ಸಾರಾಂಶ
ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಮರವೂರು ಸೇತುವೆಯಿಂದ ಮರಕಡ ನಡುವಿನ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ
ಮಂಗಳೂರು: ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಮರವೂರು ಸೇತುವೆಯಿಂದ ಮರಕಡ ನಡುವಿನ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವುದಕ್ಕೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಪತ್ರ ಬರೆದಿದ್ದಾರೆ.
ಮಂಗಳೂರು ನಗರದಿಂದ ಏರ್ ಪೋರ್ಟ್‌ಗೆ ಸಂಪರ್ಕಿಸುವ ಮುಖ್ಯರಸ್ತೆಯು ಮರಕಡದವರೆಗೆ ಈಗಾಗಲೇ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಮರವೂರು ಸೇತುವೆ ಮತ್ತು ಮರಕಡ ನಡುವಿನ ರಸ್ತೆ ಬಹಳ ಕಿರಿದಾಗಿದ್ದು ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಅಡ್ಡಿಯುಂಟು ಮಾಡುತ್ತಿದೆ. ಅಲ್ಲದೆ ರಸ್ತೆಯೂ ಕಳಪೆ ಗುಣಮಟ್ಟದಿಂದ ಕೂಡಿದ್ದು ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.
ಹೀಗಾಗಿ ಕಿರಿದಾದ ಹಾಗೂ ಹದಗೆಟ್ಟಿರುವ ರಸ್ತೆಯಿಂದಾಗಿ ಏರ್‌ಪೋರ್ಟ್ ಪ್ರಯಾಣಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದುದೆ. ಆದಷ್ಟು ಬೇಗ ಮರವೂರು ಸೇತುವೆ ಹಾಗೂ ಮರಕಡ ನಡುವಿನ ರಸ್ತೆ ಚತುಷ್ಪಥವಾಗಿ ಪರಿವರ್ತಿಸುವುದಕ್ಕೆ ಅಗತ್ಯ ಕೈಗೊಳ್ಳಬೇಕು ಎಂದು ಕ್ಯಾ. ಚೌಟ ಮನವಿ ಮಾಡಿದ್ದಾರೆ.
ಈ ರಸ್ತೆಯ ಶಾಶ್ವತ ಅಭಿವೃದ್ಧಿ ಮತ್ತು ಕಾಂಕ್ರಿಟೀಕರಣ ಕಾರ್ಯವನ್ನು ಕೈಗೊಳ್ಳುವವರೆಗೂ, ಈ ರಸ್ತೆಯಲ್ಲಿರುವ ಹೊಂಡ ಮುಚ್ಚಿಸಿ ರಸ್ತೆ ಮೂಲಭೂತ ನಿರ್ವಹಣೆಗಾಗಿ ತುರ್ತು ಕ್ರಮಗಳು ಕೈಗೊಳ್ಳಬೇಕು ಎಂದು ಸಚಿವರಿಗೆ ಬರೆದಿರುವ ಪತ್ರದಲ್ಲಿ ಸಂಸದರು ಆಗ್ರಹಿಸಿದ್ದಾರೆ.