ಕೃಷಿ ಕಸುಬಿಗೆ ಯುವಕರು ಆಸಕ್ತಿ ವಹಿಸಲಿ: ಸ್ವರ್ಣವಲ್ಲೀ ಶ್ರೀ

| Published : May 22 2024, 12:54 AM IST

ಕೃಷಿ ಕಸುಬಿಗೆ ಯುವಕರು ಆಸಕ್ತಿ ವಹಿಸಲಿ: ಸ್ವರ್ಣವಲ್ಲೀ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಜನರಲ್ಲಿ ಮತ್ತು ಸರ್ಕಾರ ಮಟ್ಟದಲ್ಲಿ ಕೃಷಿ ಬಗ್ಗೆ ಅನಾದರ ಉಂಟಾದ ಪರಿಣಾಮ ಕೃಷಿ ಜಯಂತಿಯನ್ನು ಕಳೆದ ೧೬ ವರ್ಷಗಳಿಂದ ನಿರಂತರವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಸ್ವರ್ಣವಲ್ಲೀ ಸ್ವಾಮೀಜಿ ತಿಳಿಸಿದರು.

ಶಿರಸಿ: ಇತ್ತೀಚಿನ ದಿನಗಳಲ್ಲಿ ಯುವಕರ ಜತೆ ಹಿರಿಯರಲ್ಲಿಯೂ ಕೃಷಿ ಕುರಿತು ಅನಾದರ ಉಂಟಾಗಿರುವುದು ಜ್ವಲಂತ ಸಮಸ್ಯೆಯಾಗಿದ್ದು, ಇದನ್ನು ಬಗೆಹರಿಸುವ ದಿಕ್ಕಿನಲ್ಲಿ ನಾವೆಲ್ಲರೂ ಯೋಚಿಸಬೇಕಾಗಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸೋಂದಾ ಸ್ವರ್ಣವಲ್ಲೀಯಲ್ಲಿ ೨ ದಿನಗಳ ಕಾಲ ಸ್ವರ್ಣವಲ್ಲೀ ಪ್ರತಿಷ್ಠಾನ, ಟಿಎಸ್‌ಎಸ್, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ, ಗ್ರಾಮಾಭ್ಯುದಯ ಸಹಯೋಗದಲ್ಲಿ ಜೀವ ವೈವಿಧ್ಯ ಮಂಡಳಿ, ತಾಲೂಕು ಪಂಚಾಯಿತಿ, ಜೀವ ವೈವಿದ್ಯ ಸಮಿತಿ ಹಾಗೂ ಸ್ವರ್ಣವಲ್ಲೀ ಸಸ್ಯಲೋಕದ ಸಹಕಾರದಲ್ಲಿ ಶ್ರೀಲಕ್ಷ್ಮೀನೃಸಿಂಹ ಜಯಂತಿ ಮತ್ತು ರಾಷ್ಟ್ರೀಯ ಜೀವ ವೈವಿಧ್ಯ ದಿನದಂದು ಹಮ್ಮಿಕೊಂಡ ಕೃಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಗತ್ತನ್ನು ಪೋಷಣೆ ಮಾಡುವ ರೀತಿಯಲ್ಲಿ ಕೃಷಿಯನ್ನು ಪೋಷಣೆ ಮಾಡಿ ಬೆಳೆಸಬೇಕಾಗಿದ್ದು, ನಮಗೆ ಕೃಷಿಯೇ ನಮ್ಮ ದೇವರು. ಆದ್ದರಿಂದ ದೇವರ ದಿನವಾದ ಇಂದು ಕೃಷಿ ಜಯಂತಿ ಆಚರಿಸುತ್ತಿದ್ದೇವೆ. ಜನರಲ್ಲಿ ಮತ್ತು ಸರ್ಕಾರ ಮಟ್ಟದಲ್ಲಿ ಕೃಷಿ ಬಗ್ಗೆ ಅನಾದರ ಉಂಟಾದ ಪರಿಣಾಮ ಕೃಷಿ ಜಯಂತಿಯನ್ನು ಕಳೆದ ೧೬ ವರ್ಷಗಳಿಂದ ನಿರಂತರವಾಗಿ ಆಚರಣೆ ಮಾಡಲಾಗುತ್ತಿದೆ ಎಂದರು.ಕೃಷಿ ಮಾಡುವ ಯುವಕನಿಗೆ ಹೆಣ್ಣು ಸಿಗುವುದಿಲ್ಲ ಎಂಬುದು ದೊಡ್ಡ ಕಾರಣವಾಗಿದೆ. ಕೂಲಿ ಕಾರ್ಮಿಕರ ಕೊರತೆ, ಬೆಳೆ ಸಮಸ್ಯೆ, ಮಾರುಕಟ್ಟೆ ಸೌಲಭ್ಯದ ಕೊರತೆಯೂ ಕೃಷಿಕರನ್ನು ಕಾಡುತ್ತಿದ್ದು, ಸಮಸ್ಯೆ ಇಲ್ಲದ ಸ್ಥಳ ಯಾವುದೂ ಇಲ್ಲ. ಕೃಷಿಯನ್ನು ಪರಾಂಬರಿಸಿ ನೋಡಬೇಕಿದೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ಕೃಷಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಿ, ಭೂತಾಯಿಗೆ ಗೌರವ ನೀಡುವುದನ್ನು ರಾಜ್ಯಕ್ಕೆ ಸ್ವರ್ಣವಲ್ಲೀ ಶ್ರೀ ತೋರಿಸಿಕೊಟ್ಟಿದ್ದಾರೆ. ದೇಶದಲ್ಲಿ ಬಹಳಷ್ಟು ಸಂತರು, ಋಷಿಮುನಿಗಳಿದ್ದಾರೆ. ಆದರೆ ಒಬ್ಬ ಯತಿವರ್ಯ ಕೃಷಿ ಪ್ರೀತಿಸುತ್ತಾರೆ. ಕೃಷಿಗೆ ಪ್ರೇರಣೆ ನೀಡಿ, ನಮ್ಮ ಪರಂಪರೆ ಉಳಿಸಲು ಸ್ವರ್ಣವಲ್ಲೀ ಮಠ ತಮ್ಮ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಲಕ್ಷ್ಮೀನಾರಾಯಣ ಹೆಗಡೆ ಮಾತನಾಡಿ, ನಾವು ವ್ಯಕ್ತಿಗಳ ಜಯಂತಿಯನ್ನು ಆಚರಣೆ ಮಾಡುತ್ತೇವೆ. ಆದರೆ ಕೃಷಿ ಜಯಂತಿ ಆಚರಿಸುತ್ತಿರುವುದಿಲ್ಲ. ಸ್ವರ್ಣವಲ್ಲೀ ಮಠದಲ್ಲಿ ಪ್ರಥಮ ಬಾರಿಗೆ ಕೃಷಿ ಜಯಂತಿಯನ್ನು ಆಚರಿಸಿದ ನಂತರ ವಿವಿಧ ಭಾಗಗಳಲ್ಲಿ ಆಚರಣೆ ಮಾಡಲಾಯಿತು. ನಮ್ಮ ರಾಜ್ಯದಲ್ಲಿ ಎಂಜಿನಿಯರಿಂಗ್ ವಿಭಾಗಕ್ಕೆ ೧.೮೦ ಲಕ್ಷ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶವಿದೆ. ೬ ಕೃಷಿ ಸಂಬಂಧಿಸಿದ ವಿಶ್ವವಿದ್ಯಾಲಯಗಳಿದ್ದರೂ ೪,೭೦೦ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವುದು ದುರ್ದೈವವಾಗಿದೆ ಎಂದರು.ರಾಷ್ಟ್ರೀಯ ಜೀವ ವೈವಿಧ್ಯ ಮಂಡಳಿ ನಿರ್ದೇಶಕ ಆರ್.ಆರ್. ಹಂಚಿನಾಳ ಮಾತನಾಡಿ, ಜಗತ್ತಿನಲ್ಲಿ ೩೪ ವಿವಿಧ ಜೀವ ವೈವಿಧ್ಯತೆಯ ತಾಣದಲ್ಲಿ ೪ ನಮ್ಮ ದೇಶದಲ್ಲಿದೆ. ಪಶ್ಚಿಮ ಘಟ್ಟದ ಪ್ರದೇಶ ಜೀವ ವೈವಿಧ್ಯತೆಯ ಮುಖ್ಯ ತಾಣವಾಗಿದೆ ಎಂದರು.ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಆರ್. ವಾಸುದೇವ, ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಭಾಗ ಮಟ್ಟದ ಕೃಷಿ ರಸಪ್ರಶ್ನೆ ಸ್ಪರ್ಧೆಯ ಉದ್ಘಾಟನೆ, ದೇವರಕಾಡು ನಾಮಫಲಕ ಅನಾವರಣ, ಸಸ್ಯಲೋಕ ಪುನಶ್ಚೇತನ ಯೋಜನೆಗೆ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಚಾಲನೆ ನೀಡಿದರು. ಸ್ವರ್ಣವಲ್ಲೀ ಪ್ರಭಾ ಕೃಷಿ ವಿಶೇಷಾಂಕವನ್ನು ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.ಶ್ರೀಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಜಿ.ವಿ. ಹೆಗಡೆ ಗೋಡವೆಮನೆ ಇದ್ದರು. ರಾ.ರಾ. ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಹಾಡಿದರು. ಹುಳಗೋಳ ಭಾಗದ ಮಾತೆಯರು ಪ್ರಾರ್ಥಿಸಿದರು. ಆರ್.ಎನ್. ಹೆಗಡೆ ಉಳ್ಳಿಕೊಪ್ಪ ಸ್ವಾಗತಿಸಿದರು. ಸುರೇಶ ಹೆಗಡೆ ಹಕ್ಕಿಮನೆ ನಿರೂಪಿಸಿದರು. ಎನ್.ಬಿ. ಹೆಗಡೆ ಮತ್ತಿಹಳ್ಳಿ ವಂದಿಸಿದರು.