ಸಾರಾಂಶ
ಜ್ಞಾನ ಗಳಿಕೆಯು ಅಜೀವ ಪರ್ಯಂತವಾಗಿದ್ದು, ಅದು ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದಿಂದ ಕೂಡಿರಬೇಕು. ಸಮಾಜಕ್ಕೆ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಬೇಕು.
ಧಾರವಾಡ:
ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ, ನೈಸರ್ಗಿಕ ಸಂಪನ್ಮೂಲ ಅವನತಿ, ಸಂಭವನೀಯ ರೋಗಗಳು, ಮೈಕ್ರೋಪ್ಲಾಸ್ಟಿಕ್ಸ್, ಜನಸಂಖ್ಯೆ ಪ್ರಮಾಣ ಬದಲಾವಣೆ ಹಾಗೂ ವಲಸೆ ಅಂತಹ ಭವಿಷ್ಯದ ಸವಾಲುಗಳನ್ನು ಎದುರಿಸಲು ಪದವೀಧರರು ಸಿದ್ಧರಾಗಬೇಕು ಎಂದು ಇಂಫಾಲ್‌ನ ಕೇಂದ್ರೀಯ ಕೃಷಿ ವಿವಿ ಕುಲಪತಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಸ್. ಅಯ್ಯಪ್ಪನ್ ಹೇಳಿದರು.ಇಲ್ಲಿಯ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ 74ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ಪ್ರಸ್ತುತ ಪ್ರವಾಹ, ಬರಗಾಲ, ಅಕಾಲಿಕ ಮಳೆ, ಭೂಕುಸಿತ, ತಾಪಮಾನ ಏರಿಕೆ, ತರಹೇವಾರಿ ರೋಗಗಳು ಎಲ್ಲರನ್ನೂ ಬಾಧಿಸುತ್ತಿದ್ದು, ಸಹಜ ಲಕ್ಷಣ ಎನ್ನುವುದನ್ನು ಗಮನಿಸಬೇಕು. ವಿವಿಧ ಜೈವಿಕ ಮತ್ತು ಅಜೈವಿಕ ಒತ್ತಡಗಳು ಜನರ ಮೇಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಹಜ ಬದುಕಿಗಾಗಿ ಬಹು ಆಯಾಮಗಳ, ನಾವೀನ್ಯಪೂರ್ಣ ವಿಧಾನಗಳು ಮತ್ತು ಇಂತಹ ಸಮಸ್ಯೆಗಳಿಗೆ ಪರಿಹಾರೋಪಾಯಗಳು ಇಂದಿನ ಅನಿವಾರ್ಯ ಅಗತ್ಯ ಎಂದು ಪ್ರತಿಪಾದಿಸಿದರು.
ಸ್ವಂತ ಹಾಗೂ ಸಮಾಜದ ಒಳಿತಿಗಾಗಿ ಮುಂದಿರುವ ನೈಸರ್ಗಿಕ, ಮಾನವ ನಿರ್ಮಿತ, ಜಾಗತಿಕ ಮತ್ತು ಸ್ಥಳೀಯ ಸವಾಲುಗಳನ್ನು ನಮ್ಮ ವಿವೇಚನೆ ಮತ್ತು ಕೌಶಲ್ಯಗಳ ಪ್ರದರ್ಶನಕ್ಕಿಟ್ಟು ಎದುರಿಸಲು ಸದಾವಕಾಶ ಎಂದು ಪರಿಗಣಸಬೇಕು. ಜಗತ್ತಿನಲ್ಲಿ ಆಯ್ಕೆ, ಅವಕಾಶಗಳು ಕೈ ಬೀಸಿ ಕರೆಯುತ್ತಿವೆ. ಕಲಿಕಾ ಅವಧಿಯಲ್ಲಿ ವಿವಿಯಲ್ಲಿ ಗಳಿಸಿದ ಯಾವುದೇ ಕ್ಷೇತ್ರದ ತಾಂತ್ರಿಕ ಜ್ಞಾನವು ತಮ್ಮನ್ನು ಉದ್ಯೋಗಾಕಾಂಕ್ಷಿಗಳ ಬದಲಾಗಿ ಯಶಸ್ವಿ ಉದ್ಯಮಿಯನ್ನಾಗಿ ಮಾಡಬಹುದಾಗಿದೆ. ಉತ್ತಮ ಶಿಕ್ಷಣ ಮತ್ತು ಜ್ಞಾನ, ಕೌಶಲ್ಯಪೂರ್ಣತೆ, ನಾವೀನ್ಯತೆ ಮತ್ತು ಸೇವಾ ಮನೋಭಾವ ಇಂದಿನ ನಿರ್ಣಾಯಕ ಕಾಲಘಟ್ಟದ ಅವಶ್ಯಕತೆಗಳಾಗಿವೆ ಎಂದರು.ಜ್ಞಾನ ಗಳಿಕೆಯು ಅಜೀವ ಪರ್ಯಂತವಾಗಿದ್ದು, ಅದು ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದಿಂದ ಕೂಡಿರಬೇಕು. ಸಮಾಜಕ್ಕೆ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಬೇಕು. ಗಳಿಸಿದ ಜ್ಞಾನದ ಜತೆಗೆ ಪಾರಂಪರಿಕ ಜ್ಞಾನ ಬೆಸೆದು ಕಲಿತ ಸಂಸ್ಥೆಗೆ ಹಸೆರು ತರುವ ಪರಿವರ್ತನಾಕಾರಿ ಪಾತ್ರ ವಹಿಸುವ ಜವಾಬ್ದಾರಿ ಪದವೀಧರರ ಮೇಲಿದೆ ಎಂದರು.