ಯತ್ನಾಳ್ ಹೇಳಿಕೆಗೆ ಸಂಸದ ರಾಘವೇಂದ್ರ ಉತ್ತರಿಸಲಿ: ಆಯನೂರು ಮಂಜುನಾಥ್

| Published : Oct 08 2025, 02:03 AM IST

ಯತ್ನಾಳ್ ಹೇಳಿಕೆಗೆ ಸಂಸದ ರಾಘವೇಂದ್ರ ಉತ್ತರಿಸಲಿ: ಆಯನೂರು ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಜವಾಗಿಯೂ ಲಿಂಗಾಯತರೇ ಅಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಜಾತಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿ, ಗೊಂದಲ ನಿವಾರಿಸಿಕೊಳ್ಳಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸವಾಲು ಎಸೆದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿಜವಾಗಿಯೂ ಲಿಂಗಾಯತರೇ ಅಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅವರು ತಮ್ಮ ಜಾತಿಯ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಿ, ಗೊಂದಲ ನಿವಾರಿಸಿಕೊಳ್ಳಲಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸವಾಲು ಎಸೆದರು.

ಇಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮೊನ್ನೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಕ್ಕೆ ಶಾಸಕ ಬಸವನಗೌಡ ಯತ್ನಾಳ್ ಬಂದಾಗ ನಾನು ಅವರನ್ನು ಭೇಟಿ ಮಾಡಿದ್ದೆ, ಆಗ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನಿಜವಾಗಿಯೂ ಲಿಂಗಾಯತರೇ ಅಲ್ಲ, ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯ ಆಯಿತು. ಕಳೆದ 30 ವರ್ಷಗಳಿಂದ ಯಡಿಯೂರಪ್ಪನವರ ಒಡನಾಟದಲ್ಲಿ ಇದ್ದ ನನ್ನ ತಲೆಯಲ್ಲಿಯೇ ಪ್ರಶ್ನೆ ಉದ್ಭವಿಸಿದೆ ಎಂದರೆ, ಸಾಮಾನ್ಯ ಜನರಲ್ಲಿ ಇಂತಹ ಪ್ರಶ್ನೆ ಉದ್ಭವಿಸುವುದು ಸಹಜ ಎಂದರು.

ಯತ್ನಾಳ್ ಅವರು ಇಂತಹ ಪ್ರಶ್ನೆ ಕೇಳಿದರೂ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕರಾಗಿರುವ ಸಂಸದ ಬಿ.ವೈ.ರಾಘವೇಂದ್ರ ಅವರು ಯಾಕೆ ಸುಮ್ಮನಿದ್ದಾರೆ. ನಾವು ಯಡಿಯೂರಪ್ಪ ಕುಟುಂಬವನ್ನು ವೀರಶೈವ ಲಿಂಗಾಯತರು ಎಂದು ನಂಬಿದ್ದೇವೆ. ಈ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಎಂದು ಕುಟುಕಿದರು.

ಧರ್ಮದ ಕಾಲಂನಲ್ಲಿ ಏನು ಬರೆಸುತ್ತೀರಿ?:

ವೀರಶೈವ ಮಹಾಸಭಾದ ನಿರ್ದೇಶಕರು ದಾವಣಗೆರೆಯಲ್ಲಿ ಭಾಗಿಯಾಗಿ, ಸಮೀಕ್ಷೆಯ ಇತರೆ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದು ಬರೆಯಿಸಬೇಕು ಎಂದು ನಿರ್ಣಯಿಸಿದ್ದಾರೆ. ಈ ಬಗ್ಗೆ ಬಿ.ಎಸ್‌.ಯಡಿಯೂರಪ್ಪ ಆಗಲಿ ಅಥವಾ ಸಂಸದರಾಗಲಿ ಸ್ಪಷ್ಟನೆ ನೀಡಿಲ್ಲ. ಬಿಜೆಪಿಯಲ್ಲಿದ್ದಾಗ ಒಂದು ಹೇಳಿಕೆ ಮತ್ತು ವೀರಶೈವ ಮಹಾಸಭಾದಲ್ಲಿದ್ದಾಗ ಇನ್ನೊಂದು ನಿಲುವು ತಾಳುವ ಸಂಸದ ರಾಘವೇಂದ್ರ ಅವರು, ಜಾತಿ ಸಮೀಕ್ಷೆಯಲ್ಲಿ ಯಾವುದನ್ನು ಬರೆಯಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.

ರಾಜ್ಯ ಸರ್ಕಾರದ ಸರ್ವೆಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬ ಸಂಸದ ಬಿ.ವೈ ರಾಘವೇಂದ್ರ ಹೇಳಿಕೆಯನ್ನು ಅಲ್ಲಗಳೆದ ಅವರು, ಶೆಡ್ಯೂಲ್ 7 ರಲ್ಲಿ ರಾಜ್ಯ ಸರ್ಕಾರ ಮಾಡಬಾರದು ಎಂದು ಎಲ್ಲಾದರೂ ಸಂವಿಧಾನದಲ್ಲಿದೆಯಾ? ಇದ್ದಿದ್ದರೆ ಹೈಕೋರ್ಟ್ ತಡೆಯಾಜ್ಞೆ ನೀಡುತ್ತಿತ್ತು.ಈ ಬಗ್ಗೆ ಸಂಸದರು ಯಾವುದೇ ಕಾರಣಕ್ಕೂ ಗೊಂದಲಕ್ಕೆ ಒಳಗಾಗಬಾರದು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಕಲಗೋಡು ರತ್ನಾಕರ್, ಜಿ.ಡಿ ಮಂಜುನಾಥ್, ಅಡ್ಡು, ರಮೇಶ್ ಶಂಕರಘಟ್ಟ,ವೈ. ಎಚ್ ನಾಗರಾಜ್,ಧೀರರಾಜ್ ಹೊನ್ನವಿಲೆ ಸೇರಿ ಹಲವರಿದ್ದರು.

ವಿಜಯೇಂದ್ರ-ರಾಘವೇಂದ್ರ ಕೋಟಾ ಯಾವುದು?:

ಮಧು ಬಂಗಾರಪ್ಪ ಅವರನ್ನು ಜಾತಿ ಕೋಟಾದ ಮೇಲೆ ಸಚಿವರನ್ನಾಗಿ ಮಾಡಲಾಗಿದೆ ಎಂದ ಸಂಸದ ರಾಘವೇಂದ್ರ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಯತ್ನಾಳ್‌, ಯಾವುದೇ ರಾಜಕೀಯ ಹಿನ್ನಲೆ ಇರದ,ಸಂಘಟನೆಯಲ್ಲಿ ತೊಡಗಿಸಿಕೊಳ್ಳದ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಕೋಟಾ ಯಾವುದು? ಕೇವಲ ಪುರಸಭೆ ಸದಸ್ಯರಾದ ರಾಘವೇಂದ್ರ ಅವರಿಗೆ ಎಂಪಿ ಟಿಕೆಟ್ ಪಡೆದುಕೊಂಡ ಕೋಟಾ ಯಾವುದು ಎಂದು ಪ್ರಶ್ನಿಸಿದರು.

ಯಾವುದೇ ಜಾತಿಯ ಕೋಟಾದಲ್ಲಿ ಮಧು ಬಂಗಾರಪ್ಪನವರನ್ನು ಸಚಿವರನ್ನಾಗಿ ನೇಮಿಸಲಾಗಿಲ್ಲ, ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆ ಉಪಾಧ್ಯಕ್ಷರಾಗಿ ಮಾಡಿದ ಕೆಲಸವನ್ನು ಗುರುತಿಸಿ ಅವರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ ಎಂದರು.