ಮಾಯವಾಗುತ್ತಿರುವ ಜನಪದ ಕಲೆಗಳ ಉಳವಿಗೆ ಪ್ರಯತ್ನಗಳು ಇರಲಿ

| Published : Jul 09 2025, 12:18 AM IST

ಮಾಯವಾಗುತ್ತಿರುವ ಜನಪದ ಕಲೆಗಳ ಉಳವಿಗೆ ಪ್ರಯತ್ನಗಳು ಇರಲಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ನಾಡಿನ ಸಾಂಪ್ರದಾಯಿಕ ಕಲೆಗಳು ಅಳಿವಿನಂಚಿಗೆ ಬಂದು ನಿಂತಿವೆ. ಅವುಗಳನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕು. ಯಕ್ಷಗಾನ ಹಾಗೂ ಬಯಲಾಟ ಜನರನ್ನು ಸಾಕ್ಷರತೆ ಕಡೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದು, ಯುವ ಪೀಳಿಗೆ ಈ ಕಲೆಗಳ ಬೆನ್ನುಬೀಳುವ ಕಾರ್ಯವಾಗಬೇಕು.

ಧಾರವಾಡ: ಕರ್ನಾಟಕದ ಕೆಲವು ಪ್ರಮುಖ ಜನಪದ ಕಲೆಗಳು ನಿಧಾನವಾಗಿ ಮಾಯವಾಗುತ್ತಿವೆ. ಕನ್ನಡ ನಾಡಿನ ಪರಂಪರೆ ಬಿಂಬಿಸುವ ಬಯಲಾಟ, ದೊಡ್ಡಾಟ, ಸಣ್ಣಾಟ, ಯಕ್ಷಗಾನ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಕೆಲಸಗಳಾಗಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಬಯಲಾಟ ಅಕಾಡೆಮಿಯು ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಮೂರು ದಿನಗಳ ವಿಚಾರ ಸಂಕಿರಣ ಹಾಗೂ ಬಯಲಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನ ಸಾಂಪ್ರದಾಯಿಕ ಕಲೆಗಳು ಆಧುನಿಕ ಯುಗದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜುವುದನ್ನು ಕಲಿಯಬೇಕು. ಅದಕ್ಕಾಗಿ ಆಡಳಿತ ಸರ್ಕಾರಗಳು ತಜ್ಞರ ಸಹಯೋಗದಲ್ಲಿ ಅವುಗಳ ಉಳಿವಿಕೆಗೆ ಹೊಸಹೊಸ ಪ್ರಯೋಗಗಳನ್ನು ಮಾಡಬೇಕೆಂದರು.

ಕನ್ನಡ ನಾಡಿನ ಸಾಂಪ್ರದಾಯಿಕ ಕಲೆಗಳು ಅಳಿವಿನಂಚಿಗೆ ಬಂದು ನಿಂತಿವೆ. ಅವುಗಳನ್ನು ಉಳಿಸಿ, ಬೆಳೆಸುವ ಕೆಲಸ ಆಗಬೇಕು. ಯಕ್ಷಗಾನ ಹಾಗೂ ಬಯಲಾಟ ಜನರನ್ನು ಸಾಕ್ಷರತೆ ಕಡೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದು, ಯುವ ಪೀಳಿಗೆ ಈ ಕಲೆಗಳ ಬೆನ್ನುಬೀಳುವ ಕಾರ್ಯವಾಗಬೇಕು ಎಂದರು.

ಬಯಲಾಟವನ್ನು ಉಳಿಸಲು ಹೊಸ ಯೋಜನೆಗಳ ಅವಶ್ಯಕತೆ ಇದೆ. ತಾಳ- ಮೇಳ, ವೇಷ- ಭೂಷಣ, ನಟನೆ, ಹಾವಭಾವ ಆಧುನಿಕತೆಗೆ ತಕ್ಕಂತೆ ಅಲ್ಪಸ್ವಲ್ಪ ಬದಲಾವಣೆ ಆಗಬೇಕು. ಜನರಿಗೆ ಅರ್ಥವಾದಷ್ಟು ಕಲೆ ಬೆಳೆಯುತ್ತದೆ. ತಂತ್ರಜ್ಞಾನ ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಿ ಕಲೆ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನ ಆಗಬೇಕು. ಕಲೆಯ ಉಳಿವಿಗೆ ನಾಡಿನ ಲೇಖಕರು, ಸಂಶೋಧಕರು, ಚಿಂತಕರು ಹಾಗೂ ಕಲಾಸಕ್ತರು ಶ್ರಮಿಸಬೇಕು ಎಂದರು.

ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಮಾತನಾಡಿ, ಧರ್ಮ ಎಂದರೆ ಒಳ್ಳೆಯ ನಡೆತೆ. ಶೌರ್ಯ ಎಂದರೆ ಹೋರಾಟ. ದುಷ್ಟತನ ಎಂದರೆ ಕಪಟತನ ಎನ್ನುವುದನ್ನು ಬಿಂಬಿಸುವ ಬಯಲಾಟ ಕಥೆಗಳು ಸವಿಸ್ತಾರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಾ ಬಂದಿವೆ. ಅನರಕ್ಷರಸ್ಥ ಜನರನ್ನು ಸಾಕ್ಷರತೆ ಕಡೆಗೆ ತೆಗೆದುಕೊಂಡು ಹೋಗುವ ಕೆಲಸ ಬಯಲಾಟ ಮಾಡಿದೆ. ಆ ಕಲೆ ಉಳಿಯಬೇಕಾದ ಅವಶ್ಯಕತೆ ಇದೆ. ಜಾನಪದ ಕಲೆಗಳು ಉತ್ಸಾಹ ಹೆಚ್ಚಿಸುವ ಜತೆಗೆ ಮನುಷ್ಯನ ಆರೋಗ್ಯವನ್ನು ಸದೃಢವಾಗಿಡುತ್ತದೆ. ರೈತಾಪಿ ಜನರು ಬಯಲಾಟವನ್ನು ಉಸಿರಾಗಿ ಬೆಳೆಸಿಕೊಂಡು ಬಂದಿದ್ದಾರೆ ಎಂದರು.

ಮೊಬೈಲ್ ಯುಗದಲ್ಲಿ ಯುವ ಜನತೆ ಬಹಳಷ್ಟು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಭಾಷೆಯನ್ನು ಕೆಡಿಸುತ್ತಿರುವುದು ಅಕ್ಷರಸ್ಥರು ಎಂಬುವುದನ್ನು ಮನಗಾನಬೇಕು. ಅಶ್ಲೀಲ ಸಾಹಿತ್ಯ ರಚನೆ, ರಿಲ್ಸ್ ರಚನೆ, ಅಲ್ಲಿನ ಅಶ್ಲೀಲ ಭಾಷೆ ಬಳಕೆಯಿಂದ ಯುವ ಜನರು ದಾರಿ ತಪ್ಪುತ್ತಿದ್ದಾರೆ ಎಂದರು.

ಪದ್ಮಶ್ರೀ ಎಂ. ವೆಂಕಟೇಶಕುಮಾರ ಮಾತನಾಡಿ, ನಮ್ಮಜ್ಜ, ತಂದೆ ಬಯಲಾಟ ಕಲಿಸುತ್ತಿದ್ದರು. ಅವಿದ್ಯಾವಂತರು ಬಯಲಾಟದ ಮೂಲಕ ಒಳ್ಳೆಯ ಸಂದೇಶ ನೀಡುತ್ತಾ ಬಂದಿದ್ದಾರೆ. ಹಳ್ಳಿಯ ಸಂಸ್ಕೃತಿ ದಿಲ್ಲಿಯ ವರೆಗೆ ಬೆಳೆದು ಬಂದು ನಿಂತಿದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬಯಲಾಟ ಕೊಡುಗೆ ಅಪಾರ. ಬಯಲಾಟ ಕಲಾವಿದರು ಸಂಗೀತವು ಇಂಪಾಗುವಂತೆ ಸ್ವರವನ್ನು ಹಾಡುಗಾರಿಕೆಯಲ್ಲಿ ಬಳಸಬೇಕು ಎಂದರು.

ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್. ದುರ್ಗಾದಾಸ್ ಅಧ್ಯಕ್ಷತೆ ವಹಿಸಿದ್ದರು. ಶಂಕರ ಹಲಗತ್ತಿ, ವಿಶ್ವೇಶ್ವರಿ ಹಿರೇಮಠ, ಶಶಿಧರ ತೋಡಕರ ವೇದಿಕೆ ಮೇಲಿದ್ದರು.