ಬರದ ದುಷ್ಪರಿಣಾಮ ಆಗದಂತೆ ಅಧಿಕಾರಿಗಳು ಎಚ್ಚರ ವಹಿಸಲಿ

| Published : Oct 12 2023, 12:01 AM IST

ಸಾರಾಂಶ

ಕೆಡಿಪಿ ಸಭೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಆಗದಂತೆ ನೋಡಿಕೊಳ್ಳಲು ಸಚಿವ ಲಾಡ್‌ ಸೂಚನೆ

ಕನ್ನಡಪ್ರಭ ವಾರ್ತೆ ಧಾರವಾಡ

ಜಿಲ್ಲೆಯ ಎಲ್ಲ ಎಂಟೂ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ರೈತರಿಗೆ ಬರ ಪರಿಹಾರ ಸೇರಿದಂತೆ ಯಾವುದೇ ಕಾರಣಕ್ಕೂ ಬರದ ದುಷ್ಪರಿಣಾಮಗಳು ಜನತೆಗೆ ಆಗದಂತೆ ಸರ್ಕಾರದ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಇಲ್ಲಿಯ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ನಡೆದ 2ನೇ ತ್ರೈಮಾಸಿಕ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ) ಪ್ರಗತಿ ಪರಿಶೀಲಿಸಿದ ಅವರು, ಸವದತ್ತಿಯ ರೇಣುಕಾ ಜಲಾಶಯದಲ್ಲಿ 16 ಟಿಎಂಸಿ ನೀರು ಇರುವ ಮಾಹಿತಿ ಇದೆ. ನೀರಸಾಗರದಿಂದ ಜಿಲ್ಲೆಗೆ ಅವಶ್ಯಕವಾಗಿ ಬೇಕಾಗಿರುವ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ನೀರಿನ ಕೊರತೆ ಆಗದಂತೆ ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗಿದೆ. ಕೆಲವು ಕಡೆಗಳಲ್ಲಿ ಬೋರ್‌ವೆಲ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ‌. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಜಲಜೀವನ ಮಿಶನ್‌ ಯೋಜನೆ ಅಡಿ ಪ್ರತಿ ಮನೆಗೂ ನಳದ ಸಂಪರ್ಕ ನೀಡುವುದು, ನಳ ಸಂಪರ್ಕಕ್ಕಾಗಿ ತೆಗೆದ ಗುಂಡಿಗಳನ್ನು ಮುಚ್ಚಬೇಕು. ಸಂಪೂರ್ಣ ಕೆಲಸ ಮಾಡದ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡುವಂತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿಗೆ ಸೂಚಿಸಿದ ಸಚಿವರು, ಹು-ಧಾ ಅ‍ವಳಿ ನಗರದಲ್ಲಿ ಕೆಂಪು ಬಣ್ಣದ ಕುಡಿಯುವ ನೀರು ಬರುತ್ತಿರುವುದಕ್ಕೆ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರನ್ನು ಪ್ರಶ್ನಿಸಿದರು. ನೀರು ಸಂಗ್ರಹವಾಗಿ ಅಲ್ಲಿಂದ ಶುದ್ಧವಾಗಿ ಹೋಗುವ ಟ್ಯಾಂಕ್‌ ಮೇಲ್ಛಾವಣಿ ಕುಸಿದ ಕಾರಣ ಹೀಗಾಗುತ್ತಿದೆ. ನೀರು ಹೊರ ಹೋಗುವ ಪೈಪ್‌ಗೆ ಫಿಲ್ಡರ್‌ ಕೂರಿಸಿ ಸ್ವಚ್ಛ ನೀರು ಹೋಗುವಂತೆ ಮಾಡಲಾಗುವುದು ಎಂದು ಆಯುಕ್ತರು ಉತ್ತರಿಸಿದರು. ಎಲ್ ಆ್ಯಂಡ್ ಟಿ ಕಂಪನಿಯವರ ಕಾರ್ಯವೈಖರಿ ಅಷ್ಟಾಗಿ ಹೇಳಿಕೊಳ್ಳುವಂತಿಲ್ಲ ಎಂದ ಸಚಿವರು, ಮುಂದಿನ ಸಭೆಗೆ ಮೇಲಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಅವರಿಗೂ ಸೂಚಿಸಲು ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಚಿವ ಲಾಡ್‌ ಹಾಗೂ ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದರು.

ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಪರಿಶೀಲನೆ ಮಾಡಿದ ಸಚಿವರು, ಹುಬ್ಬಳ್ಳಿ ಪ್ಲೈ ಓವರ್ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು.‌ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಕಾರ್ಯೋನ್ಮುಖರಾಗಬೇಕು. ಕೆಲವು ಕಡೆಗಳಲ್ಲಿ ಹೊಲಗಳಿಗೆ ಹೋಗಲು ದಾರಿ ಸಮಸ್ಯೆ ಇದ್ದು, ಹೊಲಗಳ ದಾರಿಗಳನ್ನು ನಿರ್ಮಿಸಬೇಕು. ರೇಷ್ಮೆ, ತೋಟಗಾರಿಕೆ, ಮೀನುಗಾರಿಗೆ, ವಾಣಿಜ್ಯ ಹಾಗೂ ಪ್ರಮುಖ ಆಹಾರ ಬೆಳೆಗಳ ಬೆಳೆಯುವಂತೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಲ್ಲದೇ ಈ ಭಾಗದಲ್ಲಿ ನವಲೂರು ಪೇರಲ, ಧಾರವಾಡದ ಆಫೋಸ್ ಮಾವು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವಂತೆ ಪ್ರಚಾರ ಮಾಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರದ ಯೋಜನೆ ಹಾಗೂ ಸಹಾಯಧನದ ಕುರಿತು ಮಾಹಿತಿ ನೀಡಬೇಕು ಎಂದರು.

ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು, ಪೋಷಿಸಬೇಕು. ಪಶು ಸಂಜೀವಿನಿ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ವಿವೇಕ ಕೌರಿ ಅವರಿಗೆ ಸೂಚಿಸಿದ ಸಚಿವರು, ಇದರಿಂದ ರೈತರ ಜಾನುವಾರಗಳಿಗೆ ಅನುಕೂಲವಾಗಲಿದೆ‌. ಕಾಡು ಗಿಡಗಳ ಜೊತೆಗೆ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದರು. ಯಾವುದೇ ಸಂದರ್ಭದಲ್ಲಿ ಜಾನುವಾರುಗಳಿಗೆ ಕಾಯಿಲೆಗಳು ಬಂದಾಗ ಸಹಾಯವಾಣಿ ಸಂಖ್ಯೆ 1962 ಗೆ ಕರೆ ಮಾಡಬಹುದು. ಮೀನುಗಾರಿಕೆ ಬಗ್ಗೆ ರೈತರಿಗೆ ಮಾಹಿತಿ ಒದಗಿಸಬೇಕಿದೆ. ಜಿಲ್ಲೆಯಲ್ಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯಬೇಕು ಎಂದರು.

ಕರ್ನಾಟಕ ಸರ್ಕಾರದ ವಿಧಾನಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಮಾತನಾಡಿ, ಜಾನುವಾರುಗಳಿಗೆ ಕಾಲುಬಾಯಿ ಬೇನೆ, ಗಂಟಲು ಬೇನೆ, ಚಪ್ಪೆ ಬೇನೆ, ಕಂದು ರೋಗದ ಲಸಿಕೆಗಳನ್ನು ಹಾಕಬೇಕು. ಕುರಿ ಮತ್ತು ಮೇಕೆಗಳಿಗೆ ಕರಳು ಬೇನೆ ಹಾಗೂ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಲಸಿಕೆ ಹಾಕಿಸಬೇಕು. ಕಾಮಧೇನು, ಅನುಗ್ರಹ ಯೋಜನೆಗಳ ಕುರಿತು ರೈತರಿಗೆ ಜಾಗೃತಿ ಮೂಡಿಸಬೇಕಿದೆ. ವಿವಿಧ ಯೋಜನೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನವನ್ನು ನೀಡಬೇಕು. ಮುಂಗಾರು ಮಳೆ ಕೊರತೆಯಿಂದ ಮೇವಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಗ್ರಾಮೀಣ ಭಾಗದಲ್ಲಿ ಮೇವಿನ ಕೊರತೆ ಆಗದಂತೆ ಹೆಚ್ವಿನ ಮುತುವರ್ಜಿ ವಹಿಸಬೇಕು ಎಂಬ ಸಲಹೆ ನೀಡಿದರು.

ಶಾಸಕ ಎನ್.ಎಚ್. ಕೋನರೆಡ್ಡಿ‌ ಮಾತನಾಡಿ, ಗದಗ, ಹಾವೇರಿ ಜಿಲ್ಲೆಗಳಂತೆ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಒದಗಿಸಬೇಕಾಗಿದೆ. ರೈತರಿಗೆ ಪರಿಹಾರ ಕೊಡಿಸಿದರೆ ನೆಮ್ಮದಿ ಸಿಗಲಿದೆ. ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯಲ್ಲಿನ ಬರದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸಿ, ವರದಿ ಸಲ್ಲಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಡಿಸೆಂಬರ್ ಅಂತ್ಯದ ವರೆಗೆ ಮೇವಿನ ಕೊರತೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಮೇವು ಸಂಗ್ರಹಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ನೀರಿನ ಕೊರತೆ ಆಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೋರ್‌ವೆಲ್ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಬೆಳೆ ಪರಿಹಾರದ ಕುರಿತು ಇನ್ಸುರೆನ್ಸ್ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಜಿಪಂ ಸಿಇಒ ಸ್ವರೂಪಾ ಟಿ.ಕೆ., ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭರತ್ ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್‌ ವೃಷ್ಣಿ ಹಾಗೂ ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳಿದ್ದರು.