ಡೆಂಘೀ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳು ಸಹಕರಿಸಲಿ: ಡಾ. ಶಶಿ ಪಾಟೀಲ

| Published : Jun 24 2024, 01:30 AM IST

ಡೆಂಘೀ ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳು ಸಹಕರಿಸಲಿ: ಡಾ. ಶಶಿ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಘೀ ಪ್ರಕರಣಗಳು ಹಾಗೂ ಸಾಂಕ್ರಾಮಿಕ ರೋಗಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರಿ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಘೀ ಪ್ರಕರಣಗಳು ಹಾಗೂ ಸಾಂಕ್ರಾಮಿಕ ರೋಗಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರಿ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ, ಆಯುಷ್ ಫೇಡರಷನ್ ಸಂಘ, ಕರ್ನಾಟಕ ಪ್ರಾವೈಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ ಸಂಘ ಮತ್ತು ಕೆಪಿಎಂಇ ಕಾಯ್ದೆಯಡಿಯಲ್ಲಿ ನೊಂದಾಯಿತ ಎಲ್ಲ ವೈದ್ಯಕೀಯ ಸಂಸ್ಥೆಗಳ ಮಾಲೀಕರು, ವೈದ್ಯರ ಸಭೆ ಜರುಗಿಸಿದ ಅವರು, ಡೆಂಘೀ ಜ್ವರ ವೈರಸ್‌ನಿಂದ ಉಂಟಾಗುವ ಖಾಯಿಲೆ. ಸೋಂಕು ಹೊಂದಿದ ಈಡಿಸ್ ಇಜಿಪ್ಟ್ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯ ವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ರೋಗ ನಿಯಂತ್ರಣಕ್ಕಾಗಿ ಸೊಳ್ಳೆಗಳ ನಿಯಂತ್ರಣ ಒಂದೇ ಡೆಂಘೀ ರೋಗದ ಹತೋಟಿಗೆ ಮುಖ್ಯ ವಿಧಾನ. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ ಕಲ್ಲುಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ಮು ಬ್ಯಾರೆಲ್, ಮಣ್ಣಿನ ಮಡಿಕೆ, ಉಪಯೋಗಿಸದ ಒರಳಕಲ್ಲು ಮುಂತಾದ ಕಡೆ ಶೇಖರವಾಗುವ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ, ಈ ರೀತಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದರು

ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕ ಬಳಕೆ ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು. ಆಸ್ಪತ್ರೆಯಲ್ಲಿ ವರದಿಯಾಗುವ ಸಂಶಯಾಸ್ಪದ ಡೆಂಘೀ ಪ್ರಕರಣಗಳ ಹಾಗೂ ಇತರೆ ಸಾಂಕ್ರಾಮಿಕ ರೋಗಗಳ ವರದಿಯನ್ನು ನಿಯಮಿತವಾಗಿ ಕಚೇರಿಗೆ ಸಲ್ಲಿಸುವಂತೆ ಅವರು ಸೂಚಿಸಿದರು. ಒಂದೇ ಪ್ರದೇಶದಲ್ಲಿನ ಹೆಚ್ಚಿನ ರೀತಿಯಲ್ಲಿ ಪ್ರಕರಣಗಳು ವರದಿಯಾದಲ್ಲಿ ಆ ಪ್ರದೇಶದ ಮಾಹಿತಿಯನ್ನು ಕಚೇರಿಗೆ ಸಲ್ಲಿಸಲು ತಿಳಿಸಿದ ಅವರು, ಕೆಪಿಎಂಇ ಕಾಯ್ದೆಯನ್ನು ನಿಯಮವಾಗಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅನುಷ್ಠಾನಗೊಳಿಸಬೇಕು. ಈ ಕಾಯ್ದೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಪಾಲಿಸಬೇಕಾದ ನಿಯಮಗಳನ್ನು ವಿವರಿಸಿ, ಆಸ್ಪತ್ರೆಗೆ ಬೋರ್ಡ್ ಗಳನ್ನು ಅಳವಡಿಸುವುದು, ಅಗ್ನಿ ದುರಂತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು, ಚಿಕಿತ್ಸೆ ನೀಡುವ ರೋಗಿಗಳಿಗೆ ವಿವರವಾದ ಬಿಲ್ಲು ಒದಗಿಸುವುದು ಬಗ್ಗೆ ಸಭೆಯಲ್ಲಿ ಅವರು ಹೇಳಿದರು.

ಇದಲ್ಲದೇ ಖಾಸಗಿ ಆಸ್ಪತ್ರೆಗಳು ಸ್ಕ್ಯಾನಿಂಗ್ ಕೇಂದ್ರಗಳ ನೋಂದಣಿ, ನವೀಕರಣ ಮಾಡಿಕೊಳ್ಳುವುದು, ಲಿಂಗ ಪತ್ತೆ ಮಾಡುವದಿಲ್ಲ ಎಂಬ ಫಲಕ ಅಳವಡಿಸುವ ಕುರಿತು, ಪ್ರತಿ ದಿನ ಎಫ್-ಪಾರ್ಮ್ ಗಳನ್ನು ಭರ್ತಿಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಚಿಸಿದರು. ಎಂಟಿಪಿ ಕಾಯ್ದೆಯಡಿಯಲ್ಲಿ ಇ-ಕಲ್ಯಾಣಿ ಮೂಲಕ ತಮ್ಮ ವೈದ್ಯಕೀಯ ಸಂಸ್ಥೆಯನ್ನು ನೊಂದಣಿ ಮಾಡಿಕೊಳ್ಳುವಂತೆಯೂ ಸಭೆಯಲ್ಲಿ ಸೂಚಿಸಲಾಯಿತು. ನೋಂದಣಿ ಇಲ್ಲದೇ ಎಂಟಿಪಿ ಮಾಡುವುದು ಕಾನೂನು ಬಾಹಿರವೆಂದು ತಿಳಿಸಿ, ಎಚ್ಎಂ.ಐಎಸ್‌ ಪೋರ್ಟಲ್ ನಲ್ಲಿ ಮಾಹಿತಿಯನ್ನು ಭರ್ತಿ ಮಾಡುವ ಬಗ್ಗೆ ವಿವರಣೆ ನೀಡಿದರು. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯ ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕ್ರಮಗಳು ಕೈಕೊಳ್ಳುವಂತೆ ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಅವರು ಸೂಚಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಸುಜಾತಾ ಹಸವೀಮಠ, ಡಾ. ಮಹೇಶ ಚಿತ್ತರಗಿ, ಡಾ. ಮಂಜುನಾಥ ಸೊಪ್ಪಿನಮಠ, ಹಿರಿಯ ವೈದ್ಯ ಡಾ. ಸಂಜೀವ ಕುಲಕರ್ಣಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸತೀಶ ಇರಕಲ್, ಆಯುಷ್ ಫೆಡರೇಷನ್ ಡಾ. ರವೀಂದ್ರ ವೈ., ಡಾ. ಕಿರಣ ಸಾಣಿಕೊಪ್ಪ, ಡಾ. ತ್ಯಾಗರಾಜ, ಡಾ. ಅಮೀತ್, ಡಾ. ಸಂದೀಪ ಪ್ರಭು ಹಾಗೂ ಧಾರವಾಡ ಜಿಲ್ಲೆ ಖಾಸಗಿ ಆಸ್ಪತ್ರೆಗಳ ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದರು.