ಸಾರಾಂಶ
ರಾಮನಗರ: ಕರ್ನಾಟಕ ತಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ನಿರ್ದೇಶಕರ ಹಾಗೂ ತಿಗಳ ಸಮುದಾಯದ ಇಬ್ಬರು ನಾಯಕರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಬೇಕು. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಮಾತನ್ನು ಈಡೇರಿಸಿ ಋಣಮುಕ್ತರಾಗಲಿ ಎಂದು ಅಖಿಲ ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎ.ಎಚ್ .ಬಸವರಾಜು ಒತ್ತಾಯಿಸಿದರು.
ನಗರದ ತಿಗಳರ ಭವನದಲ್ಲಿ ಕರ್ನಾಟಕ ತಿಗಳರ (ಅಗ್ನಿವಂಶ ಕ್ಷತ್ರಿಯ) ಸಾರ್ವಜನಿಕ ವಿದ್ಯಾಭಿವೃದ್ಧಿ ಸಂಘ ಹಾಗೂ ಅಖಿಲ ಕರ್ನಾಟಕ ತಿಗಳರ ಸಂಘ ರಾಮನಗರ ಶಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾಗಿ 7 ತಿಂಗಳು ಕಳೆದಿದೆ. ಕೂಡಲೆ ನಿಗಮ ಅಧ್ಯಕ್ಷ - ನಿರ್ದೇಶಕರನ್ನು ನೇಮಕ ಮಾಡುವ ಜೊತೆಗೆ 25 ಕೋಟಿ ಅನುದಾನ ನೀಡುವಂತೆ ಕೋರಿದರು.ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿರುವ ನಮ್ಮ ಸಮಾಜದ ಮುಖಂಡರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಲಿ. 15 ಅಥವಾ 18 ಮಂದಿ ನಿರ್ದೇಶಕರ ನೇಮಕಾತಿಯಲ್ಲಿ ಎಲ್ಲ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬೇಕು. ಹಿಂದುಳಿದಿರುವ ತಿಗಳ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡುವಂತೆ ಒತ್ತಾಯ ಮಾಡಿದ್ದೆವು. ಇದಕ್ಕೆ ಮಣಿದ ಹಿಂದಿನ ಸರ್ಕಾರ ಕರ್ನಾಟಕ ತಿಗಳ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ತಂದಿತು. ತುಮಕೂರಿನಲ್ಲಿ ತಿಗಳರ ಅಧ್ಯಯನ ಪೀಠ ಸ್ಥಾಪನೆ ಮಾಡಿದೆ. ಅಲ್ಲದೆ, ಮಾ.28ರಂದು ಅಗ್ನಿ ಬನ್ನಿರಾಯರ ಜಯಂತಿ ಆಚರಣೆಗೆ ಅಧಿಕೃತ ಮುದ್ರೆ ಹೊತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರದಿಂದ ನಿಗಮಕ್ಕೆ ಅಧ್ಯಕ್ಷ - ನಿರ್ದೇಶಕರನ್ನು ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಿಗಳರ ನಡೆ ಕಾಂಗ್ರೆಸ್ ಕಡೆ ಎಂದು ನಿರ್ಧರಿಸಿ ತಿಗಳ ಸಮುದಾಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ನಿಂತಿತು. ಆಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಿಗಳ ಸಮುದಾಯದ 2 ನಿಗಮ ಮಂಡಳಿ ಹಾಗೂ ಇಬ್ಬರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡುವುದಾಗಿ ಭರವಸೆ ನೀಡಿದ್ದರು. ಇದರ ಪರಿಣಾಮ ತುಮಕೂರು, ರಾಮನಗರ, ಮಂಡ್ಯ, ಬೆಂಗಳೂರು ಸೇರಿದಂತೆ ತಿಗಳ ಸಮುದಾಯ ಅತಿ ಹೆಚ್ಚಿರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆಲುವಿನಲ್ಲಿ ಸಮುದಾಯದ ಶ್ರಮ, ಕಾಣಿಕೆ ಇದೆ ಎಂದು ಬವಸರಾಜು ಹೇಳಿದರು.ಸಂಘದ ಕಾರ್ಯದರ್ಶಿ ಕೆಂಪಯ್ಯ ಮಾತನಾಡಿ, ಪ್ರತಿವರ್ಷ ಬೆಂಗಳೂರಲ್ಲಿ ಸಂಘದಿಂದ ಸರ್ವಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ಆಯೋಜಿಸಲಾಗುತ್ತಿತ್ತು. ಪ್ರಸಕ್ತ ಸಾಲಿನಿಂದ ತುಮಕೂರು, ಬೆಂಗಳೂರು, ರಾಮನಗರ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಿ ಪ್ರತಿಭಾವಂತರನ್ನು ಸನ್ಮಾನಿಸಿ ಹುರಿದುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಬೇರೆ ಸಮುದಾಯಗಳಿಗೆ ಹೋಲಿಸಿದರೆ ತಿಗಳ ಸಮುದಾಯದವರು ಶಿಕ್ಷಣದಲ್ಲಿ ತೀರಾ ಹಿಂದುಳಿದಿದ್ದಾರೆ. ಶಿಕ್ಷಣ ನೀಡಲು ಸಾಧ್ಯವಾಗದ ಬಡವರು ಸಂಪರ್ಕಿಸಿದರೆ ಸಂಘದಿಂದ ಆರ್ಥಿಕ ಸಹಾಯ ಮಾಡಲಾಗುವುದು. ಬೆಂಗಳೂರಲ್ಲಿ ಉನ್ನತ ವ್ಯಾಸಂಗ ಮಾಡುವ ಸಮುದಾಯದ ಮಕ್ಕಳಿಗೆ ವಸತಿ ನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶವಿದೆ ಎಂದು ಕೆಂಪಯ್ಯ ತಿಳಿಸಿದರು.ಈ ವೇಳೆ ಸಮುದಾಯದ ಮುಖಂಡ ಕಾಂತರಾಜು ಭವನ ನಿರ್ಮಾಣಕ್ಕೆ 50 ಸಾವಿರ ರು.ಗಳ ಚೆಕ್ ನೀಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಜಂಟಿ ಕಾರ್ಯದರ್ಶಿ ಎ.ಎನ್.ಕೃಷ್ಣಯ್ಯ, ಗೌರವಾಧ್ಯಕ್ಷ ಎಸ್.ಕೆ.ಸಿದ್ದಯ್ಯ, ಸಮುದಾಯದ ಮುಖಂಡರಾದ ಕಾಂತರಾಜು, ಕುಮಾರ್, ತಿಮ್ಮರಾಯ, ಗುರುವಯ್ಯ, ಈಶ್ವರ್, ರಾಮಕೃಷ್ಣ, ನಾಗರಾಜು, ಶ್ರೀಕಂಠಯ್ಯ, ಸುಮಾ, ಗಂಗರೇವಣ್ಣ, ಗುರುಮೂರ್ತಿ, ನಾಗರಾಜು, ಹುಣಸನಹಳ್ಳಿ ಗ್ರಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ಲೋಕೇಶ್, ವೆಂಕಟಪ್ಪ ಮತ್ತಿತರರು ಉಪಸ್ಥಿತರಿದ್ದರು.3ಕೆಆರ್ ಎಂಎನ್ 1,2.ಜೆಪಿಜಿರಾಮನಗರದ ತಿಗಳರ ಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.