ಸಾರಾಂಶ
ನಮ್ಮ ಯುವಪೀಳಿಗೆ ಕೃಷಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿದೆ. ಅವರನ್ನು ಕೃಷಿಯತ್ತ ಸೆಳೆಯುವ ಕಾರ್ಯವಾಗ ಬೇಕಾಗಿದೆ. ಕೃಷಿಯಿಂದಲೂ ಲಾಭದಾಯಕ ಉದ್ಯಮ ನಡೆಸಲು ಸಾಧ್ಯವೆಂಬುದನ್ನು ಮನವರಿಕೆ ಮಾಡಬೇಕಾಗಿದೆ ಎಂದು ಹಳಿಯಾಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಯುವ ವಿಜ್ಞಾನಿ, ಕೃಷಿ ತಜ್ಞ ಡಾ. ಡಿ.ಎನ್. ಕಾಂಬ್ರೇಕರ ಹೇಳಿದರು.
ಹಳಿಯಾಳ: ಕನ್ನಡ ನಾಡಿನ ಜನರಿಗೆ ಭಾಷೆಯೆಂದರೆ ಕೇವಲ ಸಂಪರ್ಕ ಮಾಧ್ಯಮ ಮಾತ್ರವಲ್ಲ, ಅದೊಂದು ಬದುಕಿನ ಸಾಧನವಾಗಿದೆ ಎಂದು ಹಳಿಯಾಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಯುವ ವಿಜ್ಞಾನಿ, ಕೃಷಿ ತಜ್ಞ ಡಾ. ಡಿ.ಎನ್. ಕಾಂಬ್ರೇಕರ ಹೇಳಿದರು.
ಗುರುವಾರ ಹಳಿಯಾಳದ ಪುರಭವನದಲ್ಲಿ ನಡೆದ ಹಳಿಯಾಳ ತಾಲೂಕ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಭಾಷೆಗಳಲ್ಲಿ ಸಾಮರಸ್ಯ ಇರಲಿ, ಆದರೆ ಕನ್ನಡ ಭಾಷೆ ಮಾತ್ರ ಸಾರ್ವಭೌಮವಾಗಿರಲಿ ಎಂದರು.ಕನ್ನಡ ಭಾಷೆಯಲ್ಲಿ ಕಲಿತರೆ ಉಜ್ವಲ ಭವಿಷ್ಯ ಅಸಾಧ್ಯವೆಂಬ ಕಲ್ಪನೆಯಿಂದ ಪಾಲಕರು ಮತ್ತು ಮಕ್ಕಳು ಹೊರಬರಬೇಕು. ಕನ್ನಡ ಭಾಷೆಯಲ್ಲಿ ಕಲಿತರೆ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ನಾನೇ ನಿಮ್ಮೆದುರು ಜೀವಂತ ಸಾಕ್ಷಿಯಾಗಿ ನಿಂತಿದ್ದೇನೆ ಎಂದರು.
ಕೃಷಿ ಕಾಯಕ ಶ್ರೇಷ್ಠ: ನಮ್ಮ ಯುವಪೀಳಿಗೆ ಕೃಷಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿದೆ. ಅವರನ್ನು ಕೃಷಿಯತ್ತ ಸೆಳೆಯುವ ಕಾರ್ಯವಾಗ ಬೇಕಾಗಿದೆ. ಕೃಷಿಯಿಂದಲೂ ಲಾಭದಾಯಕ ಉದ್ಯಮ ನಡೆಸಲು ಸಾಧ್ಯವೆಂಬುದನ್ನು ಮನವರಿಕೆ ಮಾಡಬೇಕಾಗಿದೆ. ಹಳಿಯಾಳ ತಾಲೂಕಿನಲ್ಲಿ ಜಾನುವಾರುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಲ್ಲ ಎಂದರು.ಕೀಟನಾಶಕ ಬೆಳೆನಾಶಕದಿಂದ ಭೂಮಿಯ ಸತ್ವ ಕಡಿಮೆಯಾಗುತ್ತಿರುವುದರಿಂದ ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಅದಕ್ಕಾಗಿ ಜಾನುವಾರುಗಳನ್ನು ಸಾಕುವುದನ್ನು ಆರಂಭಿಸಬೇಕು. ರೈತರು ಹೆಚ್ಚಿನ ಆದಾಯ ತರುವ ಬೆಳೆಗಳನ್ನು ಹಾಗೂ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಸಮ್ಮೇಳನ ಅಧ್ಯಕ್ಷರು, ಉದ್ಘಾಟಕರನ್ನು ಸನ್ಮಾನಿಸಲಾಯಿತು. ಹಳಿಯಾಳ ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಹಳಿಯಾಳ ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ, ತಾಪಂ ಇಒ ಆರ್. ಸತೀಶ, ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾಕೀರ ಜಂಗೂಬಾಯಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಇದ್ದರು. ಕಸಾಪ ಪ್ರಮುಖರಾದ ಶಾಂತಾರಾಮ ಚಿಬುಲಕರ, ವಿಠ್ಠಲ ಕೊರ್ವೇಕರ, ಕಾಳಿದಾಸ ಬಡಿಗೇರ, ಗಣಪತಿ ನಾಯ್ಕ, ಗೋಪಾಲ ಅರಿ, ಗೋಪಾಲ ಮೇತ್ರಿ, ಸಂತೋಷ ಹಬ್ಬು ಇದ್ದರು.