ಶತಮಾನದ ಕೆರೆಗೆ ಜೀವ ಕಳೆ

| Published : Dec 11 2023, 01:15 AM IST

ಸಾರಾಂಶ

ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂಪಿಸಿರುವ "ಅಮೃತ ಸರೋವರ " ಅಭಿಯಾನ ಇಂದು ಫಲ ನೀಡಿದ್ದು, ಈ ಬರಗಾಲದಲ್ಲಿ ರೈತರಿಗೆ ಆಸರೆಯಾಗಿದೆ.ಈ ಅಭಿಯಾನದಿಂದ ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಶತಮಾನದ ಕೆರೆಗೆ ಜೀವ ಕಳೆ ಬಂದಿದೆ. ಬರಗಾಲದ ಈ ಸಂದರ್ಭದಲ್ಲಿ ನೀರಿನ ಬವಣೆ ನೀಗಿಸಿದೆ. ೨೦೨೨-೨೩ನೇ ಸಾಲಿನಲ್ಲಿ ಕೈಗೊಂಡ ಈ ಕಾಮಗಾರಿಗೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಜನತೆ ಕೈ ಜೋಡಿಸಿದ್ದರು.

ಸತೀಶ ಸಿ.ಎಸ್.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂಪಿಸಿರುವ "ಅಮೃತ ಸರೋವರ " ಅಭಿಯಾನ ಇಂದು ಫಲ ನೀಡಿದ್ದು, ಈ ಬರಗಾಲದಲ್ಲಿ ರೈತರಿಗೆ ಆಸರೆಯಾಗಿದೆ.

ಈ ಅಭಿಯಾನದಿಂದ ತಾಲೂಕಿನ ಶಿರಗಂಬಿ ಗ್ರಾಮದಲ್ಲಿ ಶತಮಾನದ ಕೆರೆಗೆ ಜೀವ ಕಳೆ ಬಂದಿದೆ. ಬರಗಾಲದ ಈ ಸಂದರ್ಭದಲ್ಲಿ ನೀರಿನ ಬವಣೆ ನೀಗಿಸಿದೆ. ೨೦೨೨-೨೩ನೇ ಸಾಲಿನಲ್ಲಿ ಕೈಗೊಂಡ ಈ ಕಾಮಗಾರಿಗೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಜನತೆ ಕೈ ಜೋಡಿಸಿದ್ದರು.

ಬತ್ತಿ ಬರಿದಾಗಿದ್ದ ಕೆರೆ:

ಶತಮಾನದ ಇತಿಹಾಸ ಹೊಂದಿರುವ ಈ ಕೆರೆ ಒಂದು ಕಾಲಕ್ಕೆ ಅದೆಷ್ಟೋ ಜೀವ ಸಂಕುಲಕ್ಕೆ ನೀರುಣಿಸಿದೆ. ಆದರೆ ಇತ್ತೀಚಿನ ಹಲವು ದಶಕಗಳಿಂದ ನಿರ್ಲಕ್ಷಕ್ಕೆ ಒಳಗಾಗಿತ್ತು. ಕೆರೆಯಲ್ಲಿ ಹೂಳು ತುಂಬಿ, ಬೃಹದಾಕಾರದ ಗಿಡ ಗಂಟಿಗಳು ಬೆಳೆದು ದಟ್ಟಾರಣ್ಯದಂತೆ ಕಾಣುತ್ತಿತ್ತು. ಜತೆಗೆ ಈ ಪ್ರದೇಶವು ಅನೈತಿಕ ಚಟುವಟಿಕೆಯ ತಾಣವಾಗಿತ್ತು. ಗ್ರಾಮದಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಈ ಪ್ರದೇಶದ ಸುತ್ತಮುತ್ತಲಿನ ಜನರು, ರೈತರು ಆಡಳಿತ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದರು. ಅಲ್ಲದೆ ರೈತರು ತಮ್ಮ ಕೊಳವೆ ಬಾವಿಗಳಿಗೆ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಜನ-ಜಾನುವಾರುಗಳಿಗೆ ನೀರಿಗಾಗಿ ಮತ್ತೊಂದು ಪ್ರದೇಶಕ್ಕೆ ಹೋಗುವ ಅನಿವಾರ್ಯತೆಯಿತ್ತು. ಗ್ರಾಮದ ಮಧ್ಯ ಕೆರೆ ಇದ್ದರೂ ಪ್ರಯೋಜನಕ್ಕೆ ಬಾರದಂತಾಗಿತ್ತು, ಇಂತಹದೊಂದು ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದ್ದು ಅಮೃತ ಸರೋವರ ಕಾಮಗಾರಿ.

