ಸಾರಾಂಶ
ರೈತಪರ ಕಾಳಜಿಯಿದ್ದರೇ ಬರಪೀಡಿತ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರದ ಮೊತ್ತದಲ್ಲಿ ರಾಜ್ಯ ಸರ್ಕಾರದ ಪಾಲೆಷ್ಟು ಎಂಬುದನ್ನು ಘೋಷಣೆ ಮಾಡಿಯೇ ಬರಬೇಕೆಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬ್ಯಾಡಗಿ
ರೈತಪರ ಕಾಳಜಿಯಿದ್ದರೇ ಬರಪೀಡಿತ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರದ ಮೊತ್ತದಲ್ಲಿ ರಾಜ್ಯ ಸರ್ಕಾರದ ಪಾಲೆಷ್ಟು ಎಂಬುದನ್ನು ಘೋಷಣೆ ಮಾಡಿಯೇ ಬರಬೇಕೆಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.ಪಟ್ಟಣದ ಪ್ರವಾಸಿಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬರಗಾಲ ಘೋಷಣೆ ಮಾಡಿ 2 ತಿಂಗಳು ಕಳೆದಿವೆ. ಕೇಂದ್ರದ ಕಡೆಗೆ ಕೈ ತೋರಿಸುತ್ತಿರುವ ರಾಜ್ಯ ಸರ್ಕಾರ ಹೇಡಿತನ ಪ್ರದರ್ಶಿಸುತ್ತಿದೆ. ರಾಜ್ಯದ ರೈತರ ಹಿತಾಸಕ್ತಿ ದೃಷ್ಟಿಯಿಂದಲಾದರೂ ತಮ್ಮ ಪಾಲಿನ ಪರಿಹಾರದ ಮೊತ್ತವನ್ನು ಘೋಷಿಸುವಂತೆ ಆಗ್ರಹಿಸಿದರು.
ರೈತ ಸಂಘ ಬರಪೀಡಿತ ಪ್ರದೇಶದ ವ್ಯಾಪ್ತಿಯ ಪ್ರತಿ ಎಕರೆಗೆ ₹25 ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದೆ. ಪ್ರಕೃತಿ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್) ಹೆಕ್ಟೇರ್‌ಗೆ ₹8,500 ಕೇಂದ್ರ ಸರ್ಕಾರದಿಂದ ಸಿಗುವ ಸಾಧ್ಯತೆಯಿದೆ. ಅದಕ್ಕೆ ಇನ್ನಷ್ಟು ಸೇರಿಸಿ ಪರಿಹಾರ ನೀಡುವ ಕುರಿತು ಕೇಂದ್ರದ ಬಳಿಯೇ ಕೇಳುತ್ತೇವೆ. ಆದರೆ ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪಾಲನ್ನು ಘೋಷಿಸುವಂತೆ ಆಗ್ರಹಿಸಿದರು.ಶಾಸಕರ ಮನೆಯೆದುರು ಧರಣಿ:
ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಮಳೆ ಕೈಕೊಟ್ಟು ಬರಗಾಲ ಘೋಷಣೆ ಆದರೂ ಸಹ ರೈತರಿಗೆ ಸಂಕಷ್ಟ ತಪ್ಪಿಲ್ಲ. ಹೋರಾಟ ಮಾಡಿಯೇ ರೈತರು ಪರಿಹಾರ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು ನೋವಿನ ಸಂಗತಿ. ರಾಜ್ಯದ ರೈತರು ಸಮಸ್ಯೆಗಳಲ್ಲಿ ಮುಳುಗಿದ್ದಾರೆ. ಆದರೆ ಸರ್ಕಾರದ ಭಾಗವಾಗಿರುವ ಶಾಸಕರು ವಿದೇಶಗಳಿಗೆ ತೆರಳಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮುಖುಮಂತ್ರಿ ಬಂದು ಹೋದ ಬಳಿಕವೂ ಪರಿಹಾರದ ಮೊತ್ತ ಘೋಷಣೆಯಾಗದಿದ್ದಲ್ಲಿ ಡಿ.4 ರಿಂದ ಶಾಸಕರ ಮನೆ ಮುಂದೆ ಧರಣಿ ಆರಂಭಿಸಲಿದ್ದೇವೆ ಎಂದು ಎಚ್ಚರಿಸಿದರು.ನ.28 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ:
ಮುಖಂಡ ಕಿರಣ ಗಡಿಗೋಳ ಮಾತನಾಡಿ, ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ಮಧ್ಯಂತರ ಬೆಳೆ ಪರಿಹಾರ, 7 ತಾಸು ತ್ರಿಫೇಸ್ ವಿದ್ಯುತ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಸಮಸ್ಯೆಗಳ ಪರಿಹಾರಕ್ಕೆ ಇನ್ನೆಷ್ಟು ವರ್ಷಗಳು ಕಾಯಬೇಕು ಎಂದು ಪ್ರಶ್ನಿಸಿದ ಅವರು, ಸಮಸ್ಯೆಗಳ ಪರಿಹಾರಕ್ಕಾಗಿ ನ.28 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಮೌನೇಶ ಕಮ್ಮಾರ, ಶೇಖಪ್ಪ ಕಾಶಿ ಸೇರಿದಂತೆ ಹಲವು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.