ಲಿಂಗದೀಕ್ಷೆ ಮೋಕ್ಷಕ್ಕೆ ಮಹಾದ್ವಾರ

| Published : Aug 31 2024, 01:39 AM IST

ಸಾರಾಂಶ

ವೀರಶೈವ ಲಿಂಗಾಯತ ಧರ್ಮದಲ್ಲಿ ಗುರುವು ಶಿಷ್ಯನಿಗೆ ದಯಪಾಲಿಸುವ ಲಿಂಗದೀಕ್ಷೆಯನ್ನು ಯಾವುದೇ ಜಾತಿ ಭೇದವಿಲ್ಲದೇ ಸರ್ವರೂ ಪಡೆದುಕೊಳ್ಳಲು ಮುಕ್ತ ಅವಕಾಶವಿದ್ದು, ಮೋಕ್ಷ ಮಾರ್ಗದಲ್ಲಿ ಸಾಗಲು ಇದುವೇ ಮೊದಲ ಅಡಿಪಾಯ ಆಗಿರುವುದರಿಂದ ಇದು ಮೋಕ್ಷಕ್ಕೆ ಮಹಾದ್ವಾರವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವೀರಶೈವ ಲಿಂಗಾಯತ ಧರ್ಮದಲ್ಲಿ ಗುರುವು ಶಿಷ್ಯನಿಗೆ ದಯಪಾಲಿಸುವ ಲಿಂಗದೀಕ್ಷೆಯನ್ನು ಯಾವುದೇ ಜಾತಿ ಭೇದವಿಲ್ಲದೇ ಸರ್ವರೂ ಪಡೆದುಕೊಳ್ಳಲು ಮುಕ್ತ ಅವಕಾಶವಿದ್ದು, ಮೋಕ್ಷ ಮಾರ್ಗದಲ್ಲಿ ಸಾಗಲು ಇದುವೇ ಮೊದಲ ಅಡಿಪಾಯ ಆಗಿರುವುದರಿಂದ ಇದು ಮೋಕ್ಷಕ್ಕೆ ಮಹಾದ್ವಾರವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.

ಶ್ರೀಶೈಲಂನಲ್ಲಿರುವ ಶ್ರೀಶೈಲ ಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಜರುಗಿದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬುವುದಾಗಿ ನಾಲ್ಕು ವರ್ಣಗಳು ಉಂಟು ಬ್ರಹ್ಮಚರ್ಯ ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂಬುವುದಾಗಿ ನಾಲ್ಕು ಆಶ್ರಮಗಳುಂಟು. ಸ್ತ್ರೀ ಪುರುಷ ಮತ್ತು ನಪುಂಸಕ ಎಂಬುವುದಾಗಿ 3 ಲಿಂಗಗಳು ಉಂಟು. ಇವುಗಳಲ್ಲಿ ಯಾವುದೇ ಜಾತಿ ವರ್ಗ ವರ್ಣದವರಿದ್ದರೂ ಶಿವನಲ್ಲಿ, ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆಯುಳ್ಳವನಾಗಿದ್ದರೆ, ಗುರುವಿನಿಂದ ದೀಕ್ಷೆಯನ್ನು ಪಡೆದು ಲಿಂಗಧಾರಣೆ ಮಾಡಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಆದ್ದರಿಂದ ಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹಾಗಿರದೇ ಶಿವಜ್ಞಾನದ ಮತ್ತು ಶಿವಧರ್ಮದ ಆಚರಣೆಗಳ ಸಂಕೇತವಾಗಿದೆ. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ಪ್ರತಿನಿತ್ಯ ತಪ್ಪದೆ ಪೂಜಿಸುವವರೆಲ್ಲರೂ ವೀರಶೈವ ಲಿಂಗಾಯಿತರು. ಲಿಂಗಧಾರಿಗಳಾದವರೆಲ್ಲರೂ ಒಂದೇ ತೆರನಾದ ಧಾರ್ಮಿಕ ಆಚರಣೆ ಹೊಂದಿದವರಾಗಿರುವುದರಿಂದ ಅವರಲ್ಲಿ ಯಾವುದೇ ರೀತಿಯ ಭೇದಭಾವವನ್ನು ಮಾಡಬಾರದು ಎಂದು ತಿಳಿಸಿದರು.ಮಾಡುವ ಪೂಜೆ ಫಲಪ್ರದವಾಗಬೇಕಾದರೇ ಪರೋಪಕಾರ ಮುಂತಾದ ಲೋಕೊತ್ತರ ಗುಣಗಳನ್ನು ಅಳವಡಿಸಿಕೊಂಡಿರಬೇಕು. ಪ್ರತಿನಿತ್ಯ ಪೂಜೆ ಮಾಡಿ ಮನದಲ್ಲಿ ದುರ್ಗುಣ, ದುರಾಚಾರಗಳನ್ನು ರೂಢಿಸಿಕೊಂಡಿದ್ದರೇ ಆ ಪೂಜೆ ಪ್ರಯೋಜನಕ್ಕೆ ಬರಲಾರದು. ರಾವಣ ಮಹಾ ಶಿವಭಕ್ತನಾಗಿದ್ದರೂ ಮಹಾ ಶಕ್ತಿವಂತನಾಗಿದ್ದರೂ ಲೋಕಕಂಟಕವಾದ ಕುಕೃತ್ಯಗಳಲ್ಲಿ ತೊಡಗಿಕೊಂಡಿರುವ ಕಾರಣ ಕೊನೆಗೆ ಅವನತಿ ಹೊಂದಬೇಕಾಯಿತು. ಬದುಕು ಸಾಗಬೇಕಾದರೇ ಪ್ರೀತಿ ಎಷ್ಟು ಮುಖ್ಯವೋ, ನಾವು ಉನ್ನತಿ ಪಡೆದುಕೊಳ್ಳಬೇಕಾದರೇ, ನೀತಿ ಅಷ್ಟೇ ಮುಖ್ಯವಾದುದು ಎಂದರು.ಮನುಷ್ಯನಿಗೆ ಅನಾದಿಕಾಲದಿಂದ ಆಣವ, ಮಾಯಿಯ ಮತ್ತು ಕಾರ್ಮಿಕ ಎಂಬ 3 ಪ್ರಕಾರದ ಮಲಗಳು ಆವರಿಸಿರುತ್ತವೆ. ಈ ಮಲಗಳೇ ಮನುಷ್ಯನ ಸಾಂಸಾರಿಕ ಎಲ್ಲ ದುಃಖಗಳಿಗೆ ಮತ್ತು ಭವಬಂಧನಕ್ಕೆ ಕಾರಣವಾಗಿರುತ್ತವೆ. ಶ್ರೀಗುರುವು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡುವ ಸಂದರ್ಭದಲ್ಲಿ ವೇದದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ದಯಪಾಲಿಸುವ ಮೂಲಕ ಆಣವಾದಿ ಮಲತ್ರಯಗಳನ್ನು ತಿರೋಹಿತಗೊಳಿಸುತ್ತಾನೆ. ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದ ಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ಅದನ್ನು ತಪ್ಪದೇ ಪೂಜಿಸಬೇಕೆಂದು ಆದೇಶಿಸುತ್ತಾನೆ. ಸದಾಚಾರ ಸದ್ವಿಚಾರ ಸಂಪನ್ನನಾಗಿ ನಿಷ್ಠೆಯಿಂದ ಲಿಂಗಪೂಜಾ ಮಹಾವೃತವನ್ನು ಪರಿಪಾಲಿಸುವ ವ್ಯಕ್ತಿಯು ಸುಲಭವಾಗಿ ಮೋಕ್ಷವನ್ನು ಪಡಿಯುತ್ತಾನೆ ಎಂಬುವುದಾಗಿ ವಿವರಿಸಿದರು.