ಬತ್ತಿದ ಕೆರೆಗೆ ಜೀವಕಳೆ:

ಅಮೃತ ಸರೋವರ ಕಾಮಗಾರಿ ಕೈಗೊಂಡ ನಂತರದಲ್ಲಿ ಮೊದಲ ಆದ್ಯತೆಯಾಗಿ ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು, ವಾಲ್‌ಗಳನ್ನು ಕಟ್ಟಲಾಯಿತು. ಕಲ್ಲು ಪಿಚ್ಚಿಂಗ್ ಮೂಲಕ ಕೆರೆಯ ದಡವನ್ನು ಭದ್ರಪಡಿಸಲಾಯಿತು. ಕೆರೆ ಏರಿ, ರಸ್ತೆ ದುರಸ್ತಿಯೊಂದಿಗೆ, ಗಿಡ ನೆಡಲಾಯಿತು. ಇದೀಗ ತುಂಗಾ ಮೇಲ್ದಂಡೆ ಕಾಲುವೆ ಮೂಲಕ ಕೆರೆಗೆ ನೀರು ಹರಿಸಿ, ಭರ್ತಿ ಮಾಡಲಾಗಿದೆ. ಇದರಿಂದ ಪಾಳು ಬಿದ್ದು, ಹಾಳು ಕೊಂಪೆಯಾಗಿದ್ದ ಈ ಸ್ಥಳ ಇದೀಗ ಅತ್ಯಾಕರ್ಷಣೀಯ ಸ್ಥಳವಾಗಿದೆ.

ನೀಗಿತು ನೀರಿನ ಬವಣೆ:

ಎರಡುವರೆ ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಕೆರೆ ೧.೫೧ ಮಿಲಿಯನ್ ಲೀಟರ್‌ ನೀರಿನ ಸಂಗ್ರಹದ ಸಾಮರ್ಥ್ಯ ಹೊಂದಿದೆ. ಇದರಿಂದ ಸುತ್ತಲಿನ ಗ್ರಾಮಗಳ ನೀರಿನ ಬವಣೆ ನೀಗಲಿದೆ. ಕೆರೆಯ ಸುತ್ತ ಸುಮಾರು 300 ಎಕರೆಗೂ ಹೆಚ್ಚು ಕೃಷಿ ಭೂಮಿಯಿದ್ದು, ಇಲ್ಲಿನ ಕೊಳವೆ ಬಾವಿಗಳಲ್ಲಿ ಭರಪೂರ ನೀರು ಹರಿಯುತ್ತಿದೆ. ಬರಗಾಲದ ಸಂದರ್ಭದಲ್ಲೂ ಎಂದಿನಂತೆಯೇ ನೀರು ಹರಿದು ಬರುತ್ತಿರುವುದರಿಂದ ರೈತರು ಬತ್ತ, ಮೆಕ್ಕೆಜೋಳ ಬೆಳೆದು, ತಮ್ಮ ಆದಾಯ ದ್ವಿಗುಣಗೊಳಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಜಲ ಸಂರಕ್ಷಣೆಯ ಅಮೃತ ಸರೋವರ ಕಾಮಗಾರಿ ಇಂದು ಅಮೃತ ಫಲ ನೀಡಿದೆ. ಬರಗಾಲದ ಈ ಸನ್ನಿವೇಶದಲ್ಲಿ ನೀರಿನ ಬವಣೆ ನೀಗಿಸುವ ಮೂಲಕ ಸರ್ಕಾರದ ದೂರದೃಷ್ಟಿ ಯೋಜನೆಯ ಸಾಕಾರಕ್ಕೆ ಸಾಕ್ಷಿಯಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಜಲ ಮೂಲಗಳ ಸಂರಕ್ಷಣೆಗೆ ಹಲವು ಬಗೆಯ ಕಾಮಗಾರಿ ಕೈಗೊಳ್ಳಲಾಗಿದೆ. ಅಮೃತ ಮಹೋತ್ಸವದ ಸವಿನೆನಪಿಗಾಗಿ ನರೇಗಾ ಯೋಜನೆಯಡಿ ಅಮೃತ ಸರೋವರದಡಿ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಇಡೀ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎನ್ನುತ್ತಾರೆ ತಾಪಂ ಇಒ ಟಿ.ಆರ್. ಮಲ್ಲಾಡದ.

ಈ ಮೊದಲು ಕೆರೆ ಗಬ್ಬು ನಾರುತ್ತಿತ್ತು. ಉದ್ಯೋಗ ಖಾತ್ರಿ ಯೋಜನೆ ಅಡಿ ಅಮೃತ ಸರೋವರ ಯೋಜನೆ ಅಡಿ ಕೆರೆ ಅಭಿವೃದ್ಧಿಪಡಿಸಲಾಗಿದ್ದು, ಇದರಿಂದಾಗಿ ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಸುತ್ತಮುತ್ತಲಿನ ರೈತರಿಗೆ ಹಾಗೂ ದನ-ಕರುಗಳಿಗೆ ಉಪಯುಕ್ತವಾಗುತ್ತಿದೆ ಎನ್ನುತ್ತಾರೆ ಶಿರಗಂಬಿ ಗ್ರಾಪಂ ಅಧ್ಯಕ್ಷೆ ಗೀತಾ ಗೌಡರ.