ಸಾರಾಂಶ
ಜಾಗತಿಕ ತಾಪಮಾನದಿಂದ ಜಗತ್ತು ತಲ್ಲಣಿಸುತ್ತಿದ್ದು, ಭಾರತ ದೇಶದ ಪರಿಸರ ನಮ್ಮನ್ನು ಒಂದು ಹಂತದಲ್ಲಿ ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಪರಿಸರ ಅಂಕಣಕಾರ ನಾಗೇಶ ಹೆಗಡೆ ಹೇಳಿದರು.
ಸಾಗರ: ಜಾಗತಿಕ ತಾಪಮಾನದಿಂದ ಜಗತ್ತು ತಲ್ಲಣಿಸುತ್ತಿದ್ದು, ಭಾರತ ದೇಶದ ಪರಿಸರ ನಮ್ಮನ್ನು ಒಂದು ಹಂತದಲ್ಲಿ ರಕ್ಷಣೆ ಮಾಡಿಕೊಂಡು ಬಂದಿದೆ ಎಂದು ಪರಿಸರ ಅಂಕಣಕಾರ ನಾಗೇಶ ಹೆಗಡೆ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಮಲೆನಾಡಿನ ಬಿಕ್ಕಟ್ಟುಗಳು ವಿಷಯದ ಕುರಿತು ಮಾತನಾಡಿದ ಅವರು, ಮಾಧವ ಗಾಡ್ಗಿಳ್ ವರದಿಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗಬೇಕು. ಮಾಧವ ಗಾಡ್ಗಿಳ್ ವರದಿಯನ್ನು ಕನ್ನಡದಲ್ಲಿ ಮುದ್ರಿಸಿದರೆ ಪರಿಸರದ ಬಗ್ಗೆ ಹೆಚ್ಚು ಜನರು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ರಾಜ್ಯ ಸರ್ಕಾರ ಈ ಬಾರಿ ಗ್ರೀನ್ ಬಜೆಟ್ ಮಂಡಿಸಬೇಕು. ಬಜೆಟ್ ಚರ್ಚೆಯಲ್ಲಿ ಕನಿಷ್ಠ ಮೂರು ದಿನ ರಾಜ್ಯದ ಪರಿಸರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚರ್ಚೆ ನಡೆಯಬೇಕು. ಪರಿಸರ ಬಜೆಟ್ ಮಂಡಿಸುವ ಮೂಲಕ ರಾಜ್ಯ ಸರ್ಕಾರ ಹೊಸ ಸಂಸ್ಕೃತಿಗೆ ಮುನ್ನುಡಿ ಬರೆಯಬೆಕು ಎಂದು ಒತ್ತಾಯಿಸಿದ ಅವರು, ಜಗತ್ತಿನ ಎಲ್ಲ ದೇಶಗಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿವೆ. ಆದರೆ ಭಾರತದಲ್ಲಿ ಇದರ ಪ್ರಮಾಣ ತೀರ ಕಡಿಮೆ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯೊಂದರಲ್ಲೆ ಕಳೆದ ಹತ್ತು ವರ್ಷಗಳಲ್ಲಿ 75 ಸಾವಿರ ಚದರ ಕಿ.ಮೀ. ಅರಣ್ಯ ನಾಶವಾಗಿದೆ. ಅಡಕೆ ತೋಟ, ಇನ್ನಿತರೆ ಹೆಸರಿನಲ್ಲಿ ನಿರಂತರವಾಗಿ ಅರಣ್ಯ ನಾಶವಾಗುತ್ತಿದೆ. ಅರಣ್ಯ ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಬಳಿ ಅನುದಾನದ ಕೊರತೆ ಇದೆ. ಕನಿಷ್ಠ ಫೆನ್ಸಿಂಗ್ ಹಾಕಲು ಸಹ ಹಣವಿಲ್ಲದ ಸ್ಥಿತಿ ಇದೆ. ಹಾಗಾಗಿ ಇಡೀ ಪಶ್ಚಿಮಘಟ್ಟ ಆತಂಕ ಎದುರಿಸುತ್ತಿದೆ.