ಈ ಸಂದರ್ಭದಲ್ಲಿ ಗುರುಗುಂಟದ ಷ.ಬ್ರ.ಸದಾನಂದ ಶಿವಾಚಾರ್ಯ ಸ್ವಾಮಿಗಳು ಎಲ್ಲ ದೀಕ್ಷಾರ್ಥಿಗಳಿಗೆ ಲಿಂಗ ಮತ್ತು ಮಂತ್ರೋಪದೇಶವನ್ನು ನೀಡಿದರು. ವಿಜಯಪುರದ ಸಿದ್ದಲಿಂಗ ಸ್ವಾಮೀಜಿಯವರು ಉಪಸ್ಥಿತರಿದ್ದರು. ದೇವಸ್ಥಾನದ ಉಪಪ್ರಧಾನ ಅರ್ಚಕ ಶಿವಶಂಕರ ಶಾಸ್ತ್ರಿಗಳು ಮಂತ್ರ, ವಿಭೂತಿ, ಲಿಂಗ, ರುದ್ರಾಕ್ಷಗಳ ಮಹಿಮೆಯನ್ನು ತಿಳಿಸಿದರು. ದೀಕ್ಷಾ ಕಾರ್ಯಕ್ರಮದ ಪೌರೋಹಿತ್ಯವನ್ನು ನೆರವೇರಿಸಿದ ಶ್ರೀಶೈಲದ ವೀರಶೈವ ಗುರುಕುಲದ ಪ್ರಾಚಾರ್ಯ ಮಲ್ಲಿಕಾರ್ಜುನ ಶಾಸ್ತ್ರಿಗಳು ಜಪ ಹಾಗೂ ಲಿಂಗಪೂಜೆ ಮಾಡುವ ವಿಧಾನವನ್ನು ತಿಳಿಸಿದರು. ಶ್ರೀಪೀಠದ ಮುಖ್ಯ ವ್ಯವಸ್ಥಾಪಕ ಎಂ.ಬಿ.ಮಂಜುನಾಥ ಉಪಸ್ಥಿತರಿದ್ದರು.

ನೂರಾರು ಜಂಗಮ ವಟುಗಳು ಅಯ್ಯಾಚಾರವನ್ನು ಮತ್ತು ಅನೇಕ ಸದ್ಭಕ್ತರು ಲಿಂಗದೀಕ್ಷೆಯನ್ನು ಪಡೆದುಕೊಂಡರು. ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ ನಿರೂಪಿಸಿದರು.ಪಂಚಪೀಠಗಳು ಸನಾತನ ಕಾಲದಿಂದಲೂ ಯಾವುದೇ ತಾರತಮ್ಯವಿಲ್ಲದೇ ಸರ್ವ ಜನರಿಗೂ ಧರ್ಮದ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ನೈತಿಕ ಮಾರ್ಗದರ್ಶನವನ್ನು ದಯಪಾಲಿಸುತ್ತ ಬಂದಿವೆ. ಈ ವಿಷಯದಲ್ಲಿ ಬಸವಾದಿ ಶಿವಶರಣರ ಪಾತ್ರವು ಕೂಡ ಅತ್ಯಂತ ಮಹತ್ವಪೂರ್ಣವಾದುದು. ಕಾರಣ ಸನಾತನ ಆಚಾರ್ಯ ಪರಂಪರೆ ಮತ್ತು ಶರಣ ಪರಂಪರೆಯನ್ನು ಸಮಾನ ಗೌರವದಿಂದ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು.

-ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಜಗದ್ಗುರು.