ಕಾರ್ಮಿಕರ ಶ್ರಮಕ್ಕೆ ನ್ಯಾಯ ಸಿಗಲಿ: ಎಸ್ಪಿ ಎಂ. ನಾರಾಯಣ

| Published : Oct 10 2024, 02:22 AM IST

ಸಾರಾಂಶ

ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಪೊಲೀಸ್ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 112ಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಿದಲ್ಲಿ ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ.

ಕಾರವಾರ: ದೇಶದಲ್ಲಿ ಸುಮಾರು 45 ಕೋಟಿಗೂ ಆಧಿಕ ಅಸಂಘಟಿತ ಕಾರ್ಮಿಕರಿದ್ದು, ಶ್ರಮಿಕ ವರ್ಗದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ದೇಶದ ಅಭಿವೃದ್ಧಿಗೆ ಅತಿ ಹೆಚ್ಚಿನ ಕೊಡುಗೆ ನೀಡುತ್ತಿರುವ ಕಾರ್ಮಿಕರ ಶ್ರಮಕ್ಕೆ ನ್ಯಾಯ ಮತ್ತು ಗೌರವ ದೊರೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ತಿಳಿಸಿದರು.

ನಗರದ ಸಾಯಿಮಂದಿರ ರಸ್ತೆಯಲ್ಲಿನ ಇಂದಿರಾಕಾಂತ ಸಭಾಭವನದಲ್ಲಿ ಜಿಲ್ಲೆಯ ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರ ದೈನಂದಿನ ಚಟುವಟಿಕೆ ಸುಗಮವಾಗಿ ಸಾಗಲು ಪ್ರತಿ ಹಂತದಲ್ಲೂ ಕಾರ್ಮಿಕರ ಶ್ರಮ ಇದ್ದೇ ಇರುತ್ತದೆ. ಕಾರ್ಮಿಕರ ಅಭಿವೃದ್ಧಿಗಾಗಿ ಹಾಗೂ ಅವರ ಜೀವನಮಟ್ಟ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಎಲ್ಲ ಯೋಜನೆಗಳ ಬಗ್ಗೆ ಕಾರ್ಮಿಕ ಸಂಘಟನೆಗಳು ಕಾರ್ಮಿಕರಿಗೆ ಅರಿವು ಮೂಡಿಸಿ, ಅವುಗಳ ಪ್ರಯೋಜನ ಪ್ರತಿಯೊಬ್ಬ ಕಾರ್ಮಿಕರಿಗೆ ದೊರಕಿಸಬೇಕು ಎಂದರು.

ಕಾರ್ಮಿಕರನ್ನು ಕಂಪನಿಗಳು ಮತ್ತು ಮಾಲೀಕರು ಶೋಷಣೆಗೆ ಒಳಪಡಿಸದೇ ಅವರಿಗೆ ಸೇವಾ ಭದ್ರತೆ, ನ್ಯಾಯಯುತ ವೇತನ ಮತ್ತು ಭತ್ಯೆಗಳನ್ನು ಸಕಾಲದಲ್ಲಿ ನೀಡಿ, ಕೆಲಸ ನಿರ್ವಹಿಸುವ ಸ್ಥಳದಲ್ಲಿ ಉತ್ತಮ ಔದ್ಯೋಗಿಕ ವಾತಾವರಣ ನಿರ್ಮಿಸಬೇಕು. ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಪೊಲೀಸ್ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 112ಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಿದಲ್ಲಿ ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಮಾತನಾಡಿ, ರೈತರಂತೆ ಕಾರ್ಮಿಕರೂ ದೇಶದ ಬೆನ್ನೆಲುಬು ಆಗಿದ್ದು, ಯಾವುದೇ ಯೋಜನೆ ಯಶಸ್ವಿಯಾಗಿ ಕಾರ್ಯಗತವಾಗಬೇಕಾದಲ್ಲಿ ಕಾರ್ಮಿಕರು ಅತ್ಯಂತ ಅವಶ್ಯಕವಾಗಿದ್ದಾರೆ. ಕಾರ್ಮಿಕರು ತಮಗಾಗಿ ಇರುವ ಯೋಜನೆಗಳು ಮತ್ತು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಲ್ಲಿ ಸುರಕ್ಷಿತವಾಗಿ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ. ತಮ್ಮ ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿ ಮತ್ತು ಬಾಲ್ಯ ವಿವಾಹ ಪದ್ಧತಿಗೆ ಒಳಗಾಗದಂತೆ ಎಚ್ಚರವಹಿಸಿ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ತಮ್ಮ ಹಕ್ಕು ಮತ್ತು ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾರ್ಮಿಕರ ಭವಿಷ್ಯ ನಿಧಿ ಅಧಿಕಾರಿ ಕುಮಾರ ಮಾತನಾಡಿ, ಕಾರ್ಮಿಕರ ಭವಿಷ್ಯ ನಿಧಿ ಯೋಜನೆಯ ಪ್ರಯೋಜನಗಳನ್ನು ವಿವರಿಸಿ, ಕಾರ್ಮಿಕರು ತಪ್ಪದೇ ಇ.ಪಿ.ಎಫ್. ಮಾಡಿಸಿಕೊಳ್ಳುವಂತೆ ಹಾಗೂ ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ಸಂಪರ್ಕಿಸುವಂತೆ ತಿಳಿಸಿದರು.

ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ವಿವಿಧ ಸೌಲಭ್ಯಗಳನ್ನು ಹಾಗೂ ಕಿಟ್‌ಗಳನ್ನು ವಿತರಿಸಲಾಯಿತು. ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲಾಯಿತು.

ಪೌರಾಯುಕ್ತ ಜಗದೀಶ್ ಹುಲಗೆಜ್ಜಿ, ಸಂಪನ್ಮೂಲ ವ್ಯಕ್ತಿ ಪದ್ಮಾ ತಾಂಡೇಲ್, ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಇದ್ದರು.