳ ಪರೀಕ್ಷಾ ಶುಲ್ಕದೊಂದಿಗೆ ಹೋಲಿಸಿದರೆ, ನಮ್ಮ ವಿಶ್ವವಿದ್ಯಾನಿಲಯದ ಶುಲ್ಕ ಹೆಚ್ಚಾಗಿರುವುದಲ್ಲದೆ; ಮೌಲ್ಯಮಾಪಕರ ಸಂಭಾವನೆಯನ್ನು ಕಡಿತಗೊಳಿಸಿರುವುದರ ಹಿನ್ನೆಲೆ ಏನು? ಬೇರೆ ಯಾವ ಯಾವ ವಿಶ್ವವಿದ್ಯಾನಿಲಯದಲ್ಲಿ ಮೌಲ್ಯಮಾಪನದ ಸಂಭಾವನೆಯನ್ನು ಕಡಿತಗೊಳಿಸಿದ್ದಾರೆ?

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೊಳಿಸಿ, ಮೌಲ್ಯಮಾಪಕರಿಗೆ ಎಲ್ಲೆಂದರಲ್ಲಿ ಮತ್ತು ಯಾವಾಗ ಬೇಕಾದರೂ ಮೌಲ್ಯಮಾಪನ ಮಾಡಲು ಅವಕಾಶ ನೀಡಿರುವುದರಿಂದ ಮೌಲ್ಯಮಾಪನದ ಗುಣಮಟ್ಟ, ಗೌಪ್ಯತೆ ಹಾಗೂ ಶ್ರೇಷ್ಠತೆ ಮೇಲೆ ಯಾವುದೇ ಹಾನಿಯಾಗುವುದಿಲ್ಲವೇ? ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಇತರ ವಿಶ್ವವಿದ್ಯಾನಿಲಯಗಳ ಉದಾಹರಣೆಗಳನ್ನು ನೀಡಲು ಸಾಧ್ಯವೇ?

ಇವೆಲ್ಲ ಪ್ರಶ್ನೆಗಳು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ವಿಶ್ವವಿದ್ಯಾನಿಲಯದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಕೇಳುತ್ತಿರುವೆ ಎಂದು ಮನಗಂಡು ಸಮರ್ಪಕ ಉತ್ತರ ನೀಡುವಂತೆ ವಿನಂತಿಸುತ್ತೇನೆ. ಆದಷ್ಟು ಬೇಗ ತ್ವರಿತ ಗತಿಯಲ್ಲಿ ಮೌಲ್ಯಮಾಪನವನ್ನು ಪ್ರಾರಂಭಿಸಿ ಫಲಿತಾಂಶವನ್ನು ನೀಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತಿರುವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.