ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ಚಿತ್ರದುರ್ಗ ದಿಂದ ಬೆಂಗಳೂರುವರೆಗೆ ಬೈಕ್ ರ‍್ಯಾಲಿ ಆಯೋಜಿಸಿದ್ದು, ಅನುಭವಿತ 10 ದ್ವಿಚಕ್ರ ವಾಹನ ಸವಾರರು ಭಾನುವಾರ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.ಬೈಕ್ ರ‍್ಯಾಲಿ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ರಾಜ್ಯ ಸರ್ಕಾರ ಕಳೆದ ವರ್ಷ ಬೀದರ್‌ನಿಂದ ಚಾಮರಾಜನಗರದವರೆಗೂ ಮಾನವ ಸರಪಳಿ ನಿರ್ಮಿಸುವ ಮೂಲಕ ಇತಿಹಾಸ ಸೃಷ್ಠಿಸಿ ಗಿನ್ನಿಸ್ ಬುಕ್‌ಗೆ ದಾಖಲೆ ನಮೂದಾಗುವಂತೆ ಮಾಡಿತ್ತು. ಜನರಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವ ಬಿಂಬಿಸುವಂತಹ ಕಾರ್ಯಕ್ರಮ ಅದಾಗಿತ್ತು. ಈಗ ಬೈಕ್ ಮತ್ತು ಸೈಕಲ್ ರ‍್ಯಾಲಿ ಆಯೋಜಿಸುವ ಮೂಲಕ ಯುವ ಪೀಳಿಗೆಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು “ನನ್ನ ಮತ ನನ್ನ ಹಕ್ಕು” ಎಂಬ ಶೀರ್ಷಿಕೆಯಡಿ ಆಯೋಜಿಸಲಾಗುತ್ತಿದೆ. ಬೈಕ್ ರ‍್ಯಾಲಿಯು, ಸಂವಿಧಾನ ನೀಡಿರುವ ಪ್ರಜಾಪ್ರಭುತ್ವ ಮಹತ್ವ ಅರಿಯಲು ಮತ್ತು ಮತದಾನ ಹಕ್ಕು, ಮೂಲಭೂತ ಕರ್ತವ್ಯಗಳ ಕುರಿತು ಯುವಪೀಳಿಗೆಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.
ಜಿಲ್ಲಾ ಕೇಂದ್ರದಲ್ಲಿ ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಗರದ ಜಿಪಂ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ನಗರದಲ್ಲಿ ಸೈಕಲ್ ರ್‍ಯಾಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿಯೇ ಚಾಲನೆ ನೀಡಲಾಗುತ್ತದೆ. ಅಲ್ಲಿಂದ ರ‍್ಯಾಲಿಯು ಗಾಂಧಿ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ, ಕನಕವೃತ್ತ ವರೆಗೆ ಸಾಗಿ ಇದೇ ಮಾರ್ಗದಲ್ಲಿ ಹಿಂದಿರುಗಿ ಒನಕೆ ಓಬವ್ವ ವೃತ್ತದ ಬಳಿ ಮುಕ್ತಾಯಗೊಳ್ಳಲಿದೆ ಎಂದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯಿಂದ 10 ಜನ ದ್ವಿಚಕ್ರ ವಾಹನ ಸವಾರರನ್ನು ಗುರುತಿಸಿ ಸುರಕ್ಷತಾ ಕ್ರಮದಿಂದ ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿಯು ಚಿತ್ರದುರ್ಗದಿಂದ ರಾಷ್ಟ್ರೀಯ ಹೆದ್ದಾರಿಯ ಮೂಲಕ ಬೆಂಗಳೂರಿನ ವಿಧಾನಸೌಧತ್ತ ಹೊರಟು ಸೆ.15 ರಂದು ಅಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸೇರ್ಪಡೆ ಆಗಲಿದೆ ಎಂದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.