ಮಾಧ್ಯಮಗಳು ಇಂತಹ ಸಂದರ್ಭದಲ್ಲಿ ಜಾಗೃತಿಗೊಳ್ಳಬೇಕು. ಎಲ್ಲೋ ಇದ್ದವರು ಬಂದು ನಮ್ಮ ಪರಿಸರ ಸಂರಕ್ಷಣೆ ಮಾಡುವ ಅಗತ್ಯವಿಲ್ಲ. ಸ್ಥಳೀಯವಾಗಿರುವ ನಾವು ಪರಿಸರ ಸಂರಕ್ಷಣೆ ಮಾಡಿಕೊಳ್ಳುವ ಮೂಲಕ ಮಲೆನಾಡು ಎದುರಿಸುತ್ತಿರುವ ಬಿಕ್ಕಟ್ಟನ್ನು ದೂರ ಮಾಡುವ ಸಂಕಲ್ಪ ಕೈಗೊಳ್ಳಬೇಕೆಂದು ಸಲಹೆ ನೀಡಿದರು.ಸಂಘದ ಅಧ್ಯಕ್ಷ ಜಿ.ನಾಗೇಶ್, ಕಾರ್ಯದರ್ಶಿ ಮಹೇಶ್ ಹೆಗಡೆ, ಉಪಾಧ್ಯಕ್ಷರಾದ ರವಿನಾಯ್ಡು, ಲೋಕೇಶಕುಮಾರ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಪರಿಸರ ಬರಹಗಾರ ಅಖಿಲೇಶ್ ಚಿಪ್ಳಿ ಹಾಜರಿದ್ದರು.
ಬೆಂಗಳೂರಿನ ನೀರು ಹಿಡಿದಿಟ್ಟುಕೊಳ್ಳಲು ಯೋಜನೆ ರೂಪಿಸಿ
ಮಲೆನಾಡಿನ ಮೇಲೆ ಬೇರೆಬೇರೆ ಹಂತದಲ್ಲಿ ದಬ್ಬಾಳಿಕೆ ನಡೆಯುತ್ತಿದೆ. ಈಗಾಗಲೆ ಎತ್ತಿನಹೊಳೆ ಯೋಜನೆ ವೈಫಲ್ಯ ನಮ್ಮ ಎದುರಿಗೆ ಇದೆ. ಇದರ ಜೊತೆಗೆ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ನಡೆಯುತ್ತಿದೆ. ತಗ್ಗಿನಿಂದ ಅಷ್ಟು ಎತ್ತರಕ್ಕೆ ಒಯ್ಯುವ ಯೋಜನೆ ಅವೈಜ್ಞಾನಿಕವಾಗಿದೆ. ಬೆಂಗಳೂರಿನಲ್ಲಿ ಬೀಳುವ ಮಳೆ ೯೦೦ ಮಿ.ಮೀ.ಗೂ ಹೆಚ್ಚು. ಈ ನೀರು ಸುಮಾರು ೧೩ ಟಿಎಂಸಿ ಎಂದು ಅಂದಾಜಿಸಲಾಗಿದ್ದು, ಅದನ್ನು ಹಿಡಿದಿಟ್ಟುಕೊಳ್ಳುವ ಯೋಜನೆ ರೂಪಿಸಬೇಕು ಎಂದು ಪರಿಸರ ಅಂಕಣಕಾರ ನಾಗೇಶ ಹೆಗಡೆ ಹೇಳಿದರು.
ಇದರ ಜೊತೆಗೆ ಪೈಪ್ಲೈನ್ ಎಳೆಯುವಾಗ ಅಪಾರ ಪ್ರಮಾಣದ ಅರಣ್ಯನಾಶವಾಗುತ್ತದೆ. ಹಾಗೆಯೆ ಶರಾವತಿ ಪಂಪ್ಡ್ ಸ್ಟೋರೇಜ್ ಸಹ ಅವೈಜ್ಞಾನಿಕ ಯೋಜನೆಯಾಗಿದ್ದು, ದೊಡ್ಡ ಪ್ರಮಾಣದಲ್ಲಿ ಪರಿಸರನಾಶವಾಗುತ್ತದೆ. ಯೋಜನೆ ಕುರಿತು ಈತನಕ ಪ್ರಾಥಮಿಕ ಮಾಹಿತಿಯನ್ನು ಸ್ಥಾನಿಕ ಜನರಿಗೆ ನೀಡಿಲ್ಲ. ಸ್ಥಳೀಯರನ್ನು ಕತ್ತಲಿನಲ್ಲಿಟ್ಟು ಬೆಂಗಳೂರಿಗೆ ಬೆಳಕು ಕೊಡುತ್ತೇವೆ ಎನ್ನುವುದು ಅರ್ಥವಿಲ್ಲದ ಮಾತು ಎಂದು ಹೇಳಿದರು